ಸಂಗಮೇಶ ಆರ್. ನಿರಾಣಿ
ನದಿಗಳು ನಮ್ಮ ಜೀವಂತಿಕೆಯ ಸಂಕೇತ. ನದಿ ರಾಷ್ಟ್ರಸ್ಯ ಮಹಾ ಅಮೃತಂ ಎಂದು ವೇದ-ಉಪನಿಷತ್ತುಗಳಲ್ಲಿ ಹೇಳಿರುವುದು ಮನುಕುಲಕ್ಕೆ ಇರುವ ನದಿಗಳ ಅವಶ್ಯಕತೆಯನ್ನು ಸಾರಿ ಹೇಳುತ್ತದೆ. ಇಂದಿನ ೨೧ ನೇ ಶತಮಾನದಲ್ಲಂತೂ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡದ ರಾಜ್ಯ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಪ್ರತಿ ಪ್ರಾಂತ್ಯಕ್ಕೂ ಜೀವನದಿಗಳನ್ನು ಪ್ರಕೃತಿಮಾತೆ ಕರುಣಿಸಿದ್ದಾಳೆ. ಅದರಂತೆ ಕೃಷ್ಣೆ ನಮ್ಮ ಉತ್ತರ ಕರ್ನಾಟಕದ ಪಾಲಿಗೆ ಜೀವಗಂಗೆ.
ಕೃಷ್ಣಾ ನದಿಯ ಪರಿಚಯ:
ಕೃಷ್ಣಾ ನದಿಯು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಳೇಶ್ವರದಲ್ಲಿ ಹುಟ್ಟುತ್ತದೆ. ಇದು ಭಾರತದಲ್ಲಿಯೇ ೪ನೇ ಅತಿದೊಡ್ಡ ನದಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ರಾಜ್ಯಗಳಲ್ಲಿ ೧೩೯೨ ಕಿ.ಮೀ ಹರಿದು ಆಂದ್ರಪ್ರದೇಶದ ಕೃಷ್ಣಾ ಜಿಲ್ಲೆಯ ಹಂಸಲಾದೇವಿ ಎಂಬಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕೃಷ್ಣೆಯ ಉದ್ದ ೪೮೩ ಕಿ.ಮೀ. ವೀಣಾ, ಕೊಯ್ನಾ, ದೂದಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಮೂಸಿ, ದಂಡಿ ಎಂಬ ಪ್ರಮುಖ ನದಿಗಳು ಸೇರಿದಂತೆ ೭೫ಕ್ಕೂ ಅಧಿಕ ಇವುಗಳ ಉಪನದಿಗಳು ಕೃಷ್ಣೆಯನ್ನು ಸೇರಿಕೊಳ್ಳುತ್ತವೆ.
ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ೨,೫೮,೯೪೮ ಚದರ ಕಿ.ಮೀ. ಇದು ಭಾರತದ ಒಟ್ಟು ಭೂಪ್ರದೇಶದ ಶೇ. ೮% ಭೂಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಅದರಲ್ಲಿ ಅತಿಹೆಚ್ಚು ಕರ್ನಾಟಕದಲ್ಲಿ ಅಂದರೆ ೧,೧೩,೨೭೧ ಚ.ಕಿ.ಮೀ, ಮಹಾರಾಷ್ಟ್ರದಲ್ಲಿ ೬೯,೪೨೫ ಚ.ಕಿ.ಮೀ ಮತ್ತು ಆಂದ್ರಪ್ರದೇಶ, ತೆಲಂಗಾಣದಲ್ಲ್ಲಿ ೭೬,೨೫೨ ಚ. ಕಿ.ಮೀ. ವ್ಯಾಪಿಸಿದೆ. ಒಟ್ಟು ನದಿ ಪಾತ್ರದಲ್ಲಿ ೨,೦೩,೦೦೦ ಚ. ಕಿ.ಮೀ ಕೃಷಿ ಯೋಗ್ಯ ಭೂಮಿ ಇದ್ದು, ಇದು ಭಾರತದ ಒಟ್ಟು ಕೃಷಿಯೋಗ್ಯ ಭೂಮಿ ಶೇ. ೧೦.೪% ಪ್ರತಿಶತವಾಗಿದೆ.
ಕೃಷ್ಣಾ ಬೆಸಿನ್ ಮೂಲಕ ವಾರ್ಷಿಕ ೨೭೫೮.೦೮ ಟಿಎಂಸಿ ಅಡಿ ನೀರು ಲಭ್ಯವಿದ್ದು, ಅದರಲ್ಲಿ ೨೦೪೮.೨೫ ಟಿಎಂಸಿ ಅಡಿ ನೀರು ಬಳಕೆ ಸಾಧ್ಯವಿದೆ. ಮಹಾರಾಷ್ಟ್ರದ ಧೂಮ ಡ್ಯಾಂ, ಕೊಯ್ನಾ, ವಾರ್ನಾ ಕರ್ನಾಟಕದ ಹಿಪ್ಪರಗಿ, ಆಲಮಟ್ಟಿ, ನಾರಾಯಣಪೂರ ಆಂದ್ರಪ್ರದೇಶ ಮತ್ತು ತೆಲಂಗಾಣದ ಜುರಲಾ, ಶ್ರೀಶೈಲಂ, ನಾಗಾರ್ಜುನ ಸಾಗರ, ಪ್ರಕಾಶಂ ಬ್ಯಾರೇಜ್, ಪುಲಿಚಿಂತಲಾ ಎಂಬಲ್ಲಿ ಪ್ರಮುಖ ಆಣೆಕಟ್ಟುಗಳನ್ನು ಕಟ್ಟಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ:
ಕರ್ನಾಟಕಕ್ಕೆ ದೊರೆಯುವ ಕೃಷ್ಣಾ ನದಿ ನೀರಿನ ಸದ್ಬಳಕೆಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪಿಸಿ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವಣೆಗೆ ಕೇಂದ್ರ ಸರ್ಕಾರ ೨೨-೫-೧೯೫೯ ರಂದು ತಾತ್ವಿಕ ಒಪ್ಪಿಗೆ ನೀಡಿತು. ಈ ಯೋಜನೆ ಅಧಿಕೃತವಾಗಿ ಜನ್ಮತಾಳಿ ೬ ದಶಕ ಕಳೆದರೂ ಪೂರ್ಣಪ್ರಮಾಣದಲ್ಲಿ ಯೋಜನೆ ಜಾರಿಯಾಗಿಲ್ಲ.
ಕೃಷ್ಣಾ ನದಿಯ ಎಲ್ಲ ಉಪನದಿಗಳು ಸೇರಿ ಕರ್ನಾಟಕಕ್ಕೆ ಲಭಿಸುವ ಒಟ್ಟು ೭೩೪ ಟಿ.ಎಂ.ಸಿ ಅಡಿ ನೀರಿನ ಪೈಕಿ ೩೦೩ ಟಿಎಂಸಿ ಅಡಿ ಕೃಷ್ಣಾ ನದಿಯಿಂದ ದೊರೆಯುತ್ತದೆ. ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣದ ಬಚಾವತ್ ಆಯೋಗ ಸ್ಕೀಮ್ ’ಎ’ನಲ್ಲಿ ನಿಗದಿಪಡಿಸಿದಂತೆ ಆಲಮಟ್ಟಿಯಲ್ಲಿ ೧೨೩ ಟಿಎಂಸಿ ಅಡಿ (ಆರ್.ಎಲ್. ೫೧೯.೬೦ ಎತ್ತರದವರೆಗೆ), ಹಿಪ್ಪರಗಿಯಲ್ಲಿ ೫ ಟಿಎಂಸಿ ಅಡಿ, ಹಾಗೂ ನಾರಾಯಣಪೂರದಲ್ಲಿ ೩೭ ಟಿಎಂಸಿ ಅಡಿ ನೀರು ಸಂಗ್ರಹಿಸುವ ಮೂಲಕ ಪೂರ್ಣ ೧೭೩ ಟಿಎಂಸಿ ಅಡಿ ನೀರು ಬಳಕೆಯೊಂದಿಗೆ ೧೫,೨೯,೫೮೨.೩೧ ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಿಂದ ೨೦೧ ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು, ೧೩೬ ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಬಚಾವತ್ ಆಯೋಗದ ಸ್ಕೀಮ್ ’ಬಿ’ನಲ್ಲಿ ದೊರೆಯುವ ೧೩೦ ಟಿಎಂಸಿ ಅಡಿ ನೀರನ್ನು ಉಪಯೋಗಿಸಿಕೊಂಡು ವಿಜಯಪೂರ, ಬಾಗಲಕೊಟ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ೧೩,೧೦,೮೩೨.೨೭ ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯುಕೆಪಿ-೩ರಡಿಯಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು ಆರ್.ಎಲ್. ೫೧೯.೬೦ ಮೀಟರ್‌ನಿಂದ ಆರ್.ಎಲ್. ೫೨೪.೨೫೬ ಮೀಟರ್‌ಗೆ ಎತ್ತರಿಸುವುದು ಸೇರಿದಂತೆ ೯ ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಲು ೫೧,೧೪೮.೯೪ ಕೋಟಿ ರೂ. ವೆಚ್ಚವಾಗುವುದು.
ಇದರಿಂದಾಗಿ ಮತ್ತೆ ಬಾಗಲಕೊಟ, ವಿಜಯಪೂರ ಜಿಲ್ಲೆಗಳ ೨೦ ಗ್ರಾಮಗಳು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆ. ಜಲಾಶಯದ ಹಿನ್ನಿರಿನಲ್ಲಿ ೪೫,೪೫೨.೨೮ ಎಕರೆ ಭೂಮಿ ಮುಳಗಡೆ, ೯ ಉಪ ಯೋಜನೆಗಳ ಕಾಲುವೆ ನಿರ್ಮಾಣಕ್ಕಾಗಿ ೨೧,೭೪೬ ಎಕರೆ, ಗ್ರಾಮಿಣ ಭಾಗದಲ್ಲಿ ೨೦ ಗ್ರಾಮಗಳ ಪುನರ್ವಸತಿಗಾಗಿ ೪೯೦೮ ಎಕರೆ ಹಾಗೂ ಬಾಗಲಕೋಟ ಪಟ್ಟಣದ ಪುನರ್ವಸತಿಗಾಗಿ ೧೬೪೦.೨೦ ಎಕರೆ ಭೂಮಿಯನ್ನು ಸರ್ಕಾರ ಭೂ-ಸ್ವಾಧಿನಪಡಿಸಿಕೊಳ್ಳುತ್ತಿದೆ.
೧೯೯೦-೯೫ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಗಳು ನಡೆಯುತ್ತಿದ್ದಾಗಿನ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್.ಡಿ. ದೇವೆಗೌಡರು ಪ್ರಧಾನಿಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ ೪೦೦ ಕೋಟಿ ಅನುದಾನವನ್ನು ೭೦೦ ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ ರಾಜ್ಯಗಳು ಸಮರ್ಥವಾಗಿ ಉಪಯೋಗಿಸಿಕೊಂಡರೂ, ಕರ್ನಾಟಕದಲ್ಲಿ ಮಾತ್ರ ಯಾವುದೇ ಸರ್ಕಾರಗಳು ಕೃಷ್ಣೆಗಾಗಿ ಈ ಸೌಲಭ್ಯವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳದಿರುವುದು ದುರ್ದೈವದ ಸಂಗತಿ.
ನ್ಯಾ. ಬ್ರಿಜೇಶಕುಮಾರ ಆಯೋಗ ವರದಿ ಗೆಜಟ್ ಪ್ರಕಟಣೆ:
ನ್ಯಾ. ಬ್ರಿಜೇಶಕುಮಾರ ಆಯೋಗವು ದಿ. ೩೦-೧೨-೨೦೧೦ ರಂದು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-೨ರಲ್ಲಿ ನೀಡಿದ ತಿರ್ಪಿನಂತೆ ಕರ್ನಾಟಕದ ಪಾಲಿನ ೧೭೭ ಟಿಎಂಸಿ ಅಡಿ ನೀರಿನಲ್ಲಿ ೧೩೦ ಟಿಎಂಸಿ ಅಡಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ-೩ರಡಿ ಬಳಕೆ ಮಾಡಲು ಕರ್ನಾಟಕ ಸರ್ಕಾರ ತಿರ್ಮಾನಿಸಿ ೨೪-೦೧-೨೦೧೨ರಂದು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ೫ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರೂ ಇಂದಿನವರೆಗೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲ.
ಇದರಿಂದಾಗಿ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ೨೦೧೨ರಲ್ಲಿ ಯೋಜನೆಗೆ ಅನುಮೋದನೆ ದೊರೆತಾಗ ಇದ್ದ ೧೭,೨೦೭ ಕೋಟಿ ಯೋಜನಾ ವೆಚ್ಚ ೦೯.೧೦.೨೦೧೭ರಂದು ಪರಿಷ್ಕರಿಸಿದ ದರಪಟ್ಟಿಯಲ್ಲಿ ೫೧,೧೪೮.೯೪ ಕೋಟಿಯಷ್ಟಾಗಿದೆ.
ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-೨ರ ತೀರ್ಪನ್ನು ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಪುರಸ್ಕರಿಸಿದ್ದು, ಆಂದ್ರಪ್ರದೇಶ ಸರ್ಕಾರ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ಸರ್ಕಾರವು ನ್ಯಾಯವಾದಿ ನಾರಿಮನ್ ಅವರನ್ನು ವಕೀಲರನ್ನಾಗಿ ನೇಮಿಸಿದೆ.
ಮುಂಬರುವ ೧೫ ದಿನಗಳಲ್ಲಿಯೇ ಅಂತಿಮ ವಿಚಾರಣೆ ದಿನಾಂಕ ನಿಗದಿಯಾಗಿದೆ. ನಮ್ಮ ಕಾನೂನು ತಜ್ಞರ ತಂಡ ಬಲಾಢ್ಯವಾಗಬೇಕು. ಯೋಜನೆ ಅನುಷ್ಠಾನಗೊಳ್ಳುವವರೆಗೆ ನೀರು ಸಂಗ್ರಹ ಸಾಧ್ಯವಿಲ್ಲದ್ದರಿಂದ ಆಂದ್ರ-ತೆಲಂಗಾಣ ಸರ್ಕಾರಗಳು ಉದ್ದೇಶಪೂರ್ವಕವಾಗಿ ಕೋರ್ಟ ಮೂಲಕ ಕಾಲಹರಣ ಮಾಡುತ್ತಿವೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸಂಗ್ರಹಣೆಯಲ್ಲಿ ೧೦-೧೫ ಟಿಎಂಸಿ ಅಡಿ ವ್ಯತ್ಯಾಸವದರೂ ಸರಿದೂಗಿಸಬಹುದು.
ಈಗ ಕಾಲಹರಣ ಮಾಡದೇ ಕೃಷ್ಣಾಕೊಳ್ಳದ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಇಚ್ಚಾಶಕ್ತಿ ಪ್ರಕಟಿಸುವುದರೊಂದಿಗೆ ಕರ್ನಾಟಕ ಸರ್ಕಾರವು ಮುತವರ್ಜಿ ವಹಿಸಿ ನ್ಯಾ. ಬ್ರಿಜೇಶಕುಮಾರ ಆಯೋಗದ ಕೃ.ಜ.ವಿ.ನ್ಯಾ. ತೀರ್ಪನ್ನು ಕೇಂದ್ರ ಸರ್ಕಾರದಲ್ಲಿ ಗೆಜೆಟ್ ಹೊರಡಿಸಿ, ಭೂಸ್ವಾಧೀನಪಡಿಸಿಕೊಂಡು ಪುನರ್‌ವಸತಿ ಹಾಗೂ ಪುನರ್‌ನಿರ್ಮಾಣ ಸೌಲಭ್ಯ ಕಲ್ಪಿಸಿ ೧೩೦ ಟಿಎಂಸಿ ಅಡಿ ನೀರು ಸಂಗ್ರಹಿಸಲು ಮುಂದಾಗಬೇಕು.
ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯಲಿ, ಜನ ಸಮುದಾಯ ಇಚ್ಚಾಶಕ್ತಿ ಪ್ರಕಟಿಸಲಿ:
ಹೊಸ ಭೂಸ್ವಾಧೀನ ಕಾಯ್ದೆ-೨೦೧೩ರ ಮಾರ್ಗಸೂಚಿಯಂತೆ ಭೂಸ್ವಾಧಿನ ಮತ್ತು ಪುನರ್‌ವಸತಿ ಹಾಗೂ ಪುನರ್‌ನಿರ್ಮಾಣ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯಬೇಕು. ಸರ್ಕಾರ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಏಕರೂಪ ಭೂಬೆಲೆಯೊಂದಿಗೆ ಸೂಕ್ತ ಸಹಾಯ ಮತ್ತು ಆಕರ್ಷಕ ಸೌಲಭ್ಯಗಳನ್ನು ನೀಡಬೇಕು.
ಸ್ಥಳೀಯ ಜನಪ್ರತಿನಿಧಿಗಳು, ನೀರಾವರಿ ಹೋರಾಟಗಾರು ಸರ್ಕಾರ ಮತ್ತು ಸಂತ್ರಸ್ಥರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಸಂತ್ರಸ್ತರಿಗೆ ಸರ್ಕಾರ ನೀಡುವ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಪಾಲು ಕೃಷ್ಣಾ ಬಾಂಡ್‌ಗಳ ರೂಪದಲ್ಲಿ ನೀಡಿದರೆ, ಸಂತ್ರಸ್ತರ ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದಾಗುತ್ತದೆ. ಸರ್ಕಾರಕ್ಕೂ ಸಧ್ಯದ ಮಟ್ಟಿಗೆ ಆರ್ಥಿಕ ಹೊರೆ ಕಡಿಮೆಯಾಗಬೇಕು.
ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಇಲ್ಲವೇ ಹೊಸ ಮಾರ್ಗದಲ್ಲಿ ಹಣಕಾಸು ಕ್ರೋಢಿಕರಿಸಿ:
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ’ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬಹುದು. ಈ ಮೂಲಕ ಕೇಂದ್ರದಿಂದ ಹೆಚ್ಚಿನ ನೆರವನ್ನು ಪಡೆಯಬಹುದು. ಇಲ್ಲವಾದಲ್ಲಿ ರಾಜ್ಯವೇ ಇದನ್ನು ಸವಾಲು ಎಂದು ಪರಿಗಣಿಸಿ ಮುಂಬರುವ ೨-೩ ಬಜೆಟ್‌ನಲ್ಲಿ ವಾರ್ಷಿಕ ೨೦-೩೦ ಸಾವಿರ ಕೋಟಿ ಹಣವನ್ನು ಈ ಯೋಜನೆಗೆ ನೀಡುವ ಮೂಲಕ ೩-೪ ವರ್ಷಗಳಲ್ಲಿ ಪೂರ್ಣಗೊಳಿಸಬಹುದು. ಅಥವಾ ತೆಲಂಗಾಣದ ಚಂದ್ರಶೇಖರ್‌ರಾವ್‌ರಂತೆ ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದು.
ಸಾರ್ವಜನಿಕರ ಸಹಭಾಗಿತ್ವದಲ್ಲಿ ’ಕೃಷ್ಣಾ ಬಾಂಡ್’ ಮೂಲಕ ಹಣ ಸಂಗ್ರಹಿಸಿ ಯೋಜನೆ ಪೂರ್ಣಗೊಳಿಸಬಹುದು. ಸಾಲ ಪಡೆದು ಯೋಜನೆ ಪೂರ್ಣಗೊಳಿಸಿದರೂ, ಅಚ್ಚುಕಟ್ಟು ಪ್ರದೇಶ ಸಮೃದ್ದ ನೀರಾವರಿ ಸೌಲಭ್ಯ ಪಡೆದು ಕೃಷಿ ಹಾಗೂ ಕೈಗಾರಿಕೊದ್ಯಮ, ಸ್ಥಳೀಯ ಉದ್ಯಮ ವಿಕಾಸವಾಗಿ ಮುಂಬರುವ ವರ್ಷಗಳಲ್ಲಿ ತೆರಿಗೆ ರೂಪದಲ್ಲಿ ಸರ್ಕಾರದ ಭೊಕ್ಕಸಕ್ಕೆ ಮರುಸಂದಾಯವಾಗುತ್ತದೆ.
ಯೋಜನೆಗೆಯ ಪ್ರಥಮ ಆದ್ಯತೆಯಲ್ಲಿ ಭೂಸ್ವಾಧಿನ, ಮುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕೆಲಸ ಪೂರ್ಣಗೊಳಿಸುವುದು. ಆಣೆಕಟ್ಟು ಎತ್ತರ ಹೆಚ್ಚಿಸಿ ೧೩೦ ಟಿಎಂಸಿ ಅಡಿ ನೀರು ಸಂಗ್ರಹಿಸುವುದು. ಹಣಕಾಸಿನ ಲಭ್ಯತೆ ಮೇರೆಗೆ ಅಚ್ಚುಕಟ್ಟು ಪ್ರದೇಶದ ಉಳಿದ ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು.
ಅಗತ್ಯ ಸಿಬ್ಬಂದಿ ನಿಯೋಜಿಸಿ:
ಯೋಜನೆಯ ಅನುಷ್ಠಾನಕ್ಕೆ ತಜ್ಞರು ಹಾಗೂ ಆಡಳಿತಾತ್ಮಕ ಕಾರ್ಯಗಳಿಗಾಗಿ ಸಮರ್ಪಕ ಸಿಬ್ಬಂದಿಯ ಕೊರತೆ ಇದೆ. ಇರುವ ಬಹುಪಾಲು ಸಿಬ್ಬಂದಿ ಬೇರೆ ಇಲಾಖೆಗಳಿಂದ ತಾತ್ಕಾಲಿಕ ನಿಯುಕ್ತಿಗೊಂಡಿದ್ದಾರೆ. ಸರ್ಕಾರ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕಾದರೆ ಪೂರ್ಣಪ್ರಮಾಣದ ಅಗತ್ಯ ಸಿಬ್ಬಂದಿ ನೇಮಿಸಬೇಕು. ಇಚ್ಚಾಶಕ್ತಿ ಇರುವ ಹಾಗೂ ದಕ್ಷ ಹಿರಿಯ ಅಧಿಕಾರಿಗಳಿಗೆ ಯೋಜನೆಯ ನೇತೃತ್ವ ವಹಿಸಬೇಕು.
ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಅವಶ್ಯಕತೆಗಳು:
ಕೃಷ್ಣಾ ಮೇಲ್ದಂಡೆ ಯೋಜನೆ ಉತ್ತರ ಕಾಲಮಿತಿಯೊಳಗೆ ಪೂರ್ಣಗೊಂಡರೆ ದೇಶದ ವಾರ್ಷಿಕ ವರಮಾನದಲ್ಲಿ ಪ್ರತಿವರ್ಷ ೬,೦೦೦ ಕೋಟಿಯಷ್ಟು ಹೆಚ್ಚಳವಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ ೫೫೦ ರಿಂದ ೬೫೦ ಮಿ.ಮೀ ಮಳೆಯಾಗುತ್ತದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಕೃಷ್ಣಾ ಮತ್ತು ಅದರ ಉಪನದಿಗಳೇ ಉತ್ತರ ಕರ್ನಾಟಕಕ್ಕೆ ಆಧಾರ. ಈ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಉತ್ತರ ಕರ್ನಾಟಕದ ಅಭಿವೃದ್ದಿ ಸಾಧ್ಯವಿಲ್ಲ.
ಕೃಷ್ಣಾ ಮೇಲ್ದಂಡೆ ಯೋಜನೆ-೩ ಅನುಷ್ಠಾನಕ್ಕೆ ಹೊಸ ಮಾರ್ಗೊಪಾಯಗಳು:
ಎಲ್ಲಾ ನೀರನ್ನು ಒಂದೇ ಕಡೆ ಜಲಾಶಯ ನಿರ್ಮಿಸಿ ಸಂಗ್ರಹಿಸುವುದು ಸ್ವಾತಂತ್ರ್ಯ ಪೂರ್ವಕ್ಕೂ ಹಳೆಯದಾದ ವ್ಯವಸ್ಥೆ. ಇಂದು ಕಾಲ ಬದಲಾಗಿದೆ. ತಂತ್ರಜ್ಞಾನ, ಹೊಸತನ ನಮ್ಮನ್ನು ಆವರಿಸಿವೆ. ಯುಕೆಪಿ-೩ರನ್ನು ಆಧುನಿಕವಾಗಿ ಅನುಷ್ಠಾನಗೊಳಿಸಬಹುದು.
ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ದೃಷ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಜಗತ್ತಿಲ್ಲಿಯೇ ಅತಿದೊಡ್ಡ ಜನವಸತಿ ಸ್ಥಳಾಂತರ ಯೋಜನೆಯಾಗಿದೆ. ಈಗ ಮತ್ತೊಂದು ಪುನರ್‌ವಸತಿಗೆ ಸಜ್ಜಾಗಬೇಕಿರುವುದು ಕಳವಳದ ಸಂಗತಿ. ಬದಲಾಗಿ ಕೆಲವು ಅವಶ್ಯಕ ಹಳ್ಳಿಗಳಿಗೆ ’ನಾರ್ವೆ ಮಾದರಿ ತಡೆಗೋಡೆ’ಯನ್ನು ನಿರ್ಮಿಸಿ ಮುಳುಗಡೆಯ ಪ್ರಮಾಣ ತಗ್ಗಿಸಬಹುದು.
ಕಾಲೇಶ್ವರಂ ಯೋಜನೆಯಡಿ ಗೋದಾವರಿ ನದಿ ನೀರನ್ನು ನೈಸರ್ಗಿಕ ಹರಿವಿಗೆ ತೊಂದರೆ ಮಾಡದೇ ಹಿಮ್ಮುಖವಾಗಿ ಲಿಫ್ಟ್ ಮಾಡಿ ವಾರ್ಷಿಕ ೪೫ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ದೊರಕಿಸುವುದರ ಜೊತೆಗೆ ಹೈದ್ರಾಬಾದ, ಸಿಕಂದರಾಬಾದ ಸೇರಿದಂತೆ ತೆಲಂಗಾಣದ ಒಟ್ಟು ಶೇ. ೭೦ರಷ್ಟು ಗ್ರಾಮೀಣ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಬೃಹತ್ ಯೋಜನೆ ರೂಪಿಸಿದ್ದರೂ ಒಂದು ಹಳ್ಳಿಯೂ ಮುಳುಗಡೆಯಾಗಿಲ್ಲ. ಕಾಲುವೆ, ಬ್ಯಾರೇಜ್‌ಗೆ ಅತಿ ಕಡಿಮೆ ಪ್ರಮಾಣದಲ್ಲಿ ಭೂ-ಸ್ವಾಧಿನಪಡಿಸಿಕೊಳ್ಳಲಾಗಿದೆ. ನದಿಯಲ್ಲಿಯೇ ನೀರು ಸಂಗ್ರಹ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಯೋಜನೆಗಾಗಿ ಜರ್ಮನಿ, ಜಪಾನ, ಫಿನಲ್ಯಾಂಡ್, ಆಸ್ಟ್ರೇಲಿಯಾ ದೇಶದ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಸಲಕರಣೆಗಳನ್ನು ಪಡೆಯಲಾಗುತ್ತಿದೆ. ಅಂತಹ ಅವಕಾಶಗಳನ್ನು ಬಳಸಿಕೊಳ್ಳಬಹುದು.
ಕೃಷ್ಣೆಯ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗಳಿಗೂ ಹರಿಸಬಹುದು:
ಕೃಷ್ಣೆಯ ನೀರನ್ನು ಆಲಮಟ್ಟಿ ಜಲಾಶಯದಲ್ಲಿ ಮಾತ್ರವಲ್ಲದೇ ಏತ ನೀರಾವರಿ ಯೋಜನೆಯ ಮೂಲಕ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಲ್ಲಿಯೂ ಸಂಗ್ರಹಿಸಬಹುದು. ಲಕ್ಷಾಂತರ ಎಕರೆ ಫಲವತ್ತಾದ ಭೂಮಿಯನ್ನು ಕೃಷ್ಣಾರ್ಪಣ ಮಾಡಿದ ಫಲವಾಗಿ ನಮಗೆ ಮಹಾತ್ಯಾಗಿಗಳು ಎಂಬ ಬಿರುದು ಬಿಟ್ಟು ಬೇರೆನೂ ದೊರೆತಿಲ್ಲ. ೩೦ ಟಿಎಂಸಿ ಅಡಿ ನೀರನ್ನು ಘಟಪ್ರಭಾ, ಮಲಪ್ರಭಾ ನದಿಗಳಿಗೆ ಹರಿಸಿದರೆ ಆ ಜಲಾಶಯಗಳ ನೀರಿನ ಕೊರತೆಯನ್ನು ನೀಗಿಸುವುದರ ಜೊತೆಗೆ ಇಲ್ಲಿಯ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಖರ್ಚು ಕಡಿಮೆ ಮಾಡಬಹುದು. ಇದರಿಂದ ಬೆಳಗಾವಿ, ಬಾಗಲಕೋಟ ಜಿಲ್ಲೆಯ ಮುಧೋಳ, ಬದಾಮಿ, ಜಮಖಂಡಿ, ಬೀಳಗಿ ಭಾಗಗಳ ಬರಡು ಭೂಮಿಗಳಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ.
ಯುಕೆಪಿ-೩ ಅಡಿಯಲ್ಲಿ ೯ ಉಪನೀರಾವರಿ ಯೋಜನೆಗಳಿವೆ. ಭೀಮಾ ನದಿ ತಿರುವು ಯೋಜನೆ ಹೊರತುಪಡಿಸಿ ಉಳಿದೆಲ್ಲ ಏತ ನೀರಾವರಿ ಯೋಜನೆಗಳಿಗೆ ಆಲಮಟ್ಟಿ ಜಲಾಶಯದಿಂದಲೇ ನೀರು ಪೂರೈಸಬೇಕು. ಬದಲಾಗಿ ಸದರಿ ಯೋಜನೆಗಳಿಗೆ ಸಮೀಪವಿರುವ ಗುಡ್ಡ, ಕಣಿವೆ, ತಗ್ಗು ಪ್ರದೇಶಗಳಲ್ಲಿ ಅಥವಾ ದೊಡ್ಡ ಕೆರೆಗಳಲ್ಲಿ ನೀರು ಸಂಗ್ರಹಿಸಿ ಬಳಸಿಕೊಳ್ಳಬಹುದು. ಇದರಿಂದ ಪುನರ್‌ವಸತಿ ಯೋಜನಾ ವೆಚ್ಚದ ಗಾತ್ರ ಕಡಿಮೆಯಾಗುತ್ತದೆ.
ತೆಲಂಗಾಣದ ಕಾಲೇಶ್ವರಂ ಹಾಗೂ ಗುಜರಾತ್‌ನ ಸುಜಲಾಂ ಸುಫಲಾಂ ಯೋಜನೆಯಲ್ಲಿ ದೊಡ್ಡ ಕಾಲುವೆಗಳ ಮುಖಾಂತರ ನೀರು ಸಾಗಿಸಿ ವಿವಿಧ ಜಲಾಶಯಗಳಲ್ಲಿ ಸಂಗ್ರಹಿಸಿ ಆಯಾ ಪ್ರದೇಶದ ನೀರಾವರಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಯುಕೆಪಿ-೩ರ ಅಡಿಯಲ್ಲಿ ೧೮ ನಗರಗಳು ಸೇರಿದಂತೆ ನೂರಾರು ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಬೇಕಿದೆ. ತೆಲಂಗಾಣದಲ್ಲಿ ಚಂದ್ರಶೇಖರ ಜಾರಿ ಮಾಡಿರುವ ದೇಶದಲ್ಲಿಯೇ ಮಾದರಿಯಾದ ಶುದ್ದ ಕುಡಿಯುವ ನೀರಿನ ಯೋಜನೆಯಾದ ’ಮಿಷನ್ ಭಗೀರಥ’ದಂತೆ ಜಾರಿಗೊಳಿಸಬಹುದು. ಕಾಲೇಶ್ವರಂ ಯೋಜನೆಯಿಂದ ಶೇ.೭೦ರಷ್ಟು ತೆಲಂಗಾಣದ ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಕೊಳವೆ ಮೂಲಕ ಶುದ್ದೀಕರಿಸಿದ ನೀರು ಸರಬರಾಜು ಮಾಡಲು ಸಾಧ್ಯವಾಗಬಹುದಾದರೇ ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕವು ಬಹುಪಾಲು ಉತ್ತರ ಕರ್ನಾಟಕಕ್ಕೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಿದೆ ನಮ್ಮ ಸರ್ಕಾರಗಳು ಮನಸ್ಸು ಮಾಡಬೇಕು ಅಷ್ಟೇ!
ಕೊಯ್ನಾ ವಿದ್ಯುತ್ ಉತ್ಪಾದನೆ ಘಟಕದಲ್ಲಿ ನೀರು ಪಶ್ಚಿಮಕ್ಕೆ ಹರಿದು ಸಮುದ್ರ ಸೇರುತ್ತಿದೆ:
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ ಕೊಯ್ನಾ ಜಲಾಶಯವಿದೆ. ಜಲಾಶಯದ ಒಟ್ಟು ೧೦೫ ಟಿಎಂಸಿ ಅಡಿ ನೀರಿನಲ್ಲಿ ೬೭.೫ ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಮತ್ತು ೩೭.೫ ಟಿಎಂಸಿ ಅಡಿ ನೀರನ್ನು ಕೃಷಿಗಾಗಿ ಬಳಕೆ ಮಾಡುತ್ತಾರೆ. ೬೭.೫ ಟಿಎಂಸಿ ಅಡಿ ನೀರನ್ನು ಕೊಯ್ನಾ, ಶಿವಾಜಿಸಾಗರದ ನೀರನ್ನು ಸುರಂಗದ ಮೂಲಕ ಕೊಳ್ಕೆವಾಡಿ ಜಲಾಶಯದಲ್ಲಿ ಸಂಗ್ರಹಿಸಿ ಪಶ್ಚಿಮಘಟ್ಟಗಳಲ್ಲಿ ೧೦೦ ಮೀ. ಎತ್ತರದಿಂದ ತಗ್ಗು ಪ್ರದೇಶಕ್ಕೆ ನೀರು ಹರಿಸಿ ೧೯೬೦ ಮೆ.ವ್ಯಾಟ್ ಜಲವಿದ್ಯುತ್ ಉತ್ಪಾದಿಸುತ್ತಾರೆ.
೬೫.೭ ಟಿಎಂಸಿ ಅಡಿ ನೀರು ಪಶ್ಚಿಮಾಭಿಮುಖವಾಗಿ ಹರಿದು ಚಿಪ್ಲೂನ್ ಮಾರ್ಗವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನೀರು ನೈಸರ್ಗಿಕವಾಗಿ ಹರಿದಿದ್ದರೆ ಕರ್ನಾಟಕ ಹಾಗೂ ಉಳಿದ ಭಾಗಿದಾರ ರಾಜ್ಯಗಳಿಗೆ ಉಪಯೋಗವಾಗುತ್ತಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಉತ್ಪಾದನೆಗಷ್ಟೆ ಬಳಸಿ ಪ್ರತಿ ತಿಂಗಳು ೫.೬ ಟಿಎಂಸಿ ಅಡಿ ನೀರನ್ನು ಸಮುದ್ರ ಸೇರಿಸುತ್ತಿದೆ. ಕರ್ನಾಟಕವು ಬೇಸಿಗೆ ಅವಧಿಯಲ್ಲಿ ಇದರಲ್ಲಿಯ ಶೇ. ೩೦-೪೦% ನೀರು ಪಡೆದು ಪ್ರತಿಯಾಗಿ ಅಷ್ಟೆ ಪ್ರಮಾಣದ ವಿದ್ಯುತ್ ನೀಡುವ ಯೋಜನೆಯನ್ನು ರೂಪಿಸಬಹುದು.
ಕೃಷ್ಣೇಗೂ ಸಾಂಸ್ಕೃತಿಕ ಪ್ರಾಧಾನ್ಯತೆ ಸಿಗಲಿ:
ಕಾವೇರಿಯಂತೆ ಕೃಷ್ಣೆಯೂ ಕರ್ನಾಟಕದ ಜೀವನದಿ. ಕಾವೇರಿಗಿಂತ ೩ ಪಟ್ಟು ಹೆಚ್ಚು ಅಚ್ಚುಕಟ್ಟು ಪ್ರದೇಶವನ್ನು ಕರ್ನಾಟಕದಲ್ಲಿ ಕೃಷ್ಣಾ ನದಿ ಹೊಂದಿದೆ. ಕಾವೇರಿಗೆ ಸಿಕ್ಕ ಸಾಂಸ್ಕೃತಿಕ ಪ್ರಾತಿನಿಧ್ಯ ಕೃಷ್ಣೆಗೂ ದೊರೆಯಬೇಕು. ಕೃಷ್ಣೆಯ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಅಧ್ಯಯನ ನಡೆಯಲಿ. ಇಲ್ಲಿಯ ಕವಿಗಳು, ಸಾಹಿತಿಗಳು ಕೃಷ್ಣೆಯ ಮಹತ್ವ ಕುರಿತು ಲೇಖನ, ಕವಿತೆ ಬರೆಯಬೇಕು. ಚಿತ್ರರಂಗದ ಕಲಾವಿದರು ಕಾವೇರಿಯಂತೆ ಕೃಷ್ಣೆಗೂ ಪ್ರಾತಿನಿಧ್ಯ ನೀಡಬೇಕು. ಕೃಷ್ಣೆಯ ದಂಡೆಯ ಮೇಲೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಂಭಮೇಳಗಳು ನಡೆಯಬೇಕು. ಕನ್ನಡಿಗರೆಲ್ಲರೂ ಕೃಷ್ಣೆಯ ಕುರಿತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು.
ಉತ್ತರ ಕರ್ನಾಟಕದ ಕುರಿತು ಅಸಡ್ಡೆ ಬೇಡ:
ನೆರೆಹೊರೆಯ ರಾಜ್ಯಗಳು ನೀರಾವರಿಯಲ್ಲಿ ಪ್ರಗತಿ ಸಾಧಿಸಿವೆ. ಆಂದ್ರ ಪ್ರದೇಶದಲ್ಲಿ ಪಟ್ಟೆಸೀಮಾ ಯೋಜನೆ, ತೆಲಂಗಾಣದ ರಾಷ್ಟ್ರದ ಅತಿದೊಡ್ಡ ಕಾಲೇಶ್ವರಂ ಏತ ನೀರಾವರಿ ಯೋಜನೆ ಜಾರಿ ಮಾಡಿದೆ. ಮಹಾರಾಷ್ಟ್ರ ಕೃಷ್ಣಾ ಹಾಗೂ ಗೋದಾವರಿ ಕೊಳ್ಳದ ಎಲ್ಲ ನೀರನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡಿದೆ. ಅಷ್ಟೆ ಏಕೆ? ದಕ್ಷಿಣ ಕರ್ನಾಟಕ ಕಾವೇರಿ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು ದಶಕಗಳಾಗಿವೆ. ದಕ್ಷಿಣದ ಬಯಲು ಸೀಮೆಗಾಗಿ ಎತ್ತಿನಹೊಳೆ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಉತ್ತರದಲ್ಲಿ ಮಾತ್ರ ಲಭ್ಯವಿರುವ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆಂದ್ರಪ್ರದೇಶ ರಾಜ್ಯ ವಿಭಜನೆಗೆ ರಾಜಕೀಯವಾಗಿ ನಾನಾ ಕಾರಣಗಳಿರಬಹುದು ಆದರೆ ತೆಲಂಗಾಣ ಪ್ರಾಂತ್ಯಗಳಲ್ಲಿಯ ನೀರಾವರಿ ಯೋಜನೆಗಳ ಬಗ್ಗೆ ಅಸಡ್ಡೆ ತೋರಿದ್ದು ಪ್ರಮುಖ ಕಾರಣವಾಗಿದೆ. ಅದ್ದರಿಂದಲೇ ಚಂದ್ರಶೇಖರರು ನೀರಾವರಿಗೆ ಪ್ರಾತಿನಿಧ್ಯ ನೀಡಿದರು. ಬಜೇಟ್‌ನ ಶೇ. ೬೦ರಷ್ಟು ಹಣವನ್ನು ನೀರಾವರಿ ಯೋಜನೆಗಳಿಗಾಗಿ ತೆಗೆದಿಟ್ಟರು. ಕೇವಲ ನಾಲ್ಕೇ ವರ್ಷಗಳಲ್ಲಿ ಕಾಲೇಶ್ವರಂದಂತಹ ದೊಡ್ಡ ಯೋಜನೆಯನ್ನು ನಾಡಿಗೆ ಸಮರ್ಪಿಸಿದರು.
ಅದ್ದರಿಂದ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಅನಗತ್ಯ ವಿಳಂಬವನ್ನು ಮಾಡುವುದನ್ನು ಸರ್ಕಾರಗಳು ನಿಲ್ಲಿಸಬೇಕು. ಕೃಷ್ಣೆಗೆ ಬಾಗೀನ ಸಮರ್ಪಿಸುವಾಗ ಯಡಿಯೂರಪ್ಪನವರು ಯುಕೆಪಿ-೩ ಅನುಷ್ಠಾನಕ್ಕಾಗಿ ೨೦ ಸಾವಿರ ಕೋಟಿ ಘೊಷಿಸಿರುವುದು ಸ್ವಾಗತಾರ್ಹ. ಅದರಂತೆ ಬಜೇಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯದ ಹಣವನ್ನು ನೀಡಿ ಕೃಷ್ಣಾ ಯೋಜನೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಮತ್ತೊಂದು ಬಾರಿ ನಾವೆಲ್ಲರೂ ತ್ಯಾಗಿಗಳಾದರೂ ಪರವಾಗಿಲ್ಲ ಯೋಜನೆ ಶೀಘ್ರ ಪೂರ್ಣಗೊಳ್ಳಲಿ. ನಮ್ಮ ನಾಡು ಸಮೃದ್ದವಾಗಲಿ.
(ಲೇಖಕರು – ಸಂಚಾಲಕರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ