ಪ್ರಗತಿವಾಹಿನಿ ಸುದ್ದಿ, ಗೋಕಾಕ: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ೮೨೨೯೫ ಕ್ಯೂಸೆಕ್‌ನಿಂದ ೬೯೨೯೫ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ.
ಘಟಪ್ರಭಾ ನದಿಯ ಪ್ರವಾಹಕ್ಕೆ ನಗರದ ಹಳೆ ದನಗಳ ಪೇಠೆ, ಉಪ್ಪಾರ ಓಣಿ, ಭೋಜಗಾರ ಗಲ್ಲಿ, ಕುಂಬಾರ ಗಲ್ಲಿಗಳಲ್ಲಿ ನೀರು ಹರಿದು ಬಂದಿದ್ದು, ಸದ್ಯ ನೀರಿನ ಪ್ರಮಾಣ ಕಡಿಮೆಯಾದಂತೆ ಪ್ರವಾಹ ಪೀಡಿತ ಪ್ರದೇಶದ ಜನರ ಆತಂಕ ಕೊಂಚ ದೂರವಾಗಿದೆ.
ತಾಲೂಕಿನ ಚಿಗಡೊಳ್ಳಿ, ಅಡಿಬಟ್ಟಿ, ಉದಗಟ್ಟಿ ಗ್ರಾಮಗಳು ಜಲದಿಗ್ಬಂಧನದಲ್ಲಿವೆ. ಘಟಪ್ರಭಾ ನದಿ ನೀರು ಗ್ರಾಮಗಳನ್ನು ಸುತ್ತುವರೆದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರವಾಹಕ್ಕೆ ಹೆದರಿ ಜನರು ಗ್ರಾಮ ಖಾಲಿ ಮಾಡಿದ್ದಾರೆ. ಉಳಿದ ಜನರು ಒಬ್ಬಬ್ಬರಾಗಿ ತಮ್ಮ ವಸ್ತುಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಗ್ರಾಮಗಳ ಜನರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಊಟದ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ.
ರಸ್ತೆಯಲ್ಲಿಯೇ ಠಿಕಾಣಿ: ಚಿಗಡೊಳ್ಳಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಗ್ರಾಮದ ಹೊರಗಡೆ ಬಂದಿರುವ ಸಂತ್ರಸ್ಥರು ತಮ್ಮೂರಿಗೆ ಹೋಗುವ ರಸ್ತೆಯಲ್ಲಿ ಠಿಕಾಣೆ ಹೂಡಿದ್ದಾರೆ. ತಮ್ಮೊಂದಿಗೆ ಎತ್ತು, ಹಸು, ಕೋಳಿ, ಆಡುಗಳನ್ನು ತೆಗೆದುಕೊಂಡು ಬಂದಿದ್ದು, ಟ್ಯಾಕ್ಟರ್ ಕೆಳಗಡೆ ಗ್ಯಾಸ್ ಒಲೆ ಹೊತ್ತಿಸಿ ಊಟ ತಯಾರಿಸುತ್ತಿದ್ದಾರೆ.
ನಡುಗಡ್ಡೆಯಾದ ಅಡಿಬಟ್ಟಿ ಗ್ರಾಮ: ಘಟಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಅಡಿಬಟ್ಟಿ ಗ್ರಾಮವೂ ಸಹ ನಡುಗಡ್ಡೆಯಾಗಿದೆ. ನದಿ ನೀರು ನಾಲ್ಕು ದಿಕ್ಕಿನಲ್ಲಿ ಸುತ್ತುವರೆದಿರುವುದರಿಂದ ಗ್ರಾಮ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ನದಿ ನೀರು ಗ್ರಾಮಕ್ಕೆ ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಇಲ್ಲಿನ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ತಾಲೂಕಿನಲ್ಲಿ ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇದನ್ನು ಎದುರಿಸಲು ಗೋಕಾಕ್ ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿದೆ. ಘಟಪ್ರಭಾ ನದಿ ತೀರದಲ್ಲಿ ಕಳೆದ ಬಾರಿಯಷ್ಟು ಪ್ರವಾಹ ಕಾಣಿಸಿಕೊಂಡರೆ ಜನರ ರಕ್ಷಣೆಗೆ ಅಗತ್ಯವಿರುವ ೪ ಬೋಟ್ ಗಳನ್ನು ಹಾಗೂ ಅದಕ್ಕೆ ಬೇಕಾದ ನಾವಿಕರನ್ನ ಕಾರವಾರದಿಂದ ಕರೆಯಿಸಿಕೊಳ್ಳಲಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರವಾಹ ಇನ್ನಷ್ಟು ಏರಿಕೆಯಾದರೆ ಬೋಟ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ ಪ್ರವಾಹದ ಸಂದರ್ಭದಲ್ಲಿ ಮೆಳವಂಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರಿಯಾದ ಬೋಟ್ ವ್ಯವಸ್ಥೆ ಇಲ್ಲದೇ ರಕ್ಷಣಾ ಕಾರ್ಯಾಚರಣೆಗೆ ತೊಂದರೆವುಂಟಾಗಿತ್ತು. ಇದನ್ನು ಮನಗಂಡ ಮೆಳವಂಕಿ ಗ್ರಾಮ ಪಂಚಾಯಿತಿ ಬೋಟ್‌ಗಾಗಿ ಕಳೆದ ಎರಡು ತಿಂಗಳ ಹಿಂದೆ ತಾಲೂಕಾಡಳಿತಕ್ಕೆ ಬೇಡಿಕೆ ಇಟ್ಟಿತ್ತು. ಇದರಿಂದಾಗಿ ಈಗ ಬೋಟ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮ ಕಾಯಲು ನಿಂತ ಯುವಕರು: ಘಟಪ್ರಭಾ ಪ್ರವಾಹದಿಂದ ನಡುಗಡ್ಡೆಯಂತಾದ ಅಡಿಬಟ್ಟಿ ಗ್ರಾಮದಲ್ಲಿ ಗ್ರಾಮಕ್ಕೆ ಕಳ್ಳರು ಬಾರದಂತೆ ಮುಂಜಾಗೃತೆ ವಹಿಸಿ, ನಡುಗಡ್ಡೆಯಲ್ಲಿ ಗ್ರಾಮವನ್ನು ಕಾಯಲು ೯ ಜನ ಯುವಕರು ಮನೆಯೊಂದರ ಮೇಲೆ ಅಡುಗೆ ಮಾಡಿಕೊಂಡು ವಾಸವಿದ್ದಾರೆ. ಪ್ರತಿ ಬಾರಿ ಪ್ರವಾಹ ಬಂದಾಗ ನಡುಗಡ್ಡೆಯಾಗಿ ಮಾರ್ಪಡುವ ಅಡಿಬಟ್ಟಿ ಗ್ರಾಮದಲ್ಲಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ. ಹಿನ್ನೆಲೆಯಲ್ಲಿ ೯ ಜನ ಯುವಕರು ಕಟ್ಟಡದ ಮೇಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ