
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಠೇವಣಿ ಇಟ್ಟ ಹಣಕ್ಕೆ ತಿಂಗಳಿಗೆ 15- 20 ಸಾವಿರ ರೂ. ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ ಸುಮಾರು 30 ಕೋಟಿ ಹಣ ಸಂಗ್ರಹಿಸಿದ ಖದೀಮರು ಈಗ ನಾಪತ್ತೆಯಾಗಿದ್ದಾರೆ.
ಚಾಲಾಕಿದ್ವಯರನ್ನು ನಂಬಿ ಬಡ್ಡಿ ಆಸೆಗೆ ಬಿದ್ದು ಲಕ್ಷಲಕ್ಷ ಹಣ ಠೇವಣಿ ಇರಿಸಿ ನಾಮ ತಿಕ್ಕಿಸಿಕೊಂಡವರೆಲ್ಲ ಈಗ ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿದ್ದಾರೆ.
ಕಿರಣ್ ಹಾಗೂ ರಮೇಶ್ ಎಂಬುವವರು ಟೋಪಿ ಹಾಕಿದ ವಂಚಕರು. ಇವರು ಈಶ್ವರ ಎಂಟರ್ಪ್ರೈಸಸ್ ಎನ್ನುವ ಕಂಪನಿ ಮಾಡಿಕೊಂಡು, 400 ಕ್ಕೂ ಹೆಚ್ಚು ಜನರಿಂದ ಕೋಟ್ಯಾಂತರ ಹಣ ಪಡೆದು ನಾಪತ್ತೆ ಆಗಿದ್ದಾರೆ. ಈಗ ಹಣ ಕಳೆದುಕೊಂಡವರ ಪೈಕಿ 110 ಜನ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೊದಲಿಗೆ ಬಡ್ಡಿ ಆಸೆ ತೋರಿಸಿದ ಇವರು ಆರಂಭದಲ್ಲಿ ಹೇಳಿದಂತೆಯೇ 15- 20 ಸಾವಿರ ಬಡ್ಡಿ ನೀಡಿದ್ದಾರೆ. ಇದನ್ನು ನಂಬಿದ ಜನ ಕಾಂಚಾಣ ನರ್ತನಕ್ಕೆ ಮನಸೋತು ಮತ್ತಷ್ಟು ಹಣ ಸುರಿದಿದ್ದಾರೆ. ಇವರನ್ನು ಅನುಸರಿಸಿ ಹಲವರು ಹಣ ಹೂಡಿದ್ದಾರೆ. ಸುಮಾರು 30 ಕೋಟಿಯಷ್ಟು ಹಣ ಸಂಗ್ರಹವಾಗುತ್ತಲೇ ಕಿರಣ್ ಹಾಗೂ ರಮೇಶ್ ಅಲ್ಲಿಂದ ಜಾಗ ಖಾಲಿ ಮಾಡಿದವರು ಎಲ್ಲಿದ್ದಾರೆಂಬುದು ಪತ್ತೆಯಾಗಿಲ್ಲ.
ಇತ್ತೀಚೆಗೆ ರಮೇಶ ರಾತ್ರಿ ಮನೆ ಖಾಲಿ ಮಾಡುವಾಗ ಹಣ ಹೂಡಿದ ಕೆಲವರು ಆಕ್ಷೇಪಿಸಿದ್ದಾರೆ. ಮನೆ ಸಾಮಾಗ್ರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ವಂಚಕರು ಬಾಂಡ್ ಪೇಪರ್ ಹಾಗೂ ಚೆಕ್ ಗಳನ್ನು ನೀಡಿ ಜನರನ್ನು ನಂಬಿಸಿ ಕೊನೆಗೂ ಕೈ ಕೊಟ್ಟಿದ್ದಾರೆ.
ಕಿರಣ್- ರಮೇಶ್ ಜೋಡಿಯ ಸಂತ್ರಸ್ತರೆಲ್ಲ ಈಗ ಸಭೆ ಆಯೋಜಿಸಿ ಮುಂದಿನ ನಡೆಗಳ ಬಗ್ಗೆ ನಿರ್ಧರಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ