ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಕಳೆದ ೨೦ ವರ್ಷಗಳಿಂದಲೂ ತಾಯಂದಿರ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಸಂಶೋಧನಾ ಅಧ್ಯಯನಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಸಂಶೋಧನಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಜಗತ್ತಿನಾದ್ಯಂತ ಹೆರಿಗೆಯ ನಂತರದಲ್ಲಿ ಉಂಟಾಗುವ ಅತಿಯಾದ ರಕ್ತಸ್ರಾವ (ಪ್ರಸವಾನಂತರದ ರಕ್ತಸ್ರಾವ, ಪಿಪಿಹೆಚ್) ತಾಯಂದಿರ ಸಾವಿಗೆ ಸಾಮಾನ್ಯ ಕಾರಣವಾಗಿದೆ. ಜಾಗತಿಕವಾಗಿ, ತಾಯಂದಿರ ಒಟ್ಟಾರೆ ಸಾವುಗಳಲ್ಲಿ ಸುಮಾರು ೩೫%ರಷ್ಟು ಪಿಪಿಹೆಚ್‌ಗೆ ಸಂಬಂಧಿಸಿದೆ. ಪ್ರಸವಾನಂತರದ ರಕ್ತಸ್ರಾವವನ್ನು ತಡೆಗಟ್ಟಲು ಆಕ್ಸಿಟೋಸಿನ್ ಪ್ರಮಾಣಿತ ಔಷಧಿಯಾಗಿ ಅತಿ ಹೆಚ್ಚು ಬಳಕೆಯಲ್ಲಿದೆ. ಆದರೆ ಇದನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡುವುದು ಅವಶ್ಯಕ. ಇದಕ್ಕಾಗಿ ರೆಫ್ರಿಜರೇಟರಗಳಲ್ಲಿ ಸಂಗ್ರಹಣೆ ಮತ್ತು ಸಾಗಣೆಯ ಅಗತ್ಯವಿರುತ್ತದೆ. ಇದು ಭಾರತದಂತಹ ಕೆಳ ಹಾಗೂ ಮಧ್ಯಮ ಸಂಪನ್ಮೂಲ ದೇಶಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ವ್ಯವಸ್ಥೆ ಮಾಡುವುದು ಕಷ್ಟ. ಕೋಣೆಯ ಉಷ್ಣಾಂಶದಲ್ಲಿ ಸ್ಥಿರವಾಗಿರುವ (ಆರ್‌ಟಿಎಸ್) ಕಾರ್ಬೆಟೋಸಿನ್‌ನ ಹೊಸ ಸೂತ್ರೀಕರಣವನ್ನು ಆಕ್ಸಿಟೋಸಿನ್‌ನೊಂದೆಗೆ ಹೋಲಿಸಲು ಭಾರತ ಸೇರಿದಂತೆ ೧೦ ದೇಶಗಳ ೨೪ ಆಸ್ಪತ್ರೆಗಳಲ್ಲಿ ೭ ಜುಲೈ, ೨೦೧೫ ರಿಂದ ಜನವರಿ ೩೦, ೨೦೧೮ರ ನಡುವೆ ವಿವಿಧ ದೇಶಗಳಲ್ಲಿ CHAMPION ಸಂಶೋಧನಾ ಅಧ್ಯಯನವನ್ನು ನಡೆಸಲಾಯಿತು. ಈ ಅಧ್ಯಯನದಲ್ಲಿ ಒಟ್ಟು ೨೯,೬೪೫ ಗರ್ಭಿಣಿ ಮಹಿಳೆಯರು ಭಾಗವಹಿಸಿದ್ದಾರೆ. ಇದರಲ್ಲಿ ಶೇಕಡ ೨೫ ಪ್ರತಿಷತದಷ್ಟು ಭಾರತದ ಆಸ್ಪತ್ರೆಗಳಲ್ಲಿ ಭಾಗವಹಿಸಿರುವುದು ವಿಶೇಷ. ಈ ಅಧ್ಯಯನವು ಪ್ರಸವ ನಂತರದ ರಕ್ತಸ್ರಾವವನ್ನು ತಡೆಗಟ್ಟಲು ಆಕ್ಸಿಟೋಸಿನ್‌ಗೆ ಹೋಲಿಸಿದರೆ ಆರ್‌ಟಿಎಸ್ ಕಾರ್ಬೆಟೋಸಿನ್ ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ತೋರಿಸಿದೆ. ಆರ್‌ಟಿಎಸ್ ಕಾರ್ಬೆಟೋಸಿನ್ ಈ ಶಾಖ ಸ್ಥಿರ ಸೂತ್ರೀಕರಣವು ಹೆರಿಗೆಯ ನಂತರ ಅತಿಯಾದ ರಕ್ತಸ್ರಾವವನ್ನು ತಡೆಗಟ್ಟಲು ಹೆಚ್ಚು ಉಪಯುಕ್ತವಾಗಿದೆ. ಈ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಾಯೋಜಕತ್ವದಡಿಯಲ್ಲಿ ಮೆರ್ಕ ಶಾರ್ಪ ಮತ್ತು ಡೊಹ್ಮ್ (ಎಂಎಸ್‌ಡಿ)ಯ ಧನಸಹಾಯದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಆರ್‌ಟಿಎಸ್ ಕಾರ್ಬೆಟೋಸಿನ್ ಅನ್ನು ಫೆರಿಂಗ್ ಫಾರ್ಮಾಸ್ಯೂಟಿಕಲ್ಸ್ ಮತ್ತು ಆಕ್ಸಿಟೋಸಿನ್ ನೊವಾರ್ಟಿಸ್ ಔಷಧಗಳನ್ನು ಈ ಸಂಶೋಧನಾ ಅಧ್ಯಯನದ ಸಮಯದಲ್ಲಿ ಉಚಿತವಾಗಿ ನೀಡಿತು. ಈ ಸಂಶೋಧನೆಯ ಫಲಿತಾಂಶವನ್ನು ಜೂನ್ ೨೦೧೮ರಲ್ಲಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ತದನಂತರ ಈ ಸಂಶೋಧನಾ ಫಲಿತಾಂಶದ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮಾರ್ಗಸೂಚಿಗಳನ್ನು ನವೀಕರಿಸಿದಲ್ಲದೆ ಡ್ರಗ್ ಕಂಟ್ರೋಲ್‌ರ್ ಜನರಲ್ ಆಫ್ ಇಂಡಿಯಾ ಇವರು ಅನುಮೋದಿಸಿದ್ದಾರೆ.
ಆರ್‌ಟಿಎಸ್ ಕಾರ್ಬೆಟೋಸಿನ್‌ನ ಜಾಗತಿಕ ಅನಾವರಣವನ್ನು ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಕನ್ವೆನ್ಷನ ಸೆಂಟರ್‌ನಲ್ಲಿ ೨೦೨೧ ಜುಲೈ ೨೩ ರಂದು ಆಯೋಜಿಸಿದೆ. ಈ ಚುಚ್ಚುಮದ್ದನ್ನು ವಿಶ್ವದಲ್ಲಿಯೇ ಮೊದಲ ಬಾರಿಗೆ ಇದೇ ದಿನದಂದು ಕೆಎಲ್‌ಇ ಡಾ. ಪ್ರಭಾಕರ್ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ನೀಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷರು ಮತ್ತು ಕೆಎಲ್‌ಇ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಡೀಮ್ಡ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಪ್ರಭಾಕರ್ ಕೋರೆಯವರು ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖ ಪ್ರಸೂತಿ ತಜ್ಞರೂ, ಭಾರತದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ರಾಷ್ಟ್ರೀಯ ಸಂಸ್ಥೆ FOGSIಯ ಅಧ್ಯಕ್ಷರು ಹಾಗೂ ಹೈದರಾಬಾದಿನ ಯಶೋಧಾ ಆಸ್ಪತ್ರೆಗಳ ಹಿರಿಯ ಪ್ರಸೂತಿ ತಜ್ಞರಾದ ಡಾ. ಶಾಂತಾ ಕುಮಾರಿ, ಬೆಂಗಳೂರಿನ ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಉಪಾಧ್ಯಕ್ಷೆ FIGO ಗರ್ಭಧಾರಣೆ ಮತ್ತು ಎನ್‌ಸಿಡಿ ಸಮಿತಿಯ ಸಲಹೆಗಾರರು ಆದ ಡಾ. ಹೇಮಾ ದಿವಾಕರ್, FOGSIಯ ಪೂರ್ವ ಉಪಾಧ್ಯಕ್ಷರು ಹಾಗೂ ICOGಯ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ. ಶೀಲಾ ಮಾನೆ, ಕರ್ನಾಟಕ ಸರ್ಕಾರದ ತಾಯಿಯ ಆರೋಗ್ಯದ ಉಪನಿರ್ದೇಶಕರಾದ ಡಾ. ಎನ್. ರಾಜ್ ಕುಮಾರ್, ಮತ್ತು ಫೆರಿಂಗ್ ಫಾರ್ಮಾಸ್ಯುಟಿಕಲ್ಸ್ ಮತ್ತು ಮರ್ಕ್ ಫಾರ್ ಮದರ್ಸ್ ಪ್ರತಿನಿಧಿಳು ಭಾಗವಹಿಸಲಿದ್ದಾರೆ ಎಂದು ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ನಿರ್ದೇಶಕರಾದ ಡಾ. ಶಿವಪ್ರಸಾದ್ ಎಸ್. ಗೌಡರ ಅವರು ತಿಳಿಸಿದ್ದಾರೆ.
Global Launch of RTS Carbetocin Ferring at KLE-JNMC, Belagavi
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ