ಪ್ರಗತಿವಾಹಿನಿ ಸುದ್ದಿ: ದೊಡ್ಡಬಳ್ಳಾಪುರದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ. ಮಾಡೇಶ್ವರ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ದೊಡ್ಡಬಳ್ಳಾಪುರದ ಮಾಡೇಶ್ವರ ಗ್ರಾಮದಲ್ಲಿ ಚಿರತೆ ಆತಂಕ ಸೃಷ್ಟಿ ಮಾಡಿತ್ತು. ಮೇಕೆ ಕುರಿಗಳನ್ನು ತಿಂದು ಹಾಕಿದ್ದ ಚಿರತೆ, ಕೆಲ ಗ್ರಾಮಸ್ಥರ ಮೇಲೂ ದಾಳಿಗೆ ಮುಂದಾಗಿತ್ತು. ಹುಲುಕಡಿ ಬೆಟ್ಟದಲ್ಲಿ ಮೇಯಲು ಹೋದ ಪ್ರಾಣಿಗಳನ್ನು ತಿಂದು ಅಟ್ಟಹಾಸ ಮೆರೆದಿತ್ತು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಚಿರತೆ ಸೆರೆಗೆ ಊರ ಹೊರವಲಯದಲ್ಲಿ ಬೋನ್ ಅಳವಡಿಸಲಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಜನರ ಆತಂಕ ದೂರವಾಗಿದೆ. ಇನ್ನೂ ಚಿರತೆ ಬೋನ್ ನಲ್ಲಿ ಸೆರೆಯಾದ ಬಳಿಕವೂ ಅದರ ಘರ್ಜನೆ ಜೋರಾಗಿತ್ತು. ದಪ್ಪ ಕಣ್ಣುಗಳನ್ನು ಬಿಟ್ಟು ಆಕ್ರೋಶ ವ್ಯಕ್ತಪಡಿಸಿತು. ಬೋನಿನ ಒಳಗೆ ಓಡಾಡುತ್ತಾ ಸೌಂಡ್ ಮಾಡೋದನ್ನು ಕಂಡು ಜನರು ಬೆಚ್ಚಿಬಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ