Belagavi NewsBelgaum NewsKannada NewsKarnataka News

ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿರುವ ಬೆಳಗಾವಿ ಪಾಲಿಕೆ ಸದಸ್ಯನ ಮೇಲಿನ ಹಲ್ಲೆ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜೀತ್ ಜವಳಕರ್ ಮೇಲಿನ ಹಲ್ಲೆ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ.

ರಮೇಶ ಪಾಟೀಲ ಎನ್ನುವವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡ್ರಿಸುವ ವಿಷಯದಲ್ಲಿ ಆಕ್ಷೇಪಿಸಿದ ಪಾಲಿಕೆ ಸದಸ್ಯ ಅಭಿಜಿತ್ ಜವಳಕರ್ ಮೇಲೆ 10 ಜನರ ಗುಂಪು ಹಲ್ಲೆ ಮಾಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ರಮೇಶ ಪಾಟೀಲ ಅವರನ್ನು ಬಂಧಿಸಲಾಗಿತ್ತು. ಅಭಿಜೀಜ್ ಜವಳಕರ್ ಆಸ್ಪತ್ರೆಗೆ ದಾಖಲಾಗಿದ್ದರು.

Related Articles

ಜವಳಕರ್ ಮೇಲಿನ ಹಲ್ಲೆ ಖಂಡಿಸಿ ಪಾಲಿಕೆ ಬಿಜೆಪಿ ಸದಸ್ಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ನಂತರ, ರಮೇಶ ಪಾಟೀಲ ಮೇಲೆ ಅಭಿಜಿತ್ ಜವಳಕರ್ ಹಲ್ಲೆ ಮಾಡಿದ್ದಾಗಿ, ಅವರನ್ನೂ ಬಂಧಿಸಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಜೊತೆಗೆ, ರಮೇಶ ಪಾಟೀಲ ಪತ್ನಿ ನೀಡಿದ ದೂರಿನಂತೆ ಅಭಿಜಿತ್ ಜವಳಕರ್ ಅವರನ್ನೂ ಆಸ್ಪತ್ರೆಯಲ್ಲೇ ಬಂಧಿಸಲಾಯಿತು.

ಆದರೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಮೊದಲೇ ಒತ್ತಾಯಪೂರ್ವಕವಾಗಿ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು. ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಅನಿಲ ಬೆನಕೆ, ಸಂಜಯ ಪಾಟೀಲ, ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಸೇರಿದಂತೆ ಹಲವರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರ ರಾಜಕೀಯ ಒತ್ತಡದಿಂದಾಗಿ ಜವಳಕರ್ ಅವರನ್ನು ಬಂಧಿಸಲಾಗಿದೆ ಎಂದು ಅವರು ದೂರಿದರು. ಜೊತೆಗೆ ದೂರು ಸಲ್ಲಿಸಲು ಹೋದ ಸಂದರ್ಭದಲ್ಲಿ ಮೇಯರ್ ಸೇರಿದಂತೆ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಮೇಯರ್ ಸ್ಥಾನಕ್ಕೂ ಅವಮಾನ ಮಾಡಲಾಗಿದೆ ಎಂದೂ ಮುಖಂಡರು ದೂರಿದರು.

ಇದೇ ವೇಳೆ, ಹೊರ ರಾಜ್ಯದ ಪ್ರವಾಸದಲ್ಲಿರುವ ಶಾಸಕ ಅಭಯ ಪಾಟೀಲ, ಬೆಳಗಾವಿ ಬಿಹಾರವಾಗುತ್ತಿದೆ. ಯಾರದ್ದೋ ಒತ್ತಡದ ಮೇಲೆ ಜನಪ್ರತಿನಿಧಿಗಳನ್ನು ಬಂಧಿಸಲಾಗುತ್ತಿದೆ. ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ವಿಡೀಯೋ ಸಂದೇಶ ರವಾನಿಸಿದ್ದರು.

ಆದರೆ, ಬಿಜೆಪಿ ಮುಖಂಡರ ಆರೋಪಗಳನ್ನು ತಳ್ಳಿ ಹಾಕಿದ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ನವೆಂಬರ್ 26ರ ಮಧ್ಯಾಹ್ನ 12 ಗಂಟೆಗೇ ಜವಳಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ನಂತರವೇ ಅವರನ್ನು ಬಂಧಿಸಲಾಗಿದೆ. ಅವರ ಡಿಸ್ ಚಾರ್ಜ್ ಸಮರಿ ನಮ್ಮ ಬಳಿ ಇದೆ ಎಂದಿದ್ದಾರೆ. ಅಲ್ಲದೆ, ಮೇಯರ್ ಸೇರಿದಂತೆ ಯಾರಿಗೂ ಅವಮಾನ ಮಾಡಿಲ್ಲ ಎಂದಿದ್ದಾರೆ.

ನಿಯಮಾವಳಿ ಪ್ರಕರಾವೇ ತನಿಖೆ ನಡೆಸಲಾಗುತ್ತಿದೆ. ಪರಸ್ಪರರ ದೂರಿನಂತೆ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಜವಳಕರ್ ಅವರನ್ನು ಸೋಮವಾರ ಸಂಜೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇದೀಗ, ಆಸ್ಪತ್ರೆಯ ಪತ್ರವೊಂದನ್ನು ಶಾಸಕ ಅಭಯ ಪಾಟೀಲ ಬಿಡುಗಡೆ ಮಾಡಿದ್ದಾರೆ. ಆಸ್ಪತ್ರೆಯಿಂದ ಒತ್ತಾಯಪೂರ್ವಕವಾಗಿ ಜವಳಕರ್ ಅವರನ್ನು ಬಿಡುಗಡೆ ಮಾಡಿಸಿಕೊಂಡು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆಯವರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿರುವ ಪತ್ರ ಅದು.

ಈ ಪತ್ರದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರು, ನವೆಂಬರ್ 27ರ ದಿನಾಂಕ ಹೊಂದಿರುವ ಪತ್ರವನ್ನು ಆಸ್ಪತ್ರೆಯ ಮಾಜಿ ಚೇರಮನ್ 28ರಂದು ತಂದು ಕೊಟ್ಟಿದ್ದಾರೆ. ಅವರಿಗೆ ನಾವು ಡಿಸ್ ಚಾರ್ಜ್ ಸಮರಿ ತೋರಿಸಿದಾಗ ನಿರುತ್ತರರಾಗಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಈ ಪ್ರಕರಣದಲ್ಲಿ ನೇರವಾಗಿ ಎಲ್ಲಿಯೂ ಕಾಣಿಸಿಕೊಳ್ಳದಿದ್ದರೂ ಇದು ಬಿಜೆಪಿ – ಕಾಂಗ್ರೆಸ್ ನಡುವಿನ ಸಮರವಾಗಿ ಪರಿಣಮಿಸಿದೆ. ಕಾಂಗ್ರೆಸ್ ನಾಯಕರ ಸೂಚನೆಯಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎನ್ನುವುದು ಬಿಜೆಪಿ ಆರೋಪವಾಗಿದೆ.

ಈ ಪ್ರಕರಣವನ್ನು ಬಿಜೆಪಿ ರಾಜ್ಯ ಸಮಿತಿ ಸಹ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಾಧ್ಯಕ್ಷರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪ್ರಕರಣದ ಕುರಿತು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button