ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಮುಕುತ್ ಸಿಂಗ್, ಶುಗರ್ಪಾಲ್, ದೀನಾನಾಥ್, ಬ್ರಿಜೇಶ್, ಶಿಶುಪಾಲ್, ಬಾಬು ಸಿಂಗ್, ಭಗವಾನ್ ಸಿಂಗ್ ಗುರುತಿಸಲಾಗಿದ್ದು, ಇನ್ನೂ ಮೂವರ ಹೆಸರು ತಿಳಿದುಬಂದಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ಬ್ರೆಡ್ ಕಂಪನಿಯಲ್ಲಿ ಕೆಲಸ ಮಾಡುವ 35 ಕ್ಕೂ ಹೆಚ್ಚು ಕಾರ್ಮಿಕರು ರಕ್ಷಾಬಂಧನ ಹಬ್ಬವನ್ನು ಆಚರಿಸಲು ಟೆಂಪೋದಲ್ಲಿ ಗಾಜಿಯಾಬಾದ್‌ನಿಂದ ಅಲಿಗಢ ಜಿಲ್ಲೆಯ ಅಲಿ ತಹಸಿಲ್‌ನ ರಾಯ್‌ಪುರಕ್ಕೆ ಹೋಗುತ್ತಿದ್ದರು. ಸೇಲಂಪುರ ಠಾಣೆ ತಲುಪುತ್ತಿದ್ದಂತೆಯೇ ವೇಗವಾಗಿ ಬಂದ ಬಸ್ಸು ಟೆಂಪೋಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಗಾಯಗೊಂಡಿದ್ದ ಹಲವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಗಾಯಾಳುಗಳು ಜಿಲ್ಲಾಸ್ಪತ್ರೆ ಮತ್ತು ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿದ್ದಾರೆ.
ಅಪಘಾತದಲ್ಲಿ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗವೂ ಜಖಂಗೊಂಡಿದೆ. ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ