ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಮಂಗಲಮಹೋತ್ಸವದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಪಂ. ಸತ್ಯಾತ್ಮತೀರ್ಥರು ರಾಮದೇವರ ಪೂಜೆ ಮಾಡಿ ಭಕ್ತರಿಗೆ ಮುದ್ರಾಧಾರಣೆ ಮಾಡಿ ಅಕ್ಷತ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳು ಜರುಗಿದವು.
ಸಾಲಿಗ್ರಾಮ ಮಹತ್ವ ಕುರಿತು ಪಂ. ವರದಚಾರ್ಯ ಕರಣಂ ಅವರು ಮಾತನಾಡಿ ವಜ್ರಕಿರಿಟವೆಂಬ ಕೀಟಗಳು ತಮ್ಮ ಹಲ್ಲಿನಿಂದ ಸಾಲಿಗ್ರಾಮದಲ್ಲಿ ಚಕ್ರವನ್ನ ಬರೆಯುತ್ತವೆ. ಈ ಕೀಟ ಎರಡು ಚಕ್ರವನ್ನ ನಿರ್ಮಾಣ ಮಾಡಲು ೬೦ ವರ್ಷಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಅರವತ್ತು ವರ್ಷಗಳ ವಿಶಿಷ್ಟ ಪ್ರಯತ್ನವನ್ನು ಒಂದು ಪ್ರಾಣಿ ಮಾಡುತ್ತದೆಯಾದ್ದರಿಂದ ಸಾಲಿಗ್ರಾಮಕ್ಕೆ ಅಷ್ಟೊಂದು ಮಹತ್ವವಿದೆ. ಪ್ರಯತ್ನವಿಲ್ಲದೇ ಯಾವುದನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಪ್ರಾಣಿಗಳಿಂದ ನಾವು ತಿಳಿದಕೊಳ್ಳುತ್ತೇವೆ. ಸಾಲಿಗ್ರಾಮಗಳಲ್ಲಿ ವಿಶೇಷವಾದ ಲಕ್ಷಣಗಳೂ ಬೇರೆ ಬೇರೆ ಇವೆ ಎಂಬ ವಿಷಯವನ್ನು ವಿವರವಾಗಿ ತಿಳಿಸಿಕೊಟ್ಟರು.
ಬಲಿಹರಣ, ಮಹತಿ- ಮಾಹಿತಿ ಎಂಬ ವಿಷಯದ ಕುರಿತು ಮಾತನಾಡಿದ ಪಂ ಪುರಂದರಾಚಾರ್ಯ ಹಯಗ್ರಿವ ಅವರು, ಸ್ವಾರ್ಥಮಯ ಜೀವನವಿರಬಾರದು. ಗಿಡ ತಾನೆಂದೂ ಹಣ್ಣನ್ನು ತಿನ್ನದೇ ಬೇರೆಯವರಿಗೆ ಕೊಡುತ್ತದೆ. ನದಿಗಳು ತನಗೆ ನೀರು ಬೇಕೆಂದು ಎಂದೂ ಹರಿಯುವುದಿಲ್ಲ. ಬೇರೆಯವರಿಗಾಗಿ ಹರಿಯುತ್ತವೆಂಬುದನ್ನು ಮನುಷ್ಯರು ಕಲಿತಕೊಳ್ಳಬೇಕಾಗಿದೆ. ಬಲಿಹರಣ ಅಂದರೆ ಪ್ರಾಣಿ, ಪಶು, ಹಕ್ಕಿಗಳು ಅವುಗಳಿಗೂ ಅನ್ನವನ್ನು ಕೊಟ್ಟು ನಾವು ತಿನ್ನುವುದು ನಮ್ಮ ಪದ್ದತಿ. ಎಲ್ಲ ದೇವತೆಗಳಿಗೆ ನೈವಿಧ್ಯ , ಮಾಡಿ ಪಶುಪಕ್ಷಿಗಳಿಗೂ ಈ ನೈವೇಧ್ಯ ಸಿಗಲಿ ಅನ್ನುವ ಒಂದು ಸದುದ್ದೇಶದಿಂದ ಅನ್ನದ ಒಂದು ಭಾಗವನ್ನು ಗುಬ್ಬಿ, ಕಾಗೆ ಹೀಗೆ ಎಲ್ಲ ಪಕ್ಷಿ ಪ್ರಾಣಿಗಳಿಗೂ ಕೊಟ್ಟು ಅವುಗಳನ್ನು ಸಂತೋಷ ಪಡಿಸಬೇಕೆಂಬುದಾಗಿದೆ ಎಂದು ಹೇಳಿದರು.
ತೀರ್ಥಯಾತ್ರೆ ಏಕೆ ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪಂ. ಗುರುರಾಜಾಚಾರ್ಯ ಕಮಲಾಪುರ ಇವರು ತೀರ್ಥಕ್ಷೇತ್ರಗಳನ್ನು ತಿರುಗುವುದು ಒಂದು ಸಾಧನೆ. ಕಾಲ್ನಡಿಗೆಯಿಂದ ನಡೆದು ಕ್ಷೇತ್ರಕ್ಕೆ ಹೋಗಿ ಅಲ್ಲಿ ನದಿಯಲ್ಲಿ ಸ್ನಾನಾದಿಗಳನ್ನು ಮಾಡಿ ಭಗವಂತನ ದರುಶನ ಮಾಡಿಕೊಂಡು ಈ ಕಾಯಕದ ಸೇವೆಯನ್ನು ಮಾಡಬೇಕು. ಹೀಗೆ ಮೇಲಿಂದ ಮೇಲೆ ಮಾಡಿದಾಗ ಬಾಯಲ್ಲಿ ಭಗವಂತನ ನಾಮಸ್ಮರಣೆ ಬರಲು ಪ್ರಾರಂಭಿಸುತ್ತದೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ತೀರ್ಥಕ್ಷೇತ್ರಗಳ ಯಾತ್ರೆ ಮಾಡಿದರೆ ಖಂಡಿತವಾಗಿ ಪಾಪ ನಾಶವಾಗುತ್ತದೆ ಎಂದು ಹೇಳಿದರು.
ಕಾರ‍್ಯಕ್ರಮದಲ್ಲಿ ಕೊನೆಯಲ್ಲಿ ಭಕ್ತಾಧಿಗಳು ತೀರ್ಥ ಪ್ರಸಾದ ಸೇವಿಸಿದರು.
ಭಕ್ತಿಯು ಮುಕ್ತಿಗೆ ಸಾಧನ: ಸತ್ಯಾತ್ಮತೀರ್ಥರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ