Kannada NewsKarnataka NewsPolitics

*ದೊಡ್ಡವರು ಚನ್ನಪಟ್ಟಣ ಜನರ ಸಮಸ್ಯೆ ಬಗೆಹರಿಸಿಲ್ಲ, ಹೀಗಾಗಿ ಬಂದಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿದ್ದ ದೊಡ್ಡವರು, ಅನುಭವಿ ನಾಯಕರು ಇಲ್ಲಿನ ಜನರ ಸಮಸ್ಯೆ ಬಗೆಹರಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿದರು.

ಚನ್ನಪಟ್ಟಣ ಈಗ ನೆನಪಾಗಿದೆಯೇ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, ಇಷ್ಟು ದಿನ ಈ ಕ್ಷೇತ್ರ ಖಾಲಿ ಇರಲಿಲ್ಲ. ಇಲ್ಲಿ ಅನುಭವಿಗಳು ದೊಡ್ಡವರು ಇದ್ದರು. ಅವರು ಜನರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ನೀಡುತ್ತಾರೆ ಎಂದು ಭಾವಿಸಿದ್ದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ಮಾಡಿದ ಬಳಿಕ ಪರಿಸ್ಥಿತಿ ತಿಳಿಯಿತು. ಇಲ್ಲಿ ಏನೂ ಆಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದಕ್ಕೆ ನಮ್ಮ ಶೈಲಿಯಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಮನಗರ, ಕನಕಪುರ, ಬೆಂಗಳೂರಿನಲ್ಲೂ ಈ ಕಾರ್ಯಕ್ರಮ ಮಾಡಿದ್ದೇವೆ ಎಂದು ತಿಳಿಸಿದರು.

ಮಾಧ್ಯಮಗಳನ್ನು ಹೊರಗಿಟ್ಟು ಸಭೆ ಮಾಡಿ ಅಧಿಕಾರಿಗಳನ್ನು ಎದುರಿಸಿದ್ದೀರಿ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಯಾರಿಗಾದರೂ ಬೆದರಿಕೆ ಹಾಕಿದ್ದರೆ ದೂರು ನೀಡಲಿ” ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರು ಸೇರ್ಪಡೆಗೆ ಸೂಚನೆ

ಹೊಸ ಮತದಾರರ ಸೇರ್ಪಡೆಗೆ ಸೂಚಿಸಿದ್ದೀರಾ ಎಂದು ಕೇಳಿದಾಗ, “ಲೋಕಸಭಾ ಚುನಾವಣೆ ಸಮಯದಲ್ಲಿ ಮುಸಲ್ಮಾನ ಸಮುದಾಯದವರ ಹೆಸರು ತೆಗೆದು ಹಾಕಲಾಗಿದೆ ಎಂದು ದೂರುಗಳು ಬಂದಿದ್ದವು. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಮತ್ತೆ ಈ ಮತದಾರರ ಮನೆಗೆ ಭೇಟಿ ನೀಡಿ ಅವರ ಹೆಸರನ್ನು ಮತ್ತೆ ಸೇರಿಸಲು ಸೂಚಿಸಿದ್ದೇನೆ. ಹೊರಗಿನಿಂದ ಬೇರೆಯವರನ್ನು ತಂದು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. ಇಲ್ಲಿ ಹೊಸದಾಗಿ ಸೇರಿಸಬೇಕು ಎಂದರೆ ಹಳೇ ಬೇರೆ ಕಡೆ ಇರುವ ಮತದಾರರ ಹೆಸರನ್ನು ಅಳಿಸಬೇಕು. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಈ ರೀತಿ ಬೇರೆಯವರನ್ನು ತಂದು ಸೇರಿಸಲು ಆಗುವುದಿಲ್ಲ” ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಚುನಾವಣಾ ಅಕ್ರಮ ಮಾಡುತ್ತಿದ್ದು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಕೇವಲ ಪತ್ರ ಯಾಕೆ ಬರೆಯುತ್ತಾರೆ. ಚುನಾವಣಾ ಆಯೋಗದ ಕಚೇರಿಗೆ ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿ ಮಲಗಲಿ” ಎಂದು ತಿಳಿಸಿದರು.

ಶಿವಕುಮಾರ್ ಅವರ ಚನ್ನಪಟ್ಟಣ ಪ್ರವೇಶ ಮೈತ್ರಿನಾಯಕರನ್ನು ಭಯ ಬೀಳಿಸಿದೆಯೇ ಎಂದು ಕೇಳಿದಾಗ, “ಅಲ್ಲಿ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಹೀಗಾಗಿ ಅವರು ಭಯ ಯಾಕೆ ಬೀಳುತ್ತಾರೆ” ಎಂದರು.

ಕುಮಾರಸ್ವಾಮಿ ಅವರು ಶಾಸಕರಾಗಿ ಇಲ್ಲಿ ಕೆಲಸ ಮಾಡಿಲ್ಲವೇ ಎಂದು ಕೇಳಿದಾಗ, “ಅವರು ಕೆಲಸ ಮಾಡಿದ್ದಾರೋ ಇಲ್ಲವೋ ಎಂದು ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಪಕ್ಷದಲ್ಲಿ ಮೂವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಕೇಳಿದಾಗ, “ಆ ಬಗ್ಗೆ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಜನರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ತೀರ್ಮಾನ

ಉಪಚುನಾವಣೆಗೆ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಮತದಾರರು ಹಾಗು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ನಾನು, ಮುಖ್ಯಮಂತ್ರಿಗಳು ಹಾಗೂ ಪ್ರದಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡುತ್ತೇವೆ. ನಮ್ಮ ಪಕ್ಷದ ಚುನಾವಣಾ ಸಮಿತಿಯೂ ಚರ್ಚೆ ಮಾಡಿ ಯಾರು ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತದೆ” ಎಂದು ತಿಳಿಸಿದರು. ಸಮಿತಿ ನಿಮ್ಮ ಹೆಸರು ಸೂಚಿಸಿದರೆ ನೀವು ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ, “ಪಕ್ಷ ಹೇಳಿದಂತೆ ನಾವು ಕೇಳಬೇಕು” ಎಂದು ತಿಳಿಸಿದರು.

ಕನಕಪುರದ ಹೆದರಿಕೆ, ಬೆದರಿಕೆ, ಭ್ರಷ್ಟಾಚಾರದ ಮಾದರಿ ನಮಗೆ ಬೇಡ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕನಕಪುರದಲ್ಲಿ ಭ್ರಷ್ಟಾಚಾರದ ಬಗ್ಗೆ ಏನಾದರೂ ದೂರು ಬಂದಿದೆಯೇ?” ಎಂದು ಕೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, “ಜನ ನಮಗೆ ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸುರೇಶ್ ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಮಂಜುನಾಥ್ ಅವರು ಸುರೇಶ್ ಅವರಿಗಿಂತ ಹೆಚ್ಚಿನ ಕೆಲಸ ಮಾಡಲಿ” ಎಂದರು.

ಸುರೇಶ್ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಪಕ್ಷ ಅವರನ್ನು ಸ್ಪರ್ಧಿಸಲು ಸೂಚಿಸಿದರೆ ಅವರು ನಿಲ್ಲುತ್ತಾರಾ ಎಂದು ಕೇಳಿದಾಗ, “ಪಕ್ಷ ಹೇಳಿದರೆ ನಾನಾಗಲಿ, ಸುರೇಶ್ ಆಗಲಿ ಕೇಳಬೇಕು. ಸುರೇಶ್ ಅವರಿಗೆ ಸಂಸತ್ ಚುನಾವಣೆಗೂ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಸ್ಪರ್ಧೆ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ” ಎಂದು ತಿಳಿಸಿದರು.ಕುಮಾರಸ್ವಾಮಿ ಅವರು ನಿನ್ನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಬಗ್ಗೆ ಕೇಳಿದಾಗ, “ಬಹಳ ಸಂತೋಷ, ಅವರಿಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.

ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ಅವರು ಕಲ್ಲು ಹೊಡೆಯುತ್ತಿದ್ದರು ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಕೇಳಿದಾಗ, “ಹೌದು, ಕಲ್ಲು ಒಡೆಯುತ್ತಿದ್ದೇವೆ. ಈಗಲೂ ಒಡೆಯುತ್ತಿದ್ದೇವೆ” ಎಂದು ಲೇವಡಿ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button