ಉಳ್ಳಾಲ್ ಅಬ್ಬರ, ಟೈಗರ್ಸ್ ನುಂಗಿದ ಲಯನ್ಸ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ನಿಹಾಲ್ ಉಳ್ಳಾಲ್(88 )ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 6 ವಿಕೆಟ್ ಜಯ ಗಳಿಸಿ ಶುಭಾರಂಭ ಕಂಡಿದೆ.
ಹುಬ್ಬಳ್ಳಿ ಟೈಗರ್ಸ್ ನೀಡಿದ 155 ರನ್ ಗಳ ಸಾಧಾರಣ ಮೊತ್ತವನ್ನು ಶಿವಮೊಗ್ಗ ತಂಡ ಕೇವಲ 4 ವಿಕೆಟ್ ಕಳಿದುಕೊಂಡು ಇನ್ನು 2 ಓವರ್ ಬಾಕಿ ಇರುವಾಗಲೇ ಗುರಿ ತಲುಪಿತು.
60 ಎಸೆತಗಳೆನ್ನೆದುರಿಸಿದ ನಿಹಾಲ್ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 88 ರನ್ ಗಳಿಸಿ ಪ್ರಸಕ್ತ ಕೆಪಿಎಲ್ ನಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಭಾಜನರಾದರು. ತಂಡದ ಪರ ಪವನ್ ದೇಶಪಾಂಡೆ ಹಾಗೂ ಅಕ್ಷಯ್ ಬಲ್ಲಾಳ್ ತಲಾ 20 ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೆಪಿಎಲ್ ನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಅಂಕ ಹಂಚಿಕೊಡವು.
ಟಾಸ್ ಸೋತು ಫೀಲ್ಡಿಂಗ್ ಗೆ ಇಳಿದ ಶಿವಮೊಗ್ಗ ಲಯನ್ಸ್ ತಂಡ ಹುಬ್ಬಳ್ಳಿಯ ಆರಂಭಿಕ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇದರಿಂದ 154 ರನ್ ಗಳ ಸಾಧಾರಣ ಮೊತ್ತ ಗುರಿ ತಲಪುವುದು ಅಭಿಮನ್ಯು ಮಿಥುನ್ ಪಡೆಗೆ ಕಷ್ಟವಾಗಲಿಲ್ಲ.
ಹುಬ್ಬಳ್ಳಿ ಸಾಧಾರಣ ಮೊತ್ತ
ಕರ್ನಾಟಕ ಪ್ರೀಮಿಯರ್ ಲೀಗ್ ನ ಎಂಟನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿಯಾದವು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ಪಡೆ ಉತ್ತಮ ಆರಂಭ ಕಾಣುವಲ್ಲಿ ವಿಫಲವಾಯಿತು. ಶಿಶಿರ್ ಭವಾನೆ (0) ಹಾಗೂ ಲವ್ನಿತ್ ಸಿಸೋಡಿಯಾ (5) ಅವರ ವಿಕೆಟ್ ಬೇಗನೆ ನೆಲಕ್ಕುರುಳಿತು.ಭರವಸೆಯ ಆಟಗಾರ ಮೊಹಮ್ಮದ್ ತಹಾ (18 ) ಕೂಡ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ.
ಇದು ಶಿವಮೊಗ್ಗ ಬೌಲರ್ ಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಕೆ ಬಿ ಪವನ್ (53 ) ಹಾಗೂ ಶ್ರೀಜಿತ್ (33 ) ಅವರ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ 154 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು. 37 ಎಸೆತಗಳನ್ನು ಎದುರಿಸಿದ ಪವನ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಮೂಲ್ಯ 53 ರನ್ ಗಳಿಸಿದರಲ್ಲದೆ, ಪ್ರಸಕ್ತ ಲೀಗ್ ನ ಮೊದಲ ಅರ್ಧ ಶತಕ ದಾಖಲಿಸಿದರು.
ಶ್ರೀಜಿತ್ ಹಾಗೂ ಪವನ್ 4 ನೇ ವಿಕೆಟ್ ಜೊತೆಯಾಟದಲ್ಲಿ 43 ರನ್ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಅಂತಿಮ ಹಂತದಲ್ಲಿ ಅಬ್ಬರದ ಆಟಕ್ಕೆ ಮನ ಮಾಡಿದುದರ ಪರಿಣಾಮ ಹುಬ್ಬಳ್ಳಿ ತಂಡ ಲಗುಬಗನೇ ವಿಕೆಟ್ ಕಳೆದುಕೊಂಡಿತು. ರಿಷಬ್ ಸಿಂಗ್ ಒಂದೇ ಓವರ್ ನಲ್ಲಿ 3 ವಿಕೆಟ್ ಗಳಿಸಿ ಗಮನ ಸೆಳೆದರು. ಟಿ. ಪ್ರದೀಪ್ ದುಬಾರಿ ಬೌಲರ್ ಎನಿಸಿದರೂ 3 ವಿಕೆಟ್ ಕಬಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ