Wanted Tailor2
Cancer Hospital 2
Bottom Add. 3

ಯುವತಿಯರ ಫೋಟೋ ಎಡಿಟ್ ಮಾಡಿ ಇನ್ ಸ್ಟ್ರಾಗ್ರಾಂಗೆ ಹಾಕಿದ್ದ ವಿಕೃತಕಾಮಿ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ತಾಲೂಕಿನ ಲೋಕೋಳಿ ಗ್ರಾಮದಲ್ಲಿ ಗ್ರಾಮದ ಮಹಿಳೆಯರು ತಮ್ಮ ಮನೆಯ ಹಿತ್ತಲಲ್ಲಿ ಒಣಗಿಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದು, ಒಳ ಉಡುಪುಗಳನ್ನು ಕತ್ತರಿಸುವುದು, ಒಬ್ಬರ ಮನೆಯ ಉಡುಪುಗಳನ್ನು ಬೇರೊಬ್ಬರ ಮನೆಯ ಆವರಣದಲ್ಲಿ ಎಸೆಯುವುದು, ಗ್ರಾಮದ ಯುವತಿಯರ ಮತ್ತು ಮಹಿಳೆಯರ ಭಾವಚಿತ್ರಗಳಿಗೆ ನಗ್ನ ಮಹಿಳೆಯರ ಚಿತ್ರಗಳನ್ನು ಎಡಿಟ್ ಮಾಡಿ ಇನಸ್ಟ್ರಾಗ್ರಾಂ ಖಾತೆಗೆ ಅಪ್‌ಲೋಡ್ ಮಾಡುವುದು ಸೇರಿದಂತೆ ಗ್ರಾಮದ ಮಹಿಳೆಯರ ಮಾನಭಂಗ ಆಗುವ ಕೃತ್ಯಗಳನ್ನು ಎಸಗಿರುವ ಆರೋಪದಡಿ ಅದೇ ಗ್ರಾಮದ ವಿಕೃತಕಾಮಿಯೋರ್ವನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಲೋಕೋಳಿ ಗ್ರಾಮದ ಮಂಥನ ದಶರಥ ಪಾಟೀಲ (೨೨) ಬಂಧಿತ ಆರೋಪಿ. ಈತ ವಿಕೃತ ಮನಸ್ಸಿನವನಾಗಿದ್ದು, ಈತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಲೋಕೋಳಿ ಗ್ರಾಮದ ಹಲವು ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಘಟನೆಯ ಹಿನ್ನೆಲೆ
ಲೋಕೋಳಿ ಗ್ರಾಮದ ಈತನ ವಿರುದ್ಧ ಗ್ರಾಮದ ಯುವತಿಯರು ಖಾನಾಪುರ ಠಾಣೆಯಲ್ಲಿ ನ.೨ರಂದು ಪ್ರಕರಣ ದಾಖಲಿಸಿದ್ದರು. ಯುವತಿಯರ ದೂರು ಸ್ವೀಕರಿಸಿದ್ದ ಪೊಲೀಸರು ಅದೇ ದಿನ ಯುವಕನ ವಿರುದ್ಧ ಪ್ರಕರಣ ದಾಖಲಿಸಿ ದೂರುದಾರರಿಗೆ ಎಫ್‌ಐಆರ್ ಪ್ರತಿ ನೀಡಿದ್ದರು.

ದೂರು ದಾಖಲಾದ ಬಳಿಕ ಪೊಲೀಸರು ಮಂಥನ ಪಾಟೀಲನ ವಿರುದ್ಧ ಯಾವುದೇ ಕ್ರಮ ಜರುಗಿಸದ ಕಾರಣ ನ.೨ ಮತ್ತು ೩ರಂದು ಮಂಥನ ತನ್ನ ಕೃತ್ಯವನ್ನು ಮುಂದುವರೆಸಿದ್ದು, ಗ್ರಾಮದ ಕೆಲ ಯುವತಿಯರ ಪಾಸ್‌ಪೋರ್ಟ್ ಅಳತೆಯ ಚಿತ್ರಗಳಿಗೆ ಆನ್‌ಲೈನ್‌ನ ನಗ್ನ ಯುವತಿಯರ ದೇಹವನ್ನು ಎಡಿಟ್ ಮಾಡಿ ಅದೇ ಯುವತಿಯರ ಇನಸ್ಟ್ರಾಗ್ರಾಂ ಖಾತೆಗೆ ಕಳಿಸಿದ್ದ. ಇದರಿಂದ ಮತ್ತಷ್ಟು ಉಗ್ರಗೊಂಡ ಗ್ರಾಮದ ಯುವತಿಯರು ಮತ್ತು ಮಹಿಳೆಯರು ಶನಿವಾರ ಮಧ್ಯಾಹ್ನ ಪೊಲೀಸ್ ಠಾಣೆಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಲ ಯುವತಿಯರು “ಮಂಥನ್ ವಿರುದ್ಧ ನ.೨ರಂದು ಪ್ರಕರಣ ದಾಖಲಿಸಿದರೂ ಯುವಕನ ಬಂಧನಕ್ಕೆ ಪೊಲೀಸರು ಪ್ರಯತ್ನ ಪಟ್ಟಿಲ್ಲ. ಇದರಿಂದ ಗ್ರಾಮದಲ್ಲಿ ಮಹಿಳೆಯರು ತಲೆ ಎತ್ತಿ ತಿರುಗಾಡದ ಸನ್ನಿವೇಶ ಉದ್ಭವಿಸಿದೆ. ಖಾನಾಪುರ ಪೊಲೀಸರಿಂದ ಕ್ರಮ ಜರುಗಿಸಲು ಸಾಧ್ಯವಾಗದಿದ್ದರೆ ಎಸ್‌ಪಿ ಕಚೇರಿ ಎದುರು ಕುಳಿತು ಧರಣಿ ನಡೆಸಲಾಗುತ್ತದೆ. ಕೂಡಲೇ ಯುವಕನ ಬಂಧನವಾಗದಿದ್ದರೆ ಪೊಲೀಸ್ ಠಾಣೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಸಿದರು. ಮಹಿಳೆಯರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮಹಿಳೆಯರ ಪ್ರತಿಭಟನೆಯ ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಎಚ್ಚೆತ್ತ ಖಾನಾಪುರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಪ್ರತಿಭಟನೆಯಲ್ಲಿ ಜಯಶ್ರೀ ಪಾಟೀಲ, ಪ್ರಿಯಾ ಪಾಟೀಲ, ಅರ್ಚನಾ ಪಾಟೀಲ, ಅನಿತಾ ಪಾಟೀಲ, ಅನಿತಾ ಮಾನೆ, ಶ್ರೀಮಂತಿ ಪಾಟೀಲ್, ಸುನೀತಾ ಚವ್ಹಾಣ, ನಮ್ರತಾ ಚವಾಣ, ಸಂಗೀತಾ ಪಾಟೀಲ, ಅನಂತ ಪಾಟೀಲ, ತುಕಾರಾಮ ಚವ್ಹಾಣ, ವಿಠ್ಠಲ ಪಾಟೀಲ, ರಾಮಚಂದ್ರ ಪಾಟೀಲ, ಸಂತೋಷ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

Bottom Add3
Bottom Ad 2

You cannot copy content of this page