Kannada NewsKarnataka NewsLatest

ನಾಲ್ಕು ಭಾಗಗಳಲ್ಲಿ ಆಪರೇಶನ್ ಕಮಲ

ನನ್ನ ಮಾತು ಕೇಳದ್ದಕ್ಕೆ ಸಮ್ಮಿಶ್ರ ಸರ್ಕಾರ ಪತನವಾಯ್ತು

 

ಪ್ರಗತಿವಾಹಿನಿ ಸುದ್ದಿ, ಅಥಣಿ-

ನನ್ನ ಮಾತು ಕೇಳದಿರುವುದಕ್ಕೆ ಸಮ್ಮಿಶ್ರ ಸರ್ಕಾರ ಪತನವಾಯ್ತು. ಸುಮಾರು ಮೂರು ತಿಂಗಳಿಗಿಂತ ಮೊದಲೇ ನನಗೆ ಈ ವಿಷಯ ತಿಳಿದು ಪಕ್ಷದ ಹೈಕಮಾಂಡ್ ಗೆ ತಿಳಿಸುತ್ತಾ ಬಂದಿದ್ದು ಇದೀಗ ನಿಜವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಅವರು ಶಾಸಕರುಗಳನ್ನು ಅನರ್ಹತೆಗೊಳಿಸುವುದು ಸ್ವಾಗತಾರ್ಹ ವಿಷಯವಾಗಿದ್ದು ಈ ಕ್ರಮ ಪ್ರಜಾಪ್ರಭುತ್ವಕ್ಕೆ ಸಿಕ್ಕಜಯ ಎಂದು ಅವರು ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಅಥಣಿಯ ಪ್ರವಾಸಿಮಂದಿರದಲ್ಲಿ ರವಿವಾರ ಮಧ್ಯಾಹ್ನ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು.

ಇನ್ನುಮುಂದೆ ಪಕ್ಷಾಂತರ ಮಾಡುವವರಿಗೆ ಇದು ತಕ್ಕ ಪಾಠವಾಗಿದೆ ಎಂದರು. ಉಪ- ಚುನಾವಣೆ ಯಾವ ಸಂದರ್ಭದಲ್ಲಿ ಬೇಕಾದರೂ ಬರಬಹುದು. ಅದಕ್ಕಾಗಿ ತಾಲೂಕಿನ ಎಲ್ಲರೂ ಚುನಾವಣೆಯನ್ನು ಎದುರಿಸಲು ಸಿದ್ದರಾಗಿ ಎಂದು ಕರೆಕೊಟ್ಟರು.

ಹೈಕಮಾಂಡ್ ಸರ್ವೆ

ಪಕ್ಷದ ಎಲ್ಲ ಮುಖಂಡರು ಸೇರಿ ಪಕ್ಷದ ಗೆಲವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಅಭ್ಯರ್ಥಿ ಯಾರು ಆಗಬೇಕು ಎಂದು ಇನ್ನೂ ತೀರ್ಮಾನವಾಗಿಲ್ಲ. ಅಭ್ಯರ್ಥಿ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುತ್ತದೆ. ಅದಲ್ಲದೆ ಪಕ್ಷದ ಹೈಕಮಾಂಡ್ ನವರು ಕೆಲವು ಸರ್ವೆ ಮಾಡಿಸುತ್ತಾರೆ. ಅದಲ್ಲದೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಎರಡೂ ಪಕ್ಷಗಳು ಒಗ್ಗಟ್ಟಾಗಿ ಮುಂದೆ ವಿರೋಧ ಪಕ್ಷವಾಗಿ ಕಾರ‍್ಯನಿರ್ವಹಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಹೈಕಮಾಂಡ್ ಸೂಚಿಸಿದಂತೆ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಋಣ ಮುಕ್ತ ಕಾನೂನು ಜಾರಿ ಜಾಹಿರಾತಿನಲ್ಲಿ ಕಾಂಗ್ರೇಸ್ ಪಕ್ಷದ ಹೆಸರು ಇಲ್ಲದ್ದಕ್ಕೆ ಮಹತ್ವ ಕೊಡುವ ಅವಶ್ಯಇಲ್ಲ. ನಾಳೆ ನಾವು ಸಹ ಒಂದು ಬೇರೆಯದೇ ಜಾಹಿರಾತು ನೀಡುತ್ತೇವೆ ಎಂದು ಹೇಳಿದರು.

ನಾಲ್ಕು ಭಾಗಗಳಲ್ಲಿ ಆಪರೇಶನ್

ಅಪರೇಶ್‌ನ ಕಮಲದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅದನ್ನು ಮೊದಲೇ ಹೈಕಮಾಂಡ್ ಗೆ ತಿಳಿಸಿದ್ದೆ. ಆದರೆ ಆಗ ಗಂಭಿರವಾಗಿ ಗಮನಿಸಲಿಲ್ಲ ಆಪರೇಶನ್ ಕಮಲದ ಹಿಂದೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ಹೇಳುತ್ತಿರುವುದು ಶುದ್ದ ಸುಳ್ಳು.

ಆಪರೇಶ್ ಕಮಲವನ್ನು ನಾಲ್ಕು ಭಾಗಗಳಲ್ಲಿ ಮಾಡಿದ್ದಾರೆ. ಒಂದು ರಮೇಶ ಜಾರಕಿಹೊಳಿ, ಎರಡನೆಯದು ಬೆಂಗಳೂರಿನ ಶಾಸಕರ ಒಂದು ಗುಂಪು. ಮೂರನೆಯದು ಜೆಡಿಎಸ್ ಶಾಸಕರ ಒಂದು ಗುಂಪು, ಮತ್ತೊಂದು ಬಳ್ಳಾರಿಯ ಒಂದು ಗುಂಪು ಆಗಿ ಹೀಗೆ ನಾಲ್ಕು ಗುಂಪುಗಳಲ್ಲಿ ಆಪರೇಶನ್ ಮಾಡಿದ್ದಾರೆ.

ಆಪರೇಶನ್ ಕಮಲಕ್ಕೆ ಪ್ರಥಮ ಮುನ್ನಡಿ ಬರೆದವರು ರಮೇಶ ಜಾರಕಿಹೊಳಿ. ಕಳೆದ ಒಂದು ವರ್ಷದಿಂದ ಇದೇ ದಾರಿಯಲ್ಲಿ ಇದ್ದರು. ಆದರೆ ಅಥಣಿ ಶಾಸಕರು ನನ್ನ ಮತ್ತು ರಮೇಶ ಜಾರಕಿಹೊಳಿ ಇಬ್ಬರ ನಾಯಕತ್ವ ಒಪ್ಪಿದವರು. ಕೊನೆಯ ಕ್ಷಣದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಹೋಗಿದ್ದಾರೆ. ಅವರನ್ನು ಸಂಧಾನ ಮಾಡಿ ಇರುವ ಇಚ್ಚೆ ಇತ್ತು. ನನಗೆ ಕಾಗವಾಡ ಶಾಸಕರು ಹೋಗಿರುವುದೇ ಆಶ್ಚರ್ಯವಾಗಿದೆ. ಅವರು ಹೊಗುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದು  ಸತೀಶ್ ಹೇಳಿದರು.

ಡಿಕೆಶಿ ಜೊತೆ ಕೆಲಸ 

ನನ್ನ ಮತ್ತು ಡಿ.ಕೆ.ಶಿವಕುಮಾರ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬೆಳಗಾವಿ ಜಿಲ್ಲೆಯ ಉಪ-ಚುನಾವಣೆಯ ಬಂದಾಗ ಇಬ್ಬರೂ ಕೂಡಿ ಕೆಲಸ ಮಾಡಿ ಎಂದು ಹೈಕಮಾಂಡ್ ಸೂಚಿಸಿದರೆ ಇಬ್ಬರೂ ಸೇರಿ ಒಗ್ಗಟಾಗಿ ಕೆಲಸ ಮಾಡುತ್ತೇವೆ. ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ತೋರಿಸುತ್ತೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭಿನ್ನಮತಕ್ಕೆ ಒಂದು ವಸ್ತು ಕಾರಣ. ಅದು ಬೆಳ್ಳಿಯೋ, ಬಂಗಾರವೋ ಯಾವ ವಸ್ತು ಎಂದು ನಾನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು. ನಂತರ ಮುಂಬೈ ರೆಸಾರ್ಟ್ ಶಾಸಕರ ಜೊತೆ ಕೆಲವು ಸ್ಥಳೀಯ ಮುಖಂಡರು ಹೋಗಿರುವುದು ವಿಶೇಷವೇನಲ್ಲ. ಅವರು ಪಕ್ಷದಲ್ಲಿ ಇದ್ದಾರೆ. ಸಂಧಾನಕ್ಕೆ, ಮರಳಿ ಕರೆತರಲು ಪ್ರಯತ್ನಕ್ಕೆ ಹೋಗಿರಬಹುದು ಎಂದು ಜಾರಕಿಹೊಳಿ ಹೇಳಿದರು.

ಬಹಳ ದಿನ ಆಯುಷ್ಯ ಇಲ್ಲ

ಅಪರೇಶ್ ಕಮಲ ಆ ಪಕ್ಷಕ್ಕೆ ಮುಳುವಾಗಲಿದೆ. ಇವರಿಂದಲೇ ಅವರ ಸರಕಾರ ಬೀಳಬಹುದು. ಈ ಸರಕಾರಕ್ಕೆ ಬಹಳ ದಿನ ಆಯುಷ್ಯ ಇಲ್ಲ ಎಂದು ಹೇಳಿದರು.
ಇದೆ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಪ್ರತ್ಯೇಕವಾಗಿ ಮಾತನಾಡಿ, ನಮ್ಮ ಶಾಸಕರಾದ ಮಹೇಶ ಕುಮಠಳ್ಳಿ ಅವರ ನಿರ್ಧಾರ ನಮಗೆ ಅಘಾತ ಉಂಟು ಮಾಡಿದೆ. ಯಾರೂ ಕೂಡ ಹತಾಶ ಆಗಬಾರದು. ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶದಲ್ಲಿ ನಾವೆಲ್ಲ ಒಗ್ಗಟಾಗಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸೋಣ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಮಾಜಿ ಜಿ.ಪಂ ಸದಸ್ಯ ಬಸವರಾಜ ಬುಟಾಳಿ, ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸುನೀಲ ಸಂಕ, ಶಿವಾನಂದ ಗುಡ್ಡಾಪೂರ, ನಿಶಾಂತ ದಳವಾಯಿ, ತೌಸಿಫ ಸಾಂಗಲೀಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button