ದೇಶ ಗುಲಾಮಗಿರಿ ಮನಸ್ಥಿತಿಯಿಂದ ಹೊರಬರುತ್ತಿದೆ; ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 2047ರೊಳಗೆ ದೇಶದಲ್ಲಿ ಮಹತ್ವದ ಬದಲಾವಣೆಯಾಗಲಿದೆ, ಎಲ್ಲಾ ನಮ್ಮ ಕನಸು ಈಡೇರಲಿದೆ. ಗುಲಾಮಗಿರಿ ಮನಸ್ಥಿತಿಯಿಂದ ದೇಶ ಹೊರಬರುತ್ತಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ಕೆಂಪು ಕೋಟೆಯಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, “ಭ್ರಷ್ಟಾಚಾರ, ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಕ್ತಿ ತುಂಬುವುದು ನಮ್ಮ ಗುರಿ” ಎಂದರು.
“ಪ್ರಸ್ತುತ ಯುಗದಲ್ಲಿ ನಾವು ಕೈಗೊಳ್ಳುವ ಮಾಡುವ ನಿರ್ಧಾರಗಳು, ಕ್ರಮಗಳು ಒಂದರ ನಂತರ ಒಂದರಂತೆ, ಮುಂಬರುವ ಒಂದು ಸಾವಿರ ವರ್ಷಗಳಲ್ಲಿ ದೇಶದ ಸುವರ್ಣ ಇತಿಹಾಸವನ್ನು ಮೊಳಕೆಯೊಡೆಸುತ್ತವೆ. ದೇಶದ ಜನತೆಯ ಮೇಲೆ ಹಣದುಬ್ಬರದ ಹೊರೆಯಿದ್ದು ಅದರ ನಿವಾರಣೆಗೆ ಎಲ್ಲ ರೀತಿಯಿಂದ ಶ್ರಮಿಸಲಾಗುತ್ತಿದೆ. ದೇಶದ ಪ್ರತಿ ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸರಕಾರ ಕಂಕಣಬದ್ಧವಾಗಿದೆ. ಪ್ರತಿ ಗ್ರಾಮದಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಸರಕಾರದ ಸಂಕಲ್ಪಗಳು ನಮ್ಮ ಸರಕಾರದ ಅವಧಿಯಲ್ಲೇ ಈಡೇರಲಿವೆ” ಎಂದರು.
“ದೇಶದ ತಾಯಂದಿರು, ಸೋದರಿಯರ ಶ್ರಮ ಸಾಮರ್ಥ್ಯಗಳು ಅಭಿನಂದನೀಯ. ರೈತರು ಕಾರ್ಮಿಕರ ಕೊಡುಗೆಗಳು ದೇಶದ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸಿದ್ದು ಅವರಲ್ಲರನ್ನೂ ಅಭಿನಂದಿಸುತ್ತೇನೆ. ಮುಂಬರುವ ಐದು ವರ್ಷಗಳಲ್ಲಿ ಬಡತನ ನಿವಾರಣೆಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ದೇಶದ ಆರ್ಥಿಕತೆ ಮುಂಚೂಣಿಯಲ್ಲಿದ್ದು 13.5 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ಇದರ ಫಲವಾಗಿ ಮಧ್ಯಮ ವರ್ಗದವರ ಸಾಮರ್ಥ್ಯವೂ ವೃದ್ಧಿಸಿದೆ” ಎಂದು ಮೋದಿ ಹೇಳಿದರು.
“ಭಾರತ ತನ್ನ ಸುದೀರ್ಘ ಇತಿಹಾಸದಲ್ಲಿ ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಮೆಟ್ಟಿ ನಿಂತಿದೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತ ಮುಂದೆ ಸಾಗಬೇಕು. ನಾವು ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡು ಸಾಗುತ್ತಿರುವುದನ್ನು ಕಂಡು ಜಗತ್ತಿನ ಉಳಿದೆಡೆಯ ಯುವಜನ ಆಶ್ಚರ್ಯ ಪಡುತ್ತಿದ್ದಾರೆ. ಭಾರತದ ಸಾಧನೆಗಳು ಬರೀ ದಿಲ್ಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಸಣ್ಣದಾಗಿವೆ ಎನಿಸಿದರೂ ಭರವಸೆ, ಆಕಾಂಕ್ಷೆ, ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ” ಎಂದು ಪ್ರತಿಪಾದಿಸಿದರು.
“ದೇಶದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದಿದ್ದರೂ ಅವೆಲ್ಲವನ್ನು ಭಾರತ ಮೆಟ್ಟಿ ನಿಂತಿದೆ. ಸಾವಿರಾರು ವರ್ಷಗಳಿಂದಲೂ ಈ ಆಕ್ರಮಣಗಳು ತಮ್ಮ ಪ್ರಭಾವ ಬೀರುತ್ತಲೇ ಇವೆ. ಸ್ವಾತಂತ್ರ್ಯಕ್ಕಾಗಿ ಹಲವು ಬಲಿದಾನಗಳು ನಡೆದಿವೆ. ಭಾರತದ ಪ್ರತಿಯೊಂದು ಹಳ್ಳಿಯ ವೀರ ಮಹಿಳೆಯರು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಜೈಲು ಸೇರಿದ್ದಾರೆ, ಬಲಿದಾನಗೈದಿದ್ದಾರೆ. ಅವರೆಲ್ಲರ ತ್ಯಾಗ ಸದಾ ಸ್ಮರಣೀಯ” ಎಂದು ಮೋದಿ ಹೇಳಿದರು.
“ದೇಶದಲ್ಲಿ ರೈಲು ಅಭಿವೃದ್ಧಿ ಯೋಜನೆಗಳು ಜಾರಿಯಿವೆ. ಬುಲೆಟ್ ರೈಲು ಯೋಜನೆ ಜಾರಿಗೊಂಡಿದ್ದು, ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿಗೂ ಶ್ರಮಿಸಲಾಗುತ್ತಿದೆ. ವಿಶೇಷಚೇತನರ ಅಭ್ಯುದಯದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿವೆ. ಗುಡಿಸಲು ಮುಕ್ತ ಸೂರು ಯೋಜನೆ ಹಮ್ಮಿಕೊಳ್ಳಲಾಗಿದೆ. ಜನೌಷಧದಂಥ ಯೋಜನೆಗಳಿಂದ ಸಾಕಷ್ಟು ಉಪಯೋಗವಾಗಿದೆ. ದೇಶ ಈ ಬಾರಿ ಹಿಂದೆಂದೂ ಕಾಣದಂಥ ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದ್ದು ಇದರಲ್ಲಿ ಮಡಿದವರು, ಆಸ್ತಿಪಾಸ್ತಿ ಕಳೆದುಕೊಂಡವರ ಬಗ್ಗೆ ಅನುಕಂಪವಿದೆ ಎಂದರು.
ಕೇಂದ್ರ ಸರಕಾರದ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಮೋದಿ, ಮುಂಬರುವ ದಿನಗಳಲ್ಲಿ ದೇಶಾದ್ಯಂತ ವಿಶ್ವಕರ್ಮ ಮಹರ್ಷಿ ಜಯಂತಿ ಆಚರಣೆ ಮಾಡುವುದಾಗಿ ಘೋಷಿಸಿದರು.
“ಮಣಿಪುರದಲ್ಲಿ ಶಾಂತಿ ಸ್ಥಾಪನೆ ವಿಷಯ ಪ್ರಸ್ತಾಪಿಸಿದ ನರೇಂದ್ರ ಮೋದಿ, ಕೆಲ ದಿನಗಳಿಂದ ಮಣಿಪುರ ಶಾಂತತೆಯತ್ತ ಸಾಗುತ್ತಿರುವ ಸುದ್ದಿ ಆಶಾದಾಯಕವಾಗಿದ್ದು ಅಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರ ಸರಕಾರ ಅವಿರತ ಶ್ರಮಿಸುತ್ತಿದೆ. ದೇಶ ಮಣಿಪುರ ನಿವಾಸಿಗಳ ಜತೆಗಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ” ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರು, ತ್ಯಾಗಗೈದವರನ್ನು ನೆನೆದ ಮೋದಿ, ದೇಶದ 140 ಕೋಟಿ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರು. ಈ ವೇಳೆ ದೇಶದ ಸೇನಾಪಡೆಯ ಮೂರೂ ವಿಭಾಗಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ