ಪ್ರೀತಿಯ ನಾಟಕ ಬಹಳ ಅಪಾಯಕಾರಿ

ಗಿರೀಶ್ ಭಟ್
ಪ್ರೀತಿ-ಪ್ರೇಮದಲ್ಲಿ ಬಿದ್ದು, ಹಳ್ಳ ಹಿಡಿಯುವುದು ಹದಿ ಹರೆಯದ ಸಾಮಾನ್ಯ ಲಕ್ಷಣಗಳಲ್ಲೊಂದು. ಏಕೆಂದರೆ ಆ ವಯಸ್ಸಿನ ಜೀವನವೇ ಚಂಚಲ. ಆಗ ಮನುಷ್ಯ ಪ್ರೀತಿ-ಪ್ರೇಮ ಎಂಬ ವ್ಯರ್ಥ ಪ್ರಲಾಪದಲ್ಲಿ ಬಿದ್ದು ತನ್ನ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಾನೆ. ಹೀಗೆ ಮಾಡುತ್ತಲೇ ಆತನಿಗೆ ತಾನು ವಯಸ್ಸಿನಲ್ಲಿ ೩೦ ರ ಆಸು ಪಾಸಿನಲ್ಲಿದ್ದೇನೆ ಅಥವಾ ೩೦ ದಾಟಿದ್ದೇನೆ ಎಂಬ ಅರಿವೂ ಇರುವುದಿಲ್ಲ.
ಆದರೆ ಕೆಲವು ಹುಡುಗ/ಹುಡುಗಿ ಬೇರೆಯವರನ್ನು ಪ್ರೀತಿಸಿದಂತೆ ನಾಟಕವಾಡುತ್ತಾರಲ್ಲ. ಇದು ಬಹಳ ಅಪಾಯಕಾರಿ. ಇದರಿಂದ ಒಬ್ಬನ/ಳ ಜೀವವೇ ದಿಕ್ಕು ತಪ್ಪಬಹುದು. ಈ ತರಹದ ಪ್ರೀತಿಯಲ್ಲಿ ಪ್ರೇಮಿಸುವುದು ನಾಟಕವಾಗಿರುತ್ತದೆ. ಕೆಲವು ಹುಚ್ಚು ಹುಡುಗ/ಗಿಯರು ಸಿನಿಮಾದಲ್ಲಿ ತೋರಿದಿಂತೆಯೇ ಆತ/ಆಕೆ ಯನ್ನು ಹುಚ್ಚ/ಚ್ಚಿ ಯನ್ನಾಗಿ ಮಾಡುವವರೆಗೂ ಬಿಡುವುದಿಲ್ಲ ಎಂದು ಚಾಲೆಂಜ್ ಮಾಡಿ ಪ್ರೀತಿಸುವಂತೆ ನಟಿಸುತ್ತಾರೆ.
ಆದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲವರು ಪ್ರೀತಿಸುತ್ತಾರೆ. ಮದುವೆಯನ್ನೂ ಆಗುತ್ತಾರೆ. ಈ ತರಹದ ಪ್ರೀತಿಯಲ್ಲಿ ಹುಡುಗ-ಹುಡುಗಿ ತಮ್ಮ ಜೀವನದ ಅಮೂಲ್ಯ ಸಮಯ ವ್ಯರ್ಥಮಾಡಿಕೊಂಡರೂ ಓಕೆ ಎನ್ನಬಹುದು. ಆದರೆ ಇನ್ನು ಕೆಲವು ಪ್ರೇಮಿಗಳು ಮಜಾ ಮಾಡಲೆಂದೇ ಲವ್ ಮಾಡುತ್ತಾರೆ. ಇವರಿಗೆ ಮುಂದೆ ಮದುವೆಯಾಗುತ್ತೇವೆಯೋ ಇಲ್ಲವೋ ಬೇಕಾಗಿರುವುದಿಲ್ಲ. ಒಟ್ಟಿನಲ್ಲಿ ತಮ್ಮ ಜವಾನಿಯನ್ನು ಅವರು ಬಿಂದಾಸ್ ಆಗಿ ಕಳೆಯುತ್ತಾರೆ. ಮತ್ತೆ ಕೆಲವರು ಪ್ರೀತಿಸಿದಂತೆ ನಾಟಕವಾಡಿ ಹುಡುಗ/ಹುಡುಗಿಯರನ್ನು ಮರುಳು ಮಾಡುತ್ತಾರೆ. ಈ ಪ್ರೀತಿ ಬಹಳ ಅಪಾಯಕಾರಿ. ಮನೆಯ ಸುತ್ತಮುತ್ತಲೂ, ಕಾಲೇಜಿನಲ್ಲಿ ಅಥವಾ ಹೊರಗೆ ಮಾರುಕಟ್ಟೆ/ಅಂಗಡಿಗಳಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು.
ತನ್ನ ಮನೆಯಲ್ಲಿ ಪ್ರೀತಿಸಿದರೆ ಅದಕ್ಕೆ ಹಿರಿಯರು ಒಪ್ಪುವುದಿಲ್ಲ. ನಮ್ಮ ಸಂಪ್ರದಾಯ ಕಟ್ಟು ಪಾಡುಗಳಿಂದ ಕೂಡಿದೆ. ಯಾವುದೇ ಹುಡುಗ/ಹುಡುಗಿಯನ್ನು ನಾನು ಪ್ರೀತಿಸಿದರೂ ಅದು ಸಮಯ ವ್ಯರ್ಥಮಾಡಿದಂತೆ ಎಂದು ಗೊತ್ತಿದ್ದರೂ ನಾಟಕವಾಡುತ್ತಾರಲ್ಲ, ಇಂಥವರಿಗೆ ಏನೆನ್ನಬೇಕು? ಸುಮ್ಮನೆ ಅವನು/ಅವಳು ತೊಟ್ಟಂತಹ ಬಣ್ಣದ ಬಟ್ಟೆಯನ್ನೇ ಧರಿಸುವುದು. ಸುಖಾಸುಮ್ಮನೆ ಹುಡುಗ/ಹುಡುಗಿಯನ್ನು ನೋಡಿ ನಗುವುದು. ಇವೆಲ್ಲ ಮನೆಯಲ್ಲಿ ಟಿವಿಗಳಲ್ಲಿ ಧಾರಾವಾಹಿ/ಸಿನಿಮಾ ನೋಡುತ್ತಾರಲ್ಲ, ಅದನ್ನು ನೋಡಿಯೇ ಕಲಿಯುತ್ತಾರಿರಬೇಕು ಇವರು.
ಶಾಲೆಗೆ ಹೋಗುವಾಗ ೫ ನೇ ತರಗತಿಯಿಂದಲೇ ಪ್ರೀತಿ-ಪ್ರೇಮ ಅರ್ಥಮಾಡಿಕೊಳ್ಳುವ ಈಗಿನ ವಿದ್ಯಾರ್ಥಿ/ನಿಯರು ಹೈಸ್ಕೂಲ್ ಲೆವೆಲ್‌ನಲ್ಲಿ ಸಾಕಷ್ಟು ಮುಂದುರಿಯುತ್ತಾರೆ. ಕಾಲೇಜಿನಲ್ಲಿ ತಾರಕಕ್ಕೇರುವ ಇವರ ಪ್ರೀತಿ, ಕಾಲೇಜು ಮುಗಿಸಿ, ನೌಕರಿ ಮಾಡುವಾಗ ಲಿವಿಂಗ್ ಟುಗೇದರ್‌ನಲ್ಲಿ ಮುಂದುವರಿಯುತ್ತದೆ. ಇವರಿಗೆ ತಂದೆ-ತಾಯಂದಿರ ಭಯ, ಸಮಾಜದ ಭಯ, ದೇವರ ಭಯಗಳಾವ್ಯವೂ ಇರುವುದಿಲ್ಲ.
ಪ್ರೀತಿ-ಪ್ರೇಮದಲ್ಲಿ ಬೀಳುವ ಹುಡುಗ/ಹುಡುಗಿಯರು ಯಾವಾಗಲೂ ಒಂದು ಥರದ ಗುಂಗಿನಲ್ಲಿ (ಡ್ರಗ್ಸ್‌ತೆಗೆದುಕೊಂಡಾಗ ಆಗುವ ನಶೆಯಂತೆ) ತೇಲುತ್ತಿರುತ್ತಾರೆ. ಕಿವಿಗೆ ಮೊಬೈಲ್ ಫೋನ್ ಸಿಕ್ಕಿಸಿಕೊಂಡು ಸದಾ ಪ್ರೇಮಿಗಳೊಂದಿಗೆ ಮಾತನಾಡುವ ಇವರಿಗೆ ರೈಲು ಹಳಿ ದಾಟುತ್ತಿದ್ದೇನೆ ಎಂಬ ಅರಿವೂ ಇಲ್ಲದೆ ಪ್ರೇಮಿಯೊಡನೆ ಮಾತಿನಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಸಾಕಷ್ಟು ಅಪಘಾತ ಸಂಭವಿಸಿ, ಪ್ರಾಣ ಕಳೆದು ಕೊಂಡರೂ ಇಂತಹ ಪ್ರೇಮಿಗಳಿಗೆ ಇನ್ನೂ ಬುದ್ಧಿಬಂದಂತಿಲ್ಲ.
ಬಹಳ ವರ್ಷಗಳ ಹಿಂದೆ ಕೇವಲ ನಗರಗಳಿಗಷ್ಟೇ ಸೀಮಿತವಾಗಿದ್ದ ಪ್ರೀತಿ-ಪ್ರೇಮ ಪುರಾಣ ಈಗ ಹಳ್ಳಿಗಳಲ್ಲೂ ಹೇರಳವಾಗಿ ವ್ಯಾಪಿಸುತ್ತಿದೆ. ಇವರಿಗೆ ಮನೆಯವರು ಗಂಡು/ಹೆಣ್ಣು ಹುಡುಕುವವರೆಗೆ ಕಾಯಲು ಪುರಸೊತ್ತಿರುವುದಿಲ್ಲ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿಯೋ/ಮನೆಯ ಸುತ್ತಮುತ್ತಲಿನಲ್ಲಿಯೇ ಯಾರನ್ನಾದರೂ ನೋಡಿಕೊಂಡೇ ಬಿಟ್ಟಿರುತ್ತಾರೆ.
ಮಾನವನ ಜೀವನ ಪ್ರಾರಂಭವಾಗುವುದು ಮಗುವಿನಿಂದ. ಮಗು ತಾನು ಮೊದಲು ಬೆಳೆಯುವುದು ತಾಯಿಯ ಹೊಟ್ಟೆಯಲ್ಲಿಯೇ. ಒಂಭತ್ತು ತಿಂಗಳ ನಂತರ ಹೊರ ಪ್ರಪಂಚಕ್ಕೆ ಬರುತ್ತದೆ. ಆಗ ಅದರ ಜನನವಾದಂತೆ. ಜನಿಸಿದಾಗ ಅದರ ಎಲ್ಲಾ ಸಂಬಂಧಗಳೂ ತಾಯಿಯಿಂದಲೇ. ಆಹಾರ, ಮಲಗುವಿಕೆ, ಅದರ ಲಾಲನೆ-ಪೋಷಣೆ ಇತ್ಯಾದಿ ಎಲ್ಲ ತಾಯಿಯಿಂದಲೇ. ಮಗುವು ಮೊದಲು ಕರೆಯುವುದೇ ತಾಯಿಯನ್ನು. ಹೀಗೆ ಮನುಷ್ಯನ ಜೀವನ ಪ್ರಾರಂಭವಾಗುವುದೇ ತಾಯಿಯ ಅಮೂಲ್ಯವಾದ ಪ್ರೀತಿಯಿಂದ. ಮಗುವು ತೊದಲಿಸುವ ಮಾತು ಕಲಿಯುತ್ತದೆ. ನಂತರ ಅದು ದೊಡ್ಡದಾಗುತ್ತದೆ. ಶಾಲೆಗೆ ಹೋಗುತ್ತದೆ. ಅಲ್ಲಿಯ ವರೆಗೆ ಅದಕ್ಕೆ ತಾಯಿ-ತಂದೆ, ಮನೆಯವರ ಪ್ರೀತಿಯಷ್ಟೇ ಗೊತ್ತು.
ಆದರೆ ಮಗುವು ದೊಡ್ದಾಗಿ ಹದಿಹರೆಯಕ್ಕೆ ಕಾಲಿಟ್ಟಿದ್ದೂ ಆಯಿತು. ಮಗುವು ೧೦-೧೧ ವರ್ಷಗಳ ವರೆಗೆ ತಾಯಿ-ತಂದೆಯರ, ಮನೆಯವರ ಪ್ರೀತಿಯನ್ನಷ್ಟೇ ನೋಡಿತ್ತು. ನಂತರ ಇನ್ನೊಂದು ರೀತಿಯ ಪ್ರೀತಿಯ ಅನುಭವ ಅದಕ್ಕೆ ಪ್ರಾರಂಭವಾಗುತ್ತದೆ. ಅದೇ ಹದಿಹರೆಯದ ಪ್ರೀತಿ. ಪ್ರೀತಿಗಿಂತ ಅದನ್ನು ಆಕರ್ಷಣೆ ಎಂದು ಕರೆದರೇ ಉತ್ತಮ. ಏಕೆಂದರೆ ಅ ವಯಸ್ಸಿನಲ್ಲಿ ಅಷ್ಟೊಂದು ತಿಳಿವಳಿಕೆ ಇಲ್ಲದಿದ್ದರೂ ಯಾವುದಾದರೂ ಹುಡುಗ-ಹುಡುಗಿಗೆ ಪ್ರೇಮ ಪತ್ರ ಬರೆಯಬೇಕೆನ್ನುವಷ್ಟು ತಿಳಿವಳಿಕೆ ಬಂದಿರುತ್ತದೆ. ವಿದ್ಯಾರ್ಥಿಗಳು ತಮ್ಮ ಓದಿಗೆ ಮೀಸಲಿಟ್ಟ ವಯಸ್ಸು, ವೇಳೆಯನ್ನು ಪ್ರೀತಿ ಎಂಬ ಮಾಯೆಗೆ ವ್ಯಯಿಸುತ್ತಾರೆ. ಉತ್ತಮವಾಗಿ ಓದಿ ಭವಿಷ್ಗ ರೂಪಿಸಿಕೊಳ್ಳುವ ವಯಸ್ಸನ್ನು ತಮ್ಮ ಕೈಯಿಂದಲೇ ಹಾಳುಮಾಡಿಕೊಳ್ಳುತ್ತಾರೆ.
ಇನ್ನು ಕಾಲೇಜಿಗೆ ತೆರಳುವ ಸಂದರ್ಭಗಳಲ್ಲಂತೂ ಬಾಯ್‌ಫ್ರೆಂಡ್‌ಗೆ ಗರ್ಲ್‌ಫ್ರೇಂಡ್, ಗರ್ಲ್‌ಫ್ರೇಂಡ್‌ಗೆ ಬಾಯ್‌ಫ್ರೆಂಡ್ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಜಗತ್ತು ಬದಲಾಗಿಹೋಗಿದೆ. ಮನೆಯಲ್ಲಿ ವಿರೋಧ ವಿದ್ದರೂ ತಾವು ಕೊಳ್ಳುವ ಸ್ಮಾರ್ಟ್ ಫೋನ್‌ಗಳಿಂದ ಇನ್ನಷ್ಟು ಹದಿಹರೆಯದವರು ಹಳ್ಳ ಹಿಡಿದಿದ್ದಾರೆ, ಹಿಡಿಯುತ್ತಿದ್ದಾರೆ. ಧೂಮಪಾನ, ಮದ್ಯಪಾನಕ್ಕೆ ಅಂಟಿಕೊಳ್ಳುವುದಲ್ಲದೇ ಇನ್ನೂ ಹಲವು ಸಂದರ್ಭಗಳಲ್ಲಿ ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಹಿರಿಯರ ಮಾತಂತೂ ಪ್ರೇಮಿಗಳಿಗೆ ತಲೆಯಲ್ಲಿ ಹೋಗುವುದೇ ಇಲ್ಲ. ಜೀವನದಲ್ಲಿ ಒಬ್ಬನನ್ನೆ/ಒಬ್ಬಳನ್ನೇ ಪ್ರೀತಿಸುವುದು. ಪ್ರೀತಿಸಿದವರನ್ನೇ ಮದುವೆಯಾಗುವುದು ಇವೆಲ್ಲ ಹಳೆಯ ಸಿನಿಮಾ/ಕಾದಂಬರಿ/ಧಾರವಾಹಿ ಕಥೆಗಳಲ್ಲಷ್ಟೇ.
ಇಷ್ಟೆಲ್ಲ ಆದ ಮೇಲೆ ಇನ್ನು ಮದುವೆ ವಯಸ್ಸಿಗೆ ಹುಡುಗ-ಹುಡುಗಿ ಬಂದರೆಂದರೆ ಸಹಜವಾಗಿ ಹೆಣ್ಣು/ಗಂಡು ಹುಡುಕುವುದು ಪ್ರಾರಂಭವಾಗುತ್ತದೆ. ಆಗ ಹೆಣ್ಣು-ಗಂಡು ನೋಡುವ ಪ್ರಕ್ರಿಯೆ ಹಿರಿಯರ ಸಮ್ಮುಖದಲ್ಲೇ ನಡೆಯುತ್ತದೆ. ಆಗ ಹಿರಿಯರೇ ಅವರು ಪರಸ್ಪರ ಪರಿಚಯ ಮಾಡಿಕೊಳ್ಳಲಿ ಎಂದು ಬೇರೆ ಕಡೆ ಇಬ್ಬರನ್ನೇ ಕಳಿಸುತ್ತಾರೆ. ಅಲ್ಲಿ ಪರಸ್ಪರರ ಮೊಬೈಲ್ ಸಂಖ್ಯೆ ವರ್ಗಾವಣೆ ಆಗುವುದು ಸಾಮಾನ್ಯ. ಒಂದು ೬ ತಿಂಗಳು ನೋಡೋಣ ಆಮೇಲೆ ಸರಿ ಎನಿಸಿದರೆ ಮದುವೆಯಾಗೋಣ ಎನ್ನುವ ಮನಸ್ಥಿತಿ ಈ ಇಬ್ಬರಲ್ಲಿ ಬೆಳೆಯಲು ಕಾರಣವಾಗಿದೆ. ಇದರಿಂದ ಮದುವೆ ದಿನವೇ ಮದುವೆ ಮುರಿದು ಬಿತ್ತು, ನಿಶ್ಚಿತಾರ್ಥವಾದ ಮದುವೆ ಮುರಿದು ಬಿತ್ತು, ಮದುವೆ ಮಂಟಪದಿಂದ ವಧು ನಾಪತ್ತೆ ಅಥವಾ ವರ ನಾಪತ್ತೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಸರ್ವೇ ಸಾಮಾನ್ಯವಾಗಿವೆ. ಇನ್ನು ಮದುವೆಯಾಗಿ ಎರಡು ಮೂರು ಮಕ್ಕಳಿದ್ದವರೂ ಬೇರೆ ಗಂಡಸರ-ಹೆಂಗಸರ ಜೊತೆಗೆ ಓಡಿಹೋಗುವುದು. ಅಥವಾ ಅನೈತಿಕ ಸಂಬಂಧ ಹೊಂದಿದವರೊಡನೆ ಸೇರಿಕೊಂಡು ಪತಿ-ಪತ್ನಿಯನ್ನು ಕೊಲ್ಲಿಸುವಂತಹ ಘಟನೆಗಳೂ ನಡೆಯುತ್ತಿವೆ. ಇವಕ್ಕೆಲ್ಲ ಕಾರಣ ಕೇವಲ ಆಕರ್ಷಣೆ ಎನ್ನಬಹುದು.
ಸುಮ್ಮನೇ ಸಮಯ ವ್ಯರ್ಥಮಾಡಿ ಪ್ರೀತಿಸುವ ಹುಡುಗ-ಹುಡುಗಿಯರು ಪರಸ್ಪರ ಬೇರೆ ಬೇರೆ ಆದಾಗ ನೋವು ಅನುಭವಿಸುತ್ತಾರೆ. ನಕ್ಕು ತಲೆ ಕಡಿಸಿದ ಹುಡುಗಿ ಬೇರೆ ಶಾಲೆಗೆಂದು ಬೇರೆ ಊರಿಗೆ ತೆರಳಿದಾಗ, ಅಥವಾ ಹುಡುಗ ದೂರವಾದಾಗ ಹುಡುಗಿ ಹೀಗೆ ಇಬ್ಬರೂ ದುಃಖ ಪಡುತ್ತಾರೆ. ಆಕಾಶವೇ ಕಡಿದು ತಲೆ ಮೇಲೆ ಬಿದ್ದವರಂತೆ ವರ್ತಿಸುತ್ತಾರೆ. ಆಗ ಅವರಿಗೆ ಮನೆಯಲ್ಲಿನ ಹಿರಿಯರ ಪ್ರೀತಿ, ಅವರ ಬುದ್ಧಿವಾದ ಯಾವುದೂ ಲಕ್ಷ್ಯಕ್ಕೆ ಬರುವುದಿಲ್ಲ. ಇಷ್ಟೇ ಅಲ್ಲದೇ ಎಷ್ಟೋ ಆತ್ಮಹತ್ಯೆ ಘಟನೆಗಳನ್ನು ನಾವು ನೋಡಿದ್ದೇವೆ. ಮನೆಯಲ್ಲಿ ಒಪ್ಪಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂಬ ಸುದ್ದಿಗಳನ್ನು ಸಾಕಷ್ಟು ಓದಿದ್ದೇವೆ. ಹುಡುಗ -ಹುಡುಗಿಯರಿಗೆ ಈ ವಯಸ್ಸಿನಲ್ಲಿ ಜಾತಿಯ ಅರಿವು, ಅಂತಸ್ತಿನ ಅರಿವು ಯಾವುದೂ ಕಾಣಿಸುವುದಿಲ್ಲ. ಅವರಿಗೆ ಅವರಿಬ್ಬರದ್ದೇ ಒಂದು ಜಗತ್ತು. ಆದರೆ ಅವರು ಮುಂದೆ ೪೦ ವರ್ಷ ತಲುಪುತ್ತಾರಲ್ಲ. ಆಗ ಗೊತ್ತಾಗುತ್ತದೆ. ಆಯ್ಯೋ ಆಗ ನಾನು ಎಷ್ಟು ಸಮಯ ವ್ಯರ್ಥ ಮಾಡಿದೆ, ಚೆನ್ನಾಗಿ ಓದಿದ್ದರೆ ಇನ್ನೂ ಉತ್ತಮ ಕೆಲಸ ಮಾಡಬಹುದಿತ್ತು. ಸರ್ಕಾರಿ ಕೆಲಸ ಹಿಡಿಯಬಹುದಿತ್ತು ಎಂಬ ಇತ್ಯಾದಿ ಇತ್ಯಾದಿ ಚಿಂತೆಗಳು ೪೦ ರ ನಂತರ ಪ್ರಾರಂಭವಾಗುತ್ತದೆ. ಏನು ಮಾಡುವುದು ಆಗ ಕಾಲ ಮಿಂಚಿ ಹೋಗಿರುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button