Kannada NewsKarnataka NewsLatest

ಎರಡೂ ಜನಸ್ವರಾಜ್ ಸಮಾವೇಶದಿಂದ ಜಾರಕಿಹೊಳಿ ಸಹೋದರರು ದೂರ; ಬಿಜೆಪಿಯಲ್ಲಿ ಹೆಚ್ಚಿದ ಆತಂಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನಪರಿಷತ್ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 2 ಸ್ಥಾನಗಳಿಗಾಗಿ ಡಿ.10ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ.

ಬಿಜೆಪಿಯಿಂದ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸಲಿದ್ದಾರೆ. ಬಿಜೆಪಿಯಲ್ಲಿರುವ ಜಾರಕಿಹೊಳಿ ಸಹೋದರರು ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿಯ ಎರಡನೇ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಒಂದೊಮ್ಮೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರರಾಗಿ ನಿಲ್ಲಿಸುವುದಾಗಿ ಪರೋಕ್ಷ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

ಆದರೆ ಬಿಜೆಪಿ ಒಂದೇ ಟಿಕೆಟ್ ನೀಡುವ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣ ಕಾಣುತ್ತಿಲ್ಲ. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ತನ್ನ ನಿರ್ಧಾರ ಬದಲಿಸಬೇಕಾದರೆ ಅದು ದೆಹಲಿ ಮಟ್ಟದಲ್ಲಿ ಆಗಬೇಕಿದೆ. ಹಾಗಾಗಿ ಜಾರಕಿಹೊಳಿ ಸಹೋದರರ ಒತ್ತಡಕ್ಕೆ ಮಾನ್ಯತೆ ಸಿಗುವ ಸಾಧ್ಯತೆ ತೀರಾ ಕಡಿಮೆ.

ರಮೇಶ ಜಾರಕಿಹೊಳಿ ಈಗಾಗಲೆ ಜಿಲ್ಲೆಯನ್ನು ಸುತ್ತುತ್ತಿದ್ದು, ನೇರವಾಗಿ ಬಿಜೆಪಿಯ, ಪರೋಕ್ಷವಾಗಿ ಲಖನ್ ಜಾರಕಿಹೊಳಿಯ ಪ್ರಚಾರ ನಡೆಸುತ್ತಿದ್ದಾರೆ. ಎಂಇಎಸ್, ಕಾಂಗ್ರೆಸ್ ನಾಯಕರನ್ನು ಸಹ ಭೇಟಿ ಮಾಡುತ್ತಿದ್ದಾರೆ.

ಬಿಜೆಪಿಯ ಎರಡನೇ ಟಿಕೆಟ್ ನ್ನು ಲಖನ್ ಜಾರಕಿಹೊಳಿಗೆ ನೀಡುವಂತೆ ಬಹಿರಂಗವಾಗಿಯೇ ಕೋರಿದ್ದ ಬಾಲಚಂದ್ರ ಜಾರಕಿಹೊಳಿ ನಮ್ಮ ಸಂಘಟನೆಗೆ ಸೇರಿದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಹಲವು ದಿನಗಳ ಹಿಂದೆ ಸಭೆಯಲ್ಲಿ ವಿನಂತಿಸಿದ್ದರು.

ಇದೀಗ, ಬಿಜೆಪಿಯ ನಿರ್ಧಾರಕ್ಕೆ ಜಾರಕಿಹೊಳಿ ಸಹೋದರರು ಮುನಿಸಿಕೊಂಡಂತಿದೆ. ಭಾನುವಾರ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಜನಸ್ವರಾಜ್ ಸಮಾವೇಶಗಳಿಂದ ಜಾರಕಿಹೊಳಿ ಸಹೋದರರು ದೂರ ಉಳಿದಿದ್ದಾರೆ. ರಮೇಶ್ ಆಗಲಿ, ಬಾಲಚಂದ್ರ ಆಗಲಿ ಇಬ್ಬರೂ ಸಮಾವೇಶದತ್ತ ಸುಳಿಯಲಿಲ್ಲ. ತನ್ಮೂಲಕ ತಮ್ಮ ಸಹೋದರನಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ.

ಜಾರಕಿಹೊಳಿ ಸಹೋದರರು ಸಮಾವೇಶದಿಂದ ದೂರ ಉಳಿದಿರುವುದು ಬಿಜೆಪಿಯಲ್ಲಿ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಜಾರಕಿಹೊಳಿ ಸಹೋದರರ ಮನವೊಲಿಸುತ್ತದೆಯೋ, ಜಾರಕಿಹೊಳಿ ಸಹೋದರರು ಬಿಜೆಪಿಯನ್ನು ಬಗ್ಗಿಸುತ್ತಾರೋ ಕಾದು ನೋಡಬೇಕಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಅವರ ಯಾವುದೇ ಬೇಡಿಕೆಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ನ.23ರಂದು ಬೆಳಗಾವಿಯಲ್ಲಿ ದಿಗ್ಗಜರ ನಾಮಪತ್ರ ಸಲ್ಲಿಕೆ; ಲಖನ್ ಸ್ಪರ್ಧೆ (?) ಸೃಷ್ಟಿಸಿದ ಆತಂಕ

ಪರಿಷತ್ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button