
ಮರಣೋತ್ತರ ಪರೀಕ್ಷೆ ವೇಳೆ ಕೈ ಕಾಲು ಆಡಿಸಿದ ಚುನಾವಣೆ ಸಿಬ್ಬಂದಿ
ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ: ಚುನಾವಣೆ ತರಬೇತಿ ವೇಳೆ ಕುಸಿದುಬಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಯ್ದ ಸಂದರ್ಭದಲ್ಲಿ ಆತ ಕೈ ಕಾಲು ಆಡಿಸಿದ್ದಾನೆ.
ಚಾಮರಾಜ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಖಜಾನೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಗದೀಶ್ ಎನ್ನುವವರು ಹನೂರಿನ ಖಾಸಗಿ ಶಾಲೆಯಲ್ಲಿ ನಡೆಯುತ್ತಿದ್ದ ಚುನಾವಣೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಎದೆ ನೋವಿನಿಂದ ಕುಸಿದು ಬಿದ್ದರು. ತಕ್ಷಣ ಕಾಮಗೆರೆ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಜಗದೀಶ ಮೃತನಾಗಿದ್ದಾನೆ ಎಂದು ವೈದ್ಯರು ಘೋಷಿಸಿದರು.
ನಂತರ ಅವರನ್ನು ಮರಣೋತ್ತರ ಪರೀಕ್ಷೆಗೆಂದು ಒಯ್ಯಲಾಯಿತು. ಅಲ್ಲಿ ಜಗದೀಶ್ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲ ಸಿದ್ಧತೆ ಮಾಡಿಕೊಂಡು ಇನ್ನೇನು ಮರಣೋತ್ತರ ಪರೀಕ್ಷೆ ಆರಂಭಿಸಬೇಕೆನ್ನುವ ಹೊತ್ತಿಗೆ ಅವರು ಕೈ ಕಾಲು ಆಡಿಸಿದ್ದಾರೆ. ತಕ್ಷಣ ವೈದ್ಯರನ್ನು ಕರೆದು ಪರೀಕ್ಷಿಸಿದಾಗ ಜಗದೀಶ್ ಉಸಿರಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಜಗದೀಶ ಮೃತನಾಗಿದ್ದಾನೆಂದು ಘೋಷಿಸಿದ ವೈದ್ಯರ ವಿರುದ್ಧ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ವೈದ್ಯರು ಸರಿಯಾಗಿ ಪರೀಕ್ಷಿಸಿದ್ದರೆ ಇನ್ನಷ್ಟು ಬೇಗ ಚಿಕಿತ್ಸೆ ಆರಂಭಿಸಬಹುದಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ