ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಕಳಸಾರೋಹಣ ಕಾರ್ಯಕ್ರಮ ಗುರುವಾರ ನಡೆಯಿತು.
ಈ ನಿಮಿತ್ತ ಶ್ರೀ ಸಾಯಿಬಾಬಾರ ಭಾವಚಿತ್ರ, ಕಳಸದ ಭವ್ಯ ಮೆರವಣಿಗೆ ಪರಪ್ಪ ಖೇತಗೌಡರ ಅವರ ನಿವಾಸದಿಂದ ಸಹಕಾರಿ ಧುರೀಣ ಪ್ರತಾಪರಾವ ಪಾಟೀಲ್, ಶಿವರಾಜ್ ಪಾಟೀಲ್ ಅವರ ಸಮ್ಮುಖದಲ್ಲಿ ನಡೆಸಲಾಯಿತು.
ಮೆರವಣಿಗೆಯಲ್ಲಿ ಬೆಳ್ಳಿ ರಥದಲ್ಲಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಆಸೀನರಾಗಿದ್ದರು. ಮೆರವಣಿಗೆ ಆರತಿ ಪೂರ್ಣಕುಂಭಗಳು, ವಿದ್ಯಾರ್ಥಿಗಳಿಂದ ಪರೇಡ್ ಮತ್ತು ವಿವಿಧ ಮಹನೀಯರ ವೇಷಭೂಷಣಗಳೊಂದಿಗೆ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣ ತಲುಪಿತು.
ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ರಿಬ್ಬನ್ ಕತ್ತರಿಸಿ ನೂತನ ಮಂದಿರ ಉದ್ಘಾಟಿಸಿ, ಪ್ರತಾಪರಾವ್ ಪಾಟೀಲ ಅವರೊಂದಿಗೆ ಪುಷ್ಪವೃಷ್ಟಿ ಮಾಡಿ ಕಳಸಾರೋಹಣ ನೆರವೇರಿಸಿದರು. ನಂತರ ಮಾಧವಾನಂದ ಸಭಾಭವನದಲ್ಲಿ ಸಾಧಕರಿಗೆ ಸತ್ಕಾರ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಂಜಯ ಕುಲಿಗೋಡ ಮಾತನಾಡಿ, ಜಗತ್ ಪ್ರಸಿದ್ಧ ಶ್ರೀ ಶಿರಡಿ ಸಾಯಿಬಾಬಾ ಮಂದಿರವನ್ನು ಇಂದಿನ ಮಕ್ಕಳಿಗೆ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಮುಗಳಖೋಡ ಪಟ್ಟಣದಲ್ಲಿ ನಿರ್ಮಿಸಲಾಗಿದೆ. ಸಾಯಿಬಾಬಾ ಅವರು ಜಾತ್ಯತೀತರಾಗಿದ್ದರು ಅವರು ಸರ್ವಧರ್ಮಗಳ ಸಮನ್ವಯತೆಯ ಪ್ರತೀಕ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕತ್ತರಿಯ ಗುಣ ಬೇರೆಬೇರೆಯಾಗಿ ಮಾಡುವುದು ಮತ್ತು ಸೂಜಿಯ ಗುಣ ಬೇರೆಯಾಗಿರುವುದನ್ನು ಜೋಡಿಸುವುದು ಎಂಬ ದೃಷ್ಟಾಂತದೊಂದಿಗೆ ಮನುಷ್ಯನ ಮನಸ್ಸು ಶುದ್ಧವಾಗಿದ್ದರೆ ಯಾವ ಕೆಲಸ ಮಾಡಿದರೂ ಅದು ಸಫಲವಾಗುತ್ತದೆ. ಆದ್ದರಿಂದ ನಾವು ಒಳ್ಳೆಯ ಗುಣವನ್ನು ಬೆಳೆಸಿಕೊಂಡು ಮತ್ತೊಬ್ಬರಿಗೆ ಕೆಡಕನ್ನು ಬಯಸದೆ ಒಳ್ಳೆಯ ಮನಸ್ಸಿನಿಂದ ಸತ್ಕಾರ್ಯಗಳನ್ನು ಮಾಡಿದರೆ ದೇವರು ಯಾವಾಗಲೂ ತಮ್ಮ ಬೆನ್ನ ಹಿಂದೆ ಇರುತ್ತಾನೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅವರು ಸಸಿ ವಿತರಿಸಿದರು. ನಂತರ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಸಿ.ಬಿ ಕುಲಿಗೋಡ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜಯ ಕುಲಿಗೋಡ, ವಿವೇಕರಾವ್ ಪಾಟೀಲ, ಶಿವರಾಜ ಪಾಟೀಲ, ಮಾಳಿ ಸಮಾಜದ ಮುಖಂಡ ಬಸವರಾಜ ಬಾಳಿಕಾಯಿ, ಮಾಜಿ ಸೈನಿಕ ರಮೇಶ್ ಅಮ್ಮಣಗಿ, ಗಿರೀಶ ಬುಟಾಳಿ, ಡಾ. ಮಹಾಂತೇಶ ಕುಲಿಗೋಡ, ಡಾ. ಗಣಪತಿ ಕುಲಿಗೋಡ, ಪ್ರಕಾಶ ಆದಪ್ಪಗೋಳ, ಪರಪ್ಪ ಖೇತಗೌಡರ, ಶಿವಪುತ್ರ ಯಡವಣ್ಣವರ, ಕುಮಾರ ಬಾಬನ್ನವರ, ಗೌಡಪ್ಪ ಖೇತಗೌಡರ, ಕೃಷ್ಣರಾವ್ ನಾಯಕ್, ಮಹಾವೀರ ಕುರಾಡೆ, ಮತ್ತಿತರರು ಉಪಸ್ಥಿತರಿದ್ದರು.
ಜೆ.ಪಿ. ಮೊಗವೀರ ನಿರೂಪಿಸಿದರು,. ಪ್ರಾಚಾರ್ಯ ಕೆ.ವಿ. ಬೀಳಗಿ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ಹುಬ್ಬಳ್ಳಿ ವಂದಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಕುರಿತು ಜಿಲ್ಲಾಧಿಕಾರಿ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ