Belagavi NewsBelgaum NewsKannada NewsKarnataka NewsLatest

*ಆ. 24, 25 ರಂದು ಕನ್ನಡ ವೈದ್ಯ ಬರಹಗಾರರ ಐದನೆಯ ರಾಜ್ಯ ಸಮ್ಮೇಳನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿ ವತಿಯಿಂದ ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನ 2024 ನ್ನು ನಗರದ  ಕೆ.ಎಲ್.ಇ. ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಕನ್ನಡ ಬಳಗ ಹಾಗೂ ಭಾರತೀಯ ವೈದ್ಯಕೀಯ ಸಂಘ, ಬೆಳಗಾವಿ ಶಾಖೆಯ ಸಹಯೋಗದೊಂದಿಗೆ ಬೆಳಗಾವಿಯ ಜೆಎನ್ ಎಂಸಿಯಲ್ಲಿ ಅಗಸ್ಟ್ 24 ಮತ್ತು 25 ರಂದು ಆಯೋಜಿಸಲಾಗಿದೆ.

ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿ. 24 ಆಗಷ್ಟ 2024 ರಂದು ಮುಂಜಾನೆ 10 ಗಂಟೆಗೆ, ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ಹಿರಿಯ ವೈದ್ಯ ಸಾಹಿತಿಗಳಾದ ಡಾ. ನಾ. ಸೋಮೇಶ್ವರ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುವರು. ಖ್ಯಾತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 

ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ಶ್ರೀನಿವಾಸ, ನಿಯೋಜಿತ ರಾಜ್ಯಾಧ್ಯಕ್ಷರಾದ ಡಾ. ವಿ.ವಿ.ಚಿನಿವಾಲರ, ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿತಿನ್ ಗಂಗನೆ, ಕುಲಸಚಿವರಾದ ಡಾ. ಎಂ.ಎಸ್. ಗಣಾಚಾರಿ, ಡಾ. ಹೆಚ್.ಬಿ.ರಾಜಶೇಖರ, ಡಾ. ವಿ. ಡಿ.ಪಾಟೀಲ, ಕನ್ನಡ ವೈದ್ಯ ಬರಹಗಾರರ ಸಂಘದ ಅಧ್ಯಕ್ಷೆ ವೀಣಾ ಸುಳ್ಯ, ಗೌರವ ಕಾರ್ಯದರ್ಶಿ ಡಾ.ಕರುಣಾಕರ, ಸಮ್ಮೇಳನದ ಸಂಘಟನಾ ಅಧ್ಯಕ್ಷ ಎನ್ .ಎಸ್. ಮಹಂತ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವೀಂದ್ರ ಅನಗೋಳ, ಸಮ್ಮೇಳನದ ಕಾರ್ಯದರ್ಶಿ ಡಾ.ಅವಿನಾಶ್ ಕವಿ ಉಪಸ್ಥಿತರಿರುವರು. 

1964 ರಲ್ಲಿ ಜೆ.ಎನ್.ಎಂ.ಸಿ ಯಲ್ಲಿ ಪ್ರಾರಂಭವಾದ ಕನ್ನಡ ಬಳಗ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ವೈದ್ಯರಲ್ಲಿ ಕನ್ನಡತನವನ್ನು ಜಾಗೃತವಾಗಿಡಲು ನಿರಂತರ ಕ್ರಿಯಾಶೀಲವಾಗಿದೆ. ಪ್ರಸ್ತುತ ಕನ್ನಡ ಬಳಗವು ತನ್ನ ವಜ್ರ ಮಹೋತ್ಸವ ಸಂಭ್ರಮಾಚರಣೆಯಲ್ಲಿದೆ.

ವೈದ್ಯ ಬಳಗದಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತವಾಗಿಡಲು ಶ್ರಮಿಸುತ್ತಿರುವ ಅನೇಕ ವೈದ್ಯರು, ಭಾರತೀಯ ವೈದ್ಯ ಸಂಘದ ಉಪಸಮಿತಿಯಾದ ಕನ್ನಡ ಬರಹಗಾರರ ಸಮಿತಿಯಡಿಯಲ್ಲಿ ಈಗಾಗಲೇ ನಾಲ್ಕು ಸಮ್ಮೇಳನಗಳನ್ನು ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಶಿವಮೊಗ್ಗ ನಗರಗಳಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಪ್ರಸ್ತುತ ಐದನೇ ಸಮ್ಮೇಳನ ಬೆಳಗಾವಿಯಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button