*ಸವದತ್ತಿ: ಕೊಲೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಹೂಲಿ ಗ್ರಾಮದಲ್ಲಿ ಜಮೀನು ವಿವಾದಕ್ಕಾಗಿ ದೂರು ದಾಖಲಿಸಿದಾಕೆಯ ಗಂಡನನ್ನು ಕೊಲೆ ಮಾಡಿ, ದೂರು ದಾಖಲಿಸಿದವಳ ಕೊಲೆಗೆ ಪ್ರಯತ್ನಿಸಿದ ಅಪರಾಧಕ್ಕಾಗಿ ಬೆಳಗಾವಿಯ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೂಲಿ ಗ್ರಾಮದಲ್ಲಿರುವ ಜಮೀನಿನ ವಿಷಯದಲ್ಲಿ ದೂರುದಾರೆಯ ಗಂಡ ಹಾಗೂ ಆರೋಪಿಗಳ ನಡುವೆ ತರಕಾರು ಇದ್ದು, ಫಿರ್ಯಾದಿಗೆ ಮಕ್ಕಳಿಲ್ಲದ ಕಾರಣ ಆರೋಪಿಗಳಾದ ಓಂಕಾರಗೌಡ ಪಕ್ಕೀರಗೌಡ ಮೇಲಿನಮನಿ ಹಾಗೂ ದ್ಯಾಮನಗೌಡ ಪಕ್ಕೀರಗೌಡ ಮೇಲಿನಮನಿ ಸಹೋದರರು ಕೂಡಿ ತಮ್ಮ ಸ್ವಂತ ಚಿಕ್ಕಪ್ಪನಾದ ಈರಣಗೌಡ ಮೇಲಿನಮನಿಯನ್ನು ಕೊಲೆ ಮಾಡಿದ್ದಾರೆ. ಅಲ್ಲದೆ ಅವರ ಹೆಂಡತಿ ದೂರು ದಾಖಲಿಸಿದ ಕಾರಣಕ್ಕೆ ಅವರ ಕೊಲೆ ಮಾಡಲು ಪ್ರಯತ್ನಿಸಿದರು.
ಈ ಪ್ರಕರಣದ ಇಬ್ಬರೂ ಆರೋಪಿಗಳ ವಿರುದ್ಧ ಕಲಂ 302 ಹಾಗೂ 506(2) ಸಕ 34 ಐಪಿಸಿ ಅಡಿಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.50 ಸಾವಿರ ದಂಡ ವಿಧಿಸಿಲಾಗಿದೆ.
ಈ ಪ್ರಕರಣದಲ್ಲಿ ಬೆಳಗಾವಿ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಎಚ್.ಎಸ್. ಮಂಜುನಾಥ ಅವರು ತೀರ್ಪು ನೀಡಿದ್ದಾರೆ. ಅಲ್ಲದೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಸರೀನ ಬಂಕಾಪೂರ ಅವರು ವಾದ ಮಂಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ