
ಪ್ರಗತಿವಾಹಿನಿ ಸುದ್ದಿ: ಪಕ್ಷಕ್ಕಿಂತ ನಮಗೆ ದೇಶದ ಹಿತಾಸಕ್ತಿಯೇ ಆದ್ಯತೆಯ ವಿಚಾರವಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವೆಲ್ಲ ಚಿರಋಣಿಗಳಾಗಿದ್ದು, 2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ನಾವು ಬದ್ಧ ರೈತ ಮತ್ತು ಯೋಧರ ಕಲ್ಯಾಣಕ್ಕಾಗಿ ಸದಾ ಸಿದ್ಧರಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇದೊಂದು ಭಾರತದ ಪಾಲಿಗೆ ಸುವರ್ಣ ಯುಗ, ನಮ್ಮ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಜಗತ್ತಿನಲ್ಲೇ ಮಾದರಿಯಾಗಿದೆ. ರೈತರು, ಯೋಧರು ಸೇರಿದಂತೆ ಸರ್ವರ ಪ್ರಗತಿ, ವಿಕಾಸದ ಹಾದಿಯಲ್ಲಿ ಸಾಗುತ್ತಿದ್ದೇವೆ. ಕೃಷಿ ವಲಯದ ಎಲ್ಲ ಬಗೆಯ ರೈತರಿಗೂ ನಾನಾ ಯೋಜನೆಗಳಡಿ ಸಾಲದ ನೆರವು ನೀಡಲಾಗುತ್ತಿದೆ. ಸಾವಯವ ಕೃಷಿಗೆ ನೆರವು ನೀಡುವ ಮೂಲಕ ಆರೋಗ್ಯಕರ ಆಹಾರ ಕ್ರಾಂತಿಗೆ ಪ್ರೋತ್ಸಾಹಿಸಲಾ ಗುತ್ತಿದೆ. ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅಗತ್ಯವಿರುವ ಎಲ್ಲ ನೆರವು ಕಲ್ಪಿಸುತ್ತಿರುವುದಾಗಿ ಹೇಳಿದ್ದಾರೆ.
ತಂತ್ರಜ್ಞಾನ ಸೇರಿದಂತೆ ಎಲ್ಲ ವಲಯಗಳಲ್ಲೂ ನಾವು ಅಭಿವೃದ್ಧಿ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದ್ದೇವೆ ಸ್ವಸಹಾಯ ಸಂಘ ಸೇರಿದಂತೆ ಅನೇಕ ಸಂಘಗಳ ಮೂಲಕ ಗ್ರಾಮೀಣ ಭಾರತದ ಬಡ ಮಹಿಳೆಯರು ಕೂಡ ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಯಾವುದೇ ಜಾತಿ, ಸಮುದಾಯದ ಮಕ್ಕಳು ಕೂಡ ಭಾಷೆಯ ಕಾರಣಕ್ಕೆ ಶಿಕ್ಷಣ ಸೇರಿದಂತೆ ಯಾವುದರಿಂದಲೂ ವಂಚಿತರಾಗಬಾದರು ಎಂಬ ಉದ್ದೇಶದೊಂದಿಗೆ ಶಿಕ್ಷಣದಲ್ಲಿ ಮಾತೃ ಭಾಷೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಶಿಕ್ಷಣ, ಆರೋಗ್ಯ ವಸತಿ ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ವರ್ಗಗಳು ಅದ್ಭುತ ಪ್ರಗತಿ ಸಾಧಿಸಸಿದ್ದಲ್ಲದೆ, ಕ್ರಿಮಿನಲ್ ಕಾನೂನು ತಿದ್ದುಪಡಿ ಮೂಲಕ ನ್ಯಾಯದಾನ ವ್ಯವಸ್ಥೆಯನ್ನು ಸೂಕ್ತ ರೀತಿ ಜಾರಿಗೊಳಿಸುವ ಮೂಲಕ ಪ್ರತಿ ನಾಗರಿಕರಿಗೂ ಅವರದೇ ಆದ ಘನತೆಯನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಜಾಗತಿಕ ಅಭಿವೃದ್ಧಿಯಲ್ಲೂ ಭಾರತದ ಕೊಡುಗೆ ಗಮನಾರ್ಹವಾಗಿದೆ, ಭಾರತದ ರಫ್ತು ಉದ್ಯಮ ಕೂಡ ಜಾಗತಿಕ ವ್ಯವಹಾರ, ವಹಿವಾಟುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ, ದೇಶದಲ್ಲಿ ಸೇನೆ, ಉದ್ಯಮ, ಕೈಗಾರಿಕೆ, ಶಿಕ್ಷಣ, ಸಾಎರಿಗೆ, ಸಂಪರ್ಕ ವಲಯಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿರುವುದಾಗಿ ಪ್ರಧಾನಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ