Kannada NewsKarnataka NewsLatest

ಬಿಜೆಪಿಯಿಂದ ಜಿಲ್ಲಾ ಕಾರ್ಯದರ್ಶಿ, ಮುನವಳ್ಳಿ ಪುರಸಭೆ ಸದಸ್ಯನ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುನವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಜಿಲ್ಲಾ ಕಾರ್ಯದರ್ಶಿಯೂ ಆಗಿದ್ದ ಓರ್ವ ಸದಸ್ಯನನ್ನು ಪಕ್ಷದಿಂದ 2 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

ಸವದತ್ತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುನವಳ್ಳಿ ಪುರಸಭೆಗೆ ಎರಡನೇ ಅವಧಿಗೆ ದಿನಾಂಕ ೦೪.೧೧.೨೦೨೦ ರಂದು ನಡೆದ ಅಧ್ಯಕ್ಷ & ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ  ವಿಜಯ ಅಮಠೆ ಅವರ ವಿರುದ್ಧವಾಗಿ ಭಾರತೀಯ ಜನತಾ ಪಾರ್ಟಿ, ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ ದೇವಪ್ಪಾ ಪೂಜೇರ ಇವರು ತಮ್ಮ ತಾಯಿ  ಪಾರ್ವತಿ ಪೂಜೇರ @ ಜಂಬರಿ ಇವರನ್ನು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಿ ಅವರನ್ನು ಬೆಂಬಲಿಸಿದ್ದು ತಿಳಿದು ಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ  ಕರ್ನಾಟಕ ವಿಧಾನ ಸಭೆ ಉಪ ಸಭಾಧ್ಯಕ್ಷರೂ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದು ವಿಷಯ ತಿಳಿಸಿದ್ದಾರೆ. ಅಲ್ಲದೇ ಬಿಜೆಪಿ ಸವದತ್ತಿ ಮಂಡಲ ಅಧ್ಯಕ್ಷ ಈರಣ್ಣಾ ಚಂದರಗಿ ಕಾರ್ಯಕರ್ತರೊಡನೆ ಇವರಿಗೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಬಾರದೆಂದು ತಿಳಿಸಿದರೂ ಸಹ ಅದಕ್ಕೆ ಕಿವಿಗೊಡದೆ ಇವರು ಪಕ್ಷವಿರೋಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಕಾರಣ ಭಾರತೀಯ ಜನತಾ ಪಾರ್ಟಿಯಲ್ಲಿ ಇವರಿಗೆ ನೀಡಲಾದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಹುದ್ದೆಯ ಜೊತೆಗೆ ಪಕ್ಷದ ಇನ್ನುಳಿದ ಜವಾಬ್ದಾರಿಗಳನ್ನು ಹಿಂಪಡೆದು ಇವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಉಚ್ಛಾಟಿಸಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಮುನವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ; ಕಾಂಗ್ರೆಸ್ ಗದ್ದಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button