*ಚನ್ನಮ್ಮ ನಗರ ರಸ್ತೆ ಅಗೆದು ನಿದ್ದೆಗೆ ಜಾರಿದ ಮಹಾನಗರ ಪಾಲಿಕೆ* *5 ತಿಂಗಳ ಕಾಲ ಮುಖ್ಯ ರಸ್ತೆ ಸಂಪರ್ಕ ಕಡಿತವಾದರೆ ಜನರ ಪರಿಸ್ಥಿತಿ ಏನಾಗಬಹುದೆನ್ನುವ ಸಾಮಾನ್ಯ ಜ್ಞಾನ ಬೇಡವೇ?*


ಪಾಲಿಕೆಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಮೊದಲು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, 2 ದಿನದಲ್ಲಿ ರಸ್ತೆಗೆ ರೋಲರ್ ಹೊಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಪಾಲಿಕೆ ಅರೆ ನಿದ್ದೆಯಿಂದ ಚಿರನಿದ್ದೆಗೆ ಜಾರಿದೆ ಎಂದು ಜನರು ಅರ್ಥೈಸಿಕೊಳ್ಳಬಹುದು.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 5 ತಿಂಗಳುಗಳ ಕಾಲ ನಗರದ ಪ್ರಮುಖ ಬಡಾವಣೆಯೊಂದರ ಮುಖ್ಯರಸ್ತೆ ಸಂಪರ್ಕ ಕಡಿತಗೊಳಿಸಿದರೆ ಪರಿಣಾಮವೇನಾದೀತು ಎನ್ನುವ ಸಾಮಾನ್ಯ ಜ್ಞಾನ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಬೇಡವೇ?
ಬೆಳಗಾವಿಯ ಅತ್ಯಂತ ಪ್ರಮುಖ ಬಡಾವಣೆಯಾಗಿರುವ ಚನ್ನಮ್ಮ ನಗರದ ಮುಖ್ಯರಸ್ತೆಯನ್ನು ಅಗೆದಿಟ್ಟು ಬರೋಬ್ಬರಿ 5 ತಿಂಗಳಾಗಿದೆ. ಇದು ಮೇಯರ್ ಗಮನಕ್ಕಾಗಲಿ, ಆಯುಕ್ತರ ಗಮನಕ್ಕಾಗಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆಯುಕ್ತರಂತೂ ಜನಸಾಮಾನ್ಯರದ್ದಿರಲಿ, ಜನಪ್ರತಿನಿಧಿಗಳ ಫೋನ್ ರಿಸೀವ್ ಮಾಡಲೂ ಪುರಸೊತ್ತಿಲ್ಲದಷ್ಟು ಬೀಸಿಯಾಗಿದ್ದಾರೆ.
ಮೊದಲ ಮೂರೂವರೆ ತಿಂಗಳು ಚನ್ನಮ್ಮ ನಗರ ಮುಖ್ಯ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದರೆ, ಈಗ ಒಂದೂವರೆ ತಿಂಗಳಿನಿಂದ ಅರ್ಧ ರಸ್ತೆಯನ್ನು ಓಪನ್ ಮಾಡಿಟ್ಟಿದ್ದಾರೆ.
ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎನ್ನುವ ಸಂದರ್ಭದಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಅಡ್ಡ, ಉದ್ದ ಎಲ್ಲ ರೀತಿಯಲ್ಲೂ ಅಗೆದು ಸಂಪೂರ್ಣ ಆ ಮಾರ್ಗವನ್ನೇ ಬಂದ್ ಮಾಡಲಾಯಿತು. ಇನ್ನೇನು ವಾರದಲ್ಲಿ ಸರಿಯಾಗಬಹುದು ಎಂದು ಜನರು ಬೇರೆ ಬೇರೆ ಮಾರ್ಗಗಳನ್ನು ಹುಡುಕಿಕೊಂಡು ಸಂಚರಿಸತೊಡಗಿದರು. ಬಸ್ ಗಳೂ ದಿನಕ್ಕೊಂದು ಮಾರ್ಗದಲ್ಲಿ ಓಡಾಡತೊಡಗಿತು.
ಆದರೆ ತಿಂಗಳಾದರೂ ಯಾವುದೇ ಪ್ರಗತಿ ಕಾಣಲಿಲ್ಲ. ಅಷ್ಟರಲ್ಲಿ ಮಳೆಯೂ ಜೋರಾಗಿ ಅಧಿಕಾರಿಗಳಿಗೆ ನೆಪ ಸಿಕ್ಕಂತಾಯಿತು. ಮೂರೂವರೆ ತಿಂಗಳ ಕಾಲ ಜನರು ಯಾವ್ಯಾವುದೋ ಮಾರ್ಗ ಹುಡುಕಿಕೊಂಡು ಓಡಾಡಿದರು. ಕೊನೆಗೆ ಇನ್ನೇನು ಜನರು ಪ್ರತಿಭಟನೆ ನಡೆಸಬಹುದೆನ್ನುವ ಸುಳಿವು ಸಿಕ್ಕಾಗ ಅರ್ಧ ರಸ್ತೆ ಓಪನ್ ಮಾಡಲಾಯಿತು. ಆದರೆ ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಎರಡೂ ಕಡೆಯಿಂದ ವಾಹನಗಳು ಬಂದು ಸಿಕ್ಕಿಹಾಕಿಕೊಳ್ಳತೊಡಗಿದವು. ಇಷ್ಟಾದರೂ ಪಾಲಿಕೆ ಅಧಿಕಾರಿಗಳ ನಿದ್ದೆಗೆ ಮಾತ್ರ ಯಾವುದೇ ಅಡ್ಡಿಯಾಗಲಿಲ್ಲ.
ಈಗ ಜೋರಾದ ಮಳೆ ನಿಂತು ಹೆಚ್ಚು ಕಡಿಮೆ ತಿಂಗಳಾಯಿತು. ರಸ್ತೆಯ ಅಗೆದ ಜಾಗವೂ ಒಣಗಿ ನಿಂತಿದೆ. ಆದರೆ ಅಧಿಕಾರಿಗಳಿಗೆ ಇತ್ತ ಬಂದು ನೋಡುವುದಕ್ಕೂ ಪುರಸೊತ್ತು ಸಿಕ್ಕಿದಂತಿಲ್ಲ. ಅಥವಾ ಜನರಿಗೆ ಪ್ರತಿಭಟನೆಗಿಳಿಯಲು ಪ್ರಚೋದನೆ ನೀಡುತ್ತಿದ್ದಾರೋ ಗೊತ್ತಿಲ್ಲ. ಖಾಸಗಿ ವಾಹನ ಹೇಗೋ ಕಷ್ಟಪಟ್ಟು ಸಂಚರಿಸುತ್ತಿದ್ದರೆ, ಬಸ್ ಗಳು ಒಂದೊಂದು ದಿನ ಒಂದೊಂದು ರಸ್ತೆ ಹುಡುಕಿಕೊಂಡು ಹೋಗುತ್ತಿವೆ.
ಕಾಂಗ್ರೆಸ್ ರಸ್ತೆಯಿಂದ ಚನ್ನಮ್ಮ ನಗರ ರಸ್ತೆಗೆ ಹೋಗುವ ಮುಖ್ಯ ರಸ್ತೆ ಮತ್ತು ನೇಟಿವ್ ಹೊಟೆಲ್ ಹಿಂಬಾಗದ ರಸ್ತೆಗಳನ್ನೂ ಸಂಪೂರ್ಣ ಅಗೆದಿಡಲಾಗಿದೆ. ಹೊಟೆಲ್ ಹಿಂಬಾಗದ ರಸ್ತೆಯಂತೂ ಜನರೂ ಓಡಾಡಲಾಗದಂತಹ ಸ್ಥಿತಿಯಲ್ಲಿದೆ. ಮಳೆ ನಿಂತು ಇಷ್ಟು ದಿನವಾದರೂ ಪಾಲಿಕೆ ಅಧಿಕಾರಿಗಳು ಇತ್ತ ಸುಳಿಯದಿರುವುದೇ ಸೋಜಿಗದ ಸಂಗತಿಯಾಗಿದೆ.
ಪಾಲಿಕೆಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಮೊದಲು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, 2 ದಿನದಲ್ಲಿ ರಸ್ತೆಗೆ ರೋಲರ್ ಹೊಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಪಾಲಿಕೆ ಅರೆ ನಿದ್ದೆಯಿಂದ ಚಿರನಿದ್ದೆಗೆ ಜಾರಿದೆ ಎಂದು ಜನರು ಅರ್ಥೈಸಿಕೊಳ್ಳಬಹುದು.
ಮೇಯರ್ ಮತ್ತು ಆಯುಕ್ತರು ತಕ್ಷಣ ಸ್ಥಳಕ್ಕೆ ಬಂದು ನೋಡಿದರೆ ಪರಿಸ್ಥಿತಿ, ಜನರು ಕಳೆದ 5 ತಿಂಗಳಿನಿಂದ ಅನುಭವಿಸಿದ ಸಂಕಷ್ಟ ಅರ್ಥವಾಗಬಹುದು.
ಬಡಾವಣೆಯ ಇತರ ರಸ್ತೆಗಳ ಸ್ಥಿತಿಯೂ ಅಷ್ಟೆ
ಶಾಸಕರ ಅಭಯ ಪಾಟೀಲ 2 ವರ್ಷದ ಹಿಂದೆ ಚನ್ನಮ್ಮ ನಗರ ಬಡಾವಣೆಯ ಪ್ರತಿ ರಸ್ತೆಯನ್ನೂ ಡಾಂಬರೀಕರಣ ಮಾಡಿ ಮಾದರಿಯಾಗಿ ಅಭಿವೃದ್ಧಿಪಡಿಸಿದ್ದರು. ಆದರೆ ಶಾಸಕರ ಅಭಿವೃದ್ಧಿ ಕೆಲಸಕ್ಕೆ ಸವಾಲೊಡ್ಡುವ ರೀತಿಯಲ್ಲಿ ಎಲ್ಲ ರಸ್ತೆಗಳನ್ನೂ ಅಗೆದುಹಾಕಲಾಗಿದೆ. ಮುಖ್ಯ ರಸ್ತೆ ಸೇರಿದಂತೆ ಯಾವುದೇ ಒಳ ರಸ್ತೆಯಲ್ಲಿ ಸಂಚರಿಸಿದರೂ ಒಂದಿಲ್ಲೊಂದು ಪೈಪ್ ಲೈನ್ ಗಾಗಿ ರಸ್ತೆ ಅಗೆಯಲಾಗಿದೆ.
ಜನರು ಶಾಸಕರನ್ನು ಬಯ್ಯುತ್ತ ಓಡಾಡಲಿ ಎನ್ನುವುದೇ ಪಾಲಿಕೆ ಅಧಿಕಾರಿಗಳ ಉದ್ದೇಶವಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ.