Kannada NewsKarnataka NewsLatest

ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‌ಸಿಗಳಿಗೆ ರಕ್ಷಾ ಕವಚ ವಾಹನ : ಬಾಲಚಂದ್ರ ಜಾರಕಿಹೊಳಿ

  ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಪಟ್ಟಣದ ಈರಣ್ಣ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್-೧೯ ಟಾಸ್ಕಪೋರ್ಸ ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರದಂತೆ ಇದರಲ್ಲಿ ಭಾಗಿಯಾಗಿರುವ ಎಲ್ಲ ವಾರಿಯರ್ಸ್‌ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಅನುಕೂಲ ಕಲ್ಪಿಸಿಕೊಡಲು ಈಗಾಗಲೇ ಮೂಡಲಗಿ ಮತ್ತು ಕುಲಗೋಡ ಪಿಎಚ್‌ಸಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಎರಡು ಅಂಬ್ಯೂಲೆನ್ಸ್(ರಕ್ಷಾ ಕವಚ ವಾಹನ)ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಅಗತ್ಯವಿರುವ ಅರಭಾವಿ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಏಳು ಹೊಸ ಅಂಬ್ಯೂಲೆನ್ಸ್ ಸೌಲಭ್ಯಗಳನ್ನು ಒದಗಿಸಲಾಗುವುದು. ಒಟ್ಟು ೯ ಅಂಬ್ಯೂಲೆನ್ಸ್‌ಗಳನ್ನು ತಾವೇ ತಮ್ಮ ಶಾಸಕರ ನಿಧಿಯಿಂದ ನೀಡುವುದಾಗಿ ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ತಮ್ಮ ನಿಧಿಯಿಂದ ಒಂದೊಂದು ಅಂಬ್ಯೂಲೆನ್ಸ್‌ಗಳನ್ನು ನಮ್ಮ ಪಿಎಚ್‌ಸಿಗಳಿಗೆ ನೀಡಲು ಒಪ್ಪಿಕೊಂಡಿದ್ದು, ಇದರಿಂದ ಒಟ್ಟು ೧೧ ಅಂಬ್ಯೂಲೆನ್ಸ್‌ಗಳು ಸಾರ್ವಜನಿಕರ ಸೇವೆಗೆ ಮೀಸಲಾಗಲಿವೆ. ತುರ್ತು ಸೇವೆಗೆ ಈ ಅಂಬ್ಯೂಲನ್ಸ್‌ಗಳು ಅನುಕೂಲವಾಗಲಿವೆ. ಅಂಬ್ಯೂನ್ಸ್‌ಗಳ ಪರದಾಟ ಇನ್ನಮುಂದೆ ಜನ ಸಾಮಾನ್ಯರಿಗೆ ತಪ್ಪಲಿದೆ ಎಂದು ಹೇಳಿದರು.
ಕೊರೋನಾ ವ್ಯಾಪಕವಾಗಿ ಹರಡಲು ಇತ್ತಿಚೆಗೆ ನಡೆದಿರುವ ಜಾತ್ರೆ-ಹಬ್ಬ ಹರಿದಿನಗಳು ಮತ್ತು ಮದುವೆಗಳು ಕಾರಣವಾಗಿರಬಹುದು, ಇವುಗಳನ್ನು ಮುಂಚಿತವಾಗಿಯೇ ಹತ್ತಿಕ್ಕಿದ್ದರೆ ಕೊರೋನಾ ಹೆಚ್ಚುತ್ತಿರಲಿಲ್ಲ, ಇನ್ನು ಮುಂದಾದರೂ ಸಾರ್ವಜನಿಕರು ಜಾಗೃತಿಯಿಂದ ಇರುವಂತೆ ಅವರು ಮನವಿ ಮಾಡಿಕೊಂಡರು.
ಕೋವಿಡ್ ಮೂರನೆಯ ಅಲೆ ಇನ್ನೂ ದೃಢಪಟ್ಟಿಲ್ಲ ಆದರೂ ನಾವೆಲ್ಲರೂ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಸರ್ಕಾರ ಹೇಳುವ ಔಷಧಿಗಳನ್ನು ಮಾತ್ರ ಸೋಂಕಿತರಿಗೆ ನೀಡುವುದಾಗಬೇಕು. ಮೂಡಲಗಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಈಗಿರುವ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಮೇಲ್ಧರ್ಜೆಗೆ ಏರಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಕೋವಿಡ್- ೧೯ ನಿರ್ಮೂಲನಗೆಗಾಗಿ ನಾವೆಲ್ಲರೂ ಏಕತೆಯಿಂದ ಹೋರಾಟ ಮಾಡಬೇಕಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕೋವಿಡ್‌ಗಾಗಿಯೇ ಬಳಕೆ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬ್ಯೂಲನ್ಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎನ್‌ಜಿಓ ಮೂಲಕ ಚಾಲಕರನ್ನು ನಿಯೋಜಿಸಿ ಅವರಿಗೆ ವೇತನವನ್ನು ಸಹ ನಿಗದಿ ಮಾಡಲಾಗಿದೆ, ಗೋಕಾಕದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ಲಸಿಕೆ ಹಾಕಿಸಿಕೊಳ್ಳಿ : ಆರೋಗ್ಯ ಸುರಕ್ಷತೆಗಾಗಿ ಪ್ರತಿಯೊಬ್ಬರು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಇದರಿಂದ ಕೆಲವರು ಭಯಭೀತರಾಗುತ್ತಿದ್ದಾರೆ, ಲಸಿಕೆಗೆ ಯಾರೂ ಅಂಜಬೇಡಿ, ಲಸಿಕೆಗಳನ್ನು ಪಡೆದಿರುವವರಿಗೆ ರೋಗನಿರೋಧಕ ಶಕ್ತಿ ವೃದ್ಧಿಯಾಗುವದರಿಂದ ಹೆಚ್ಚಿನ ಅನಾಹುತಗಳು ಸಂಭವಿಸುವುದಿಲ್ಲ, ೧೮ ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ತಮ್ಮ ರಾಜ್ಯಸಭಾ ಸದಸ್ಯರ ನಿಧಿಯಿಂದ ಬೆಟಗೇರಿ ಹಾಗೂ ಅಕ್ಕತಗೆರಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಅಂಬ್ಯೂಲೆನ್ಸ್ ನೀಡಲಾಗುವುದು. ಮೂಡಲಗಿಗೆ ೬೩ಕೆವಿ ಜನರೇಟರ್ ನೀಡಲಾಗುವುದು. ಕೆಲವರು ಲಸಿಕೆ ಕುರಿತಂತೆ ಅಪಪ್ರಚಾರ ನಡೆಸಿದ್ದಾರೆ, ಪ್ರತಿಯೊಬ್ಬರು ಕೊರೋನಾ ಲಸಿಕೆಗಳನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡ ಅವರು, ಚಿಕ್ಕೋಡಿಯಲ್ಲಿ ಈಗಾಗಲೇ ಆರ್‌ಟಿಪಿಸಿಆರ್ ಲ್ಯಾಬ್ ಮಂಜೂರಾತಿ ದೊರಕಿದ್ದು, ಗೋಕಾಕದಲ್ಲಿಯೂ ಈ ಲ್ಯಾಬ್ ಆರಂಭಿಸುವಂತೆ ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಕೊರತೆಯಿರುವ ವೈದ್ಯರನ್ನು ನಿಯೋಜಿಸುವಂತೆ ಸಚಿವ ಡಾ. ಸುಧಾಕರ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಕೊರೋನಾ ಇಳಿಮುಖ ಮಾಡಲಿಕೆ ಎಲ್ಲರೂ ಪ್ರಯತ್ನಿಸೋಣ. ಮೂರನೆಯ ಅಲೆಯ ಬಗ್ಗೆ ಈಗಲೇ ಮುನ್ನಚ್ಚರಿಕೆ ವಹಿಸೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕು ಕೊರೋನಾ ಮುಕ್ತ ಮಾಡಲು ಶ್ರಮೀಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ ಬಾಲಚಂದ್ರ ಅವರು ಜನರ ಒಳಿತಿಗಾಗಿ, ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ಎದ್ದು ಕಾಣುತ್ತಿದೆ. ವೆಂಟಿಲೀಟರ್ ಮತ್ತು ಆಕ್ಷಿಜನ್ ಕೊರತೆ ಅನುಭವಿಸುತ್ತಿವೆ, ಅದರಲ್ಲಿಯೂ ಬಾಲಚಂದ್ರ ಜಾರಕಿಹೊಳಿಯವರು ಶಿಥಿಲಗೊಂಡಿರುವ ಹಳೆಯ ಆಸ್ಪತ್ರೆಯನ್ನು ನವಿಕೃತಗೊಳಿಸಿ, ಸೋಂಕಿತರಿಗೆ ಆಕ್ಷಿಜನ್ ಸೌಲಭ್ಯ ನೀಡಿ ಯಾರೂ ಮಾಡದ ಕೆಲಸವನ್ನು ಮಾಡುತ್ತಿದ್ದಾರೆ. ನಾವೆಲ್ಲರೂ ಆರೋಗ್ಯದ ಕಡೆಗೆ ಗಮನ ಹರಿಸಿ ಆರೋಗ್ಯ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕಾಗಿದೆ. ತಮ್ಮ ಪರಿಷತ್ ನಿಧಿಯಿಂದ ಮೂಡಲಗಿ ತಾಲೂಕಿಗೆ ಅಂಬ್ಯೂಲೆನ್ಸ್ ನೀಡಲಾಗುವುದೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ್ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ ಮಾಹಾತ್, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಹಿರಿಯ ತಜ್ಞವ್ಯೆದ್ಯ ಡಾ. ಆರ್.ಎಸ್. ಬೆಣಚಿನಮರಡಿ, ಗೋಕಾಕ ಸರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್, ಡಾ: ಭಾರತಿ ಕೋಣಿ, ಬಿಇಒ ಅಜೀತ ಮನ್ನಿಕೇರಿ ಮುಂತಾದವರು ಉಪಸ್ಥಿತರಿದ್ದರು.

 ಮೂಡಲಗಿಯಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಮಂಜೂರಾತಿ ಸಿಗಲಿದೆ. ಪುರಸಭೆಯಿಂದ ಠಾಣೆಯ ಹೊಸ ಕಟ್ಟಡಕ್ಕೆ ೧.೦೫ ಏಕರೆ ಜಮೀನು ನೀಡಿದೆ, ಉಳಿದಂತೆ ಮೂಡಲಗಿಯಲ್ಲಿ ಉಪನೋಂದಣಾಧಿಕಾರಿಗಳ ಕಛೇರಿ ಮಂಜೂರಾತಿಗೆ ಸರಕಾರದ ಬಳಿ ಪ್ರಸ್ತಾವಣೆ ಸಲ್ಲಿಕೆಯಾಗಿದೆ, ಕೊರೋನಾ ಹಿನ್ನಲೆಯಲ್ಲಿ ಮಂಜೂರಾತಿಗೆ ವಿಳಂಬವಾಗಿದೆ.
-ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button