ದೇಶದಲ್ಲೇ ಅತಿ ದೊಡ್ಡ, ತನ್ನದೇ ಆದ ವಿಶೇಷತೆವುಳ್ಳ ಸೋಲಾರ್ ವಿದ್ಯುತ್ ಘಟಕ

ಇಂದು ವಿಶ್ವದಲ್ಲಿ ಪೆಟ್ರೋಲ್, ಡೀಸೆಲ್, ಸ್ವಾಭಾವಿಕ ಅನಿಲ ಮಂತಾದ ಇಂಧನಗಳ ಮೂಲ ಖಾಲಿಯಾಗುತ್ತಿದೆ. ಕಲ್ಲಿದ್ದಲು ಕೂಡಾ ಇದೇ ಹಾದಿ ಹಿಡಿದಿದೆ. ಇವುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇವುಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಜಾಗತಿಕ ತಾಪಮಾನವು ಹೆಚ್ಚಾಗುತ್ತಿದೆ. ಹಸಿರು ಕಾಡುಗಳು ಮಾನವನ ದುಸ್ಸಾಹಸಕ್ಕೆ ಬಲಿಯಾಗಿ ಕಾಂಕ್ರಿಟ್ ಕಾಡುಗಳಾಗಿ ಪರಿಣಮಿಸಿವೆ.

ಥರ್ಮಲ್ ವಿದ್ಯುತ್, ಅಣು ವಿದ್ಯುತ್ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಬಹಳ ಸಮಯ ಹಾಗೂ ಸಂಪತ್ತು ಬೇಕಾಗುತ್ತದೆ. ಆದರೆ ಸೌರಶಕ್ತಿಯ ಯೋಜನೆಗಳಿಗೆ ಸ್ವಲ್ಪ ಹಣ ಖರ್ಚಾದರೂ ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ.

ಭಾರತದ ಬಗ್ಗೆ ಹೇಳುವುದಾದರೆ ನಮ್ಮ ಭೌಗೋಳಿಕ ಅಂಶಗಳು ಸೌರ ವಿದ್ಯುತ್ ಉತ್ಪಾದನೆ, ಬಳಕೆಗೆ ಸುಕ್ತವಾಗಿದೆ. ಇಲ್ಲಿ ಸುಮಾರು ವರ್ಷದ ೩೦೦ ದಿನಗಳಷ್ಟುಕಾಲ ಯಥೇಚ್ಛವಾಗಿ ಸೂರ್ಯನ ಬೆಳಕು ಲಭ್ಯವಿದ್ದು, ಸೌರ ವಿದ್ಯುತ್ ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ. ಸೂರ್ಯನಿಂದ ದೊರೆಯುವ ಶಕ್ತಿ ನಿರಂತರವಾದದ್ದು ಹಾಗೂ ಎಷ್ಟು ಉಪಯೋಗಿಸಿದರೂ ಖಾಲಿಯಾಗದೇ ಇರುವ ಶಕ್ತಿಯ ಮೂಲ. ಕೊನೆಯದಾಗಿ ಮುಂದಿನ ದಿನಗಳು ಸೌರಶಕ್ತಿಯ ದಿನಗಳು ಎಂದೆ ಹೇಳಬಹುದು.

ವಿದ್ಯುಚ್ಛಕ್ತಿಯನ್ನು ಸಾಂಪ್ರದಾಯಿಕ ಹಾಗೂ ಅಸಂಪ್ರದಾಯಿಕ ಇಂಧನ ಮೂಲಗಳೆಂದು ೨ ವಿಧಗಳಾಗಿ ವಿಂಗಡಿಸಬಹುದಾಗಿದೆ. ಅಸಂಪ್ರದಾಯಿಕ ಅಥವಾ ಪರ್ಯಾಯ ಇಂದನ ಮೂಲಗಳೆಂದರೆ ಸೌರಶಕ್ತಿ, ಪವನಶಕ್ತಿ, ಸಮುದ್ರ ಆಲೆಗಳ ಶಕ್ತಿ, ಉಷ್ಣ ಶಕ್ತಿ ಮುಂತಾದವುಗಳನ್ನು ಉಪಯೋಗಿಸುವುದು. ಇಂತಹ ಭುಗರ್ಭ ಇಂಧನ ಮೂಲಗಳು ನಿರಂತರವಾಗಿರುವುವು. ಆದರೆ ಸಾಂಪ್ರದಾಯಿಕ ಇಂಧನ ಮೂಲಗಳಾದ ಎಣ್ಣೆ(ಪೆಟ್ರೋಲ್, ಡೀಸಿಲ್), ಅನಿಲ(ಗ್ಯಾಸ್), ಮುಂತಾದವುಗಳು ನಿರಂತರವಾಗಿ ದೊರೆಯುವುದಿಲ್ಲ.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಸೌರಶಕ್ತಿಯನ್ನು ಬಳಸುವುದರಲ್ಲಿ ಮುಂಚೂಣಿಯಲ್ಲಿದೆ. ೧೯೯೬ ರಿಂದಲೇ ಸೌರಶಕ್ತಿಯಿಂದ ೨೪ ಪ್ಯಾರಾಬೋಲಿಕ್ ಡಿಶ್‌ಗಳ ವ್ಯವಸ್ಥೆಯಿಂದ ಉಗಿ/ಹಬೆಯನ್ನು ತಯಾರಿಸಿ, ಕೊಳವೆಯ ಮೂಲಕ ಅಡುಗೆ ಮನೆಗೆ ಸಾಗಿಸಿ ಬಳಸಲಾಗುತ್ತದೆ. ಈ ವ್ಯವಸ್ಥೆ ಅಬು ಪರ್ವತದ ಪಾಂಡವ ಭವನ, ಜ್ಞಾನ ಸರೋವರ ಹಾಗೂ ಅಬುರೋಡ್‌ನ ಶಾಂತಿವನ ಪರಿಸರದಲ್ಲಿ ಇದೆ. ಫೋಟೋವೋಲ್ಟಿಕ್ ಮತ್ತು ಸೋಲಾರ್ ವಾಟರ್ ಹೀಟರ್‌ಗಳ ವ್ಯವಸ್ಥೆಯೂ ಇಲ್ಲಿ ಇದೆ.
ಅಬುರೋಡ್‌ನ ಶಾಂತಿವನದಿಂದ ೨ ಕಿ.ಮಿ. ದೂರದಲ್ಲಿರುವ ಸೋಲಾರ್ ಪ್ಲಾಂಟ್‌ದಲ್ಲಿ ೧ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ಇದೆ. ಇದು ಭಾರತ ದೇಶದಲ್ಲಿ ಅತಿ ದೊಡ್ಡ, ತನ್ನದೇ ಆದ ವಿಶೇಷತೆವುಳ್ಳ ಸೋಲಾರ್ ವಿದ್ಯುತ್ ಘಟಕವಾಗಿದ್ದು, ’ಇಂಡಿಯಾ ವನ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ.

ಸಾಮಾನ್ಯವಾಗಿ ಫೋಟೋವೋಲ್ಟಿಕ್ ಪದ್ಧತಿಯಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಇಲ್ಲಿ ಪ್ಯಾರಾಬೋಲಿಕ್ ವ್ಯವಸ್ಥೆಯಿಂದ ನೀರನ್ನು ಕಾಯಿಸಿ ಆ ಉಗಿಯನ್ನು ಟರ್ಬೈನ್‌ಗೆ ರವಾನಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿ ೪೦೦ ಡಿಗ್ರಿಯವರೆಗೆ ಉಗಿಯನ್ನು ತಯಾರಿಸಲಾಗುತ್ತದೆ. ಶಾಖವನ್ನು ಶೇಖರಣೆ ಮಾಡಿ ೨೪ ಗಂಟೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿದೆ.

ಇಲ್ಲಿ ೬೦ ಚ.ಮಿ. ವ್ಯಾಪ್ತಿಯ, ೭೭೦ ಪ್ಯಾರಾಬೋಲಿಕ್ ಡಿಶ್‌ಗಳನ್ನು ೩೫ ಎಕರೆ ಜಮೀನಿನಲ್ಲಿ ಹಾಕಲಾಗಿದೆ. ಇಲ್ಲಿ ಬಳಸಿರುವ ಈ ಸೊಲಾರ ವ್ಯವಸ್ಥೆಯಲ್ಲಿ ಒಂದು ಸಾವಿರ ಕಿ.ವಾ. ಪ್ರತಿ ಘಂಟೆಗೆ, ಥರ್ಮಲ್ ವಿದ್ಯುತ್‌ನ್ನು ಉತ್ಪಾದನೆ ಮಾಡಬಹುದಾಗಿದೆ. ಇದಕ್ಕೆ ಸೋಲಾರ್ ಥರ್ಮಲ್ ಪವರ್ ಟೆಕ್ನಾಲಾಜಿ ಎಂದು ಕರೆಯಲಾಗುತ್ತದೆ. ಇದಕ್ಕೆ ಸರಳ ವಿಧಾನ ಬಳಿಸುವುದರಿಂದ ಕಡಿಮೆ ವೆಚ್ಚ ತಗಲಿದೆ.

ಸೂರ್ಯನ ದಿಕ್ಕಿಗೆ ಡಿಶ್‌ಗಳು ಸ್ವಯಂಚಾಲಿತ ತಂತ್ರಜ್ಷಾನದಿಂದ ಅತಿ ಸರಳವಾಗಿ ತಿರುಗುತ್ತವೆ. ಇದರಲ್ಲಿ ಸ್ಟ್ಯಾಟಿಕ್ ಕಾಸ್ಟ್ ಆರ್ಯನ್ ಕೆವಿಟಿ ರಿಸಿವರ್ ಇರುವುದರಿಂದ ೧೬ ಗಂಟೆಗಳ ಕಾಲ ಶಾಖವನ್ನು ಶೇಖರಣೆ ಮಾಡಬಹುದು. ಭಾರತ ಹಾಗೂ ಜರ್ಮನ್ ದೇಶಗಳ ಸರ್ಕಾರಗಳು ಮತ್ತು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಕಾರದಿಂದ (ವರ್ಲ್ಡ್ ರಿನ್ಯೂವಲ್ ಸ್ಪಿರಿಚುಯಲ್ ಟ್ರಸ್ಟ್) ಈ ಬೃಹತ್ ಕಾರ್ಯವು ಸಾಧ್ಯವಾಗಿದೆ. ಇಲ್ಲಿ ಸುಮಾರು ೪೦ ಇಂಜಿನಿಯರುಗಳು, ತಾಂತ್ರಿಕ ಸಲಹಾಗಾರರು, ಸರ್ಮಪಿತ ಯೋಗಿ ಸಹೋದರರು ಕಾರ್ಯನಿರತರಾಗಿದ್ದಾರೆ.

–ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,

https://www.facebook.com/Pragativahini/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button