ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಮಾಜಿಕವಾಗಿ, ರಾಜಕೀಯವಾಗಿ ಎಷ್ಟೇ ಎತ್ತರದ ಸ್ಥಾನಕ್ಕೆ ಏರಿದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಉಪಕಾರ ಮರೆಯಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ನನಗೆ ರಾಜಕೀಯ ಜನ್ಮ ನೀಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರ. ಕಳೆದ 5 ವರ್ವಷಗಳಿಂದ ಕ್ಷೇತ್ರಕ್ಕೆ ನನ್ನಿಂದಾದಷ್ಟು ಕೆಲಸ ಮಾಡಿದ್ದೇನೆ. ಈಗ ಸಚಿವ ಸ್ಥಾನ ಸಿಕ್ಕಿರುವುದರಿಂದ ಇನ್ನಷ್ಟು ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಸಹಾಯವಾಗಿದೆ. ಈ ಸ್ಥಾನ ದೊರಕಲು ಪಕ್ಷದ ವರಿಷ್ಠರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಅಷ್ಟೇ ಮುಖ್ಯವಾಗಿ ಗ್ರಾಮೀಣ ಕ್ಷೇತ್ರದ ಜನರು ಕಾರಣ. ಹಾಗಾಗಿ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ” ಎಂದು ಭಾವುಕರಾಗಿ ಹೇಳಿದರು.
“ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ನೀಡಿದ ಎಲ್ಲ ಆಶ್ವಾಸನೆಗಳನ್ನು ಹಂತಹಂತವಾಗಿ ಈಡೇರಿಸಲಿದೆ. ಈ ಬಗ್ಗೆ ಯಾರಿಗೂ ಗೊಂದಲ, ಅನುಮಾನ ಬೇಡ. ಯೋಜನೆಗಳು ಆರಂಭವಾದ ನಂತರ ಸಮಸ್ಯೆಗಳು ಬರಬಾರದೆನ್ನುವ ಕಾರಣಕ್ಕೆ ಕೆಲ ದಿನ ವಿಳಂಬವಾಗುತ್ತಿದೆ. ಇದಕ್ಕೆ ಯಾವುದೇ ಅಪಾರ್ಥ ಬೇಡ. ಕಾಂಗ್ರೆಸ್ ಎಂದೂ ಕೊಟ್ಟ ಮಾತು ತಪ್ಪುವುದಿಲ್ಲ.” ಎಂದರು.
“ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಮತ್ತಿತರ ಯೋಜನೆಗಳು ಮಹಿಳೆಯರನ್ನು ಸಬಲೀಕರಣದತ್ತ ಕೊಂಡೊಯ್ಯಲಿವೆ. ಮಹಿಳೆಯರಲ್ಲಿ ಶಕ್ತಿ ತುಂಬಬಲೆಂದೇ ಇಂಥ ಯೋಜನೆಗಳನ್ನು ರೂಪಿಸಲಾಗಿದೆ. ಗೃಹ ಲಕ್ಷ್ಮೀ ನನ್ನ ಇಲಾಖೆಗೆ ಸಂಬಂಧಿಸಿರುವುದರಿಂದ ಇದು ಮಹಿಳೆಯರಿಗೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಈ ಯೋಜನೆ ಮೂಲಕ ಮಹಿಳೆಯರ ಮುಖದಲ್ಲಿ ಸಂತಸ ಮೂಡಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ.” ಎಂದರು
“ಮುಂದಿನ ದಿನಗಳಲ್ಲೂ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಜನಕಲ್ಯಾಣಕ್ಕೆ ಜನತೆ ಸಹಕಾರ ಅಗತ್ಯವಾಗಿದೆ.” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಗ್ರಾಮಿಣ ಕ್ಷೇತ್ರದ ಜನತೆ ಹಾಗೂ ನಾವೆಲ್ಲ ಒಂದು ಕುಟುಂಬವಿದ್ದಂತೆ. ನಾವೆಲ್ಲರೂ ಸೇರಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡೋಣ. ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಅವರು ಮಂತ್ರಿಯಾದರೂ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಎಂದಿಗೂ ಬದ್ಧವಾಗಿ ನಡೆಯಲಾಗುವುದು.” ಎಂದರು.
ಈ ವೇಳೆ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು. ಸ್ಥಳೀಯ ಮುಖಂಡರು, ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ