*ಕನ್ನಡಿಗರನ್ನು ಕೆರಳಿಸಿ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತಂದ ಅಧಿಕಾರಿಯ ಅವಿವೇಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ 3 -4 ದಿನದಿಂದ ಬೆಳಗಾವಿ ಕುದಿಯುತ್ತಿದೆ. ಬೇಡದ ಕಾರಣಗಳಿಗಾಗಿ ಬೆಳಗಾವಿ ಸುದ್ದಿಯಲ್ಲಿದೆ. ಸಣ್ಣ ಘಟನೆಯೊಂದು ಭಾಷೆ ಮತ್ತು ಗಡಿ ವಿಷಯಕ್ಕಾಗಿ ದೊಡ್ಡ ಸುದ್ದಿಯಾಯಿತು.
ಜೊತೆಗೆ, ಅಧಿಕಾರಿಯೊಬ್ಬರ ಅವಿವೇಕತನದ ಕ್ರಮ ಕನ್ನಡಿಗರನ್ನು ಕೆರಳಿಸಿದ್ದಲ್ಲದೆ ಜನಪ್ರತಿನಿಧಿಗಳಿಗೂ ಕೆಟ್ಟ ಹೆಸರು ತಂದಿಟ್ಟಿತು.
ಬಸ್ ಕಂಡಕ್ಟರ್ ಟಿಕೆಟ್ ಕೊಡುವಾಗ ಕನ್ನಡದಲ್ಲಿ ಹೇಳಿ ಎಂದಿದ್ದು ಹದಿ ಹರೆಯದ ಇಬ್ಬರು ಹುಡುಗರನ್ನು ಕೆರಳಿಸಿ, ಅವರಲ್ಲಿ ಮರಾಠಿ ದುರಭಿಮಾನ ಉಕ್ಕುವಂತೆ ಮಾಡಿತು. ಪರಿಣಾಮವಾಗಿ ಉದ್ದಟತನ ಮೆರೆದು ಯುವಕರನ್ನೆಲ್ಲ ಸೇರಿಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದರು.
ಸಹಜವಾಗಿ ಈ ಘಟನೆ ಕನ್ನಡಿಗರನ್ನು ಕೆರಳಿಸಿತು. ಕನ್ನಡ ನೆಲದಲ್ಲಿ ಮರಾಠಿ ಭಾಷಿಕರು ದಬ್ಬಾಳಿಕೆ ಮಾಡಲು ಬಂದರೆ ಕನ್ನಡಿಗರು ಬಿಡಲು ಸಾಧ್ಯವೇ ಇಲ್ಲ. ಹಾಗಾಗಿಯೇ ಕನ್ನಡಿಗರು ಪ್ರತಿಭಟನೆಗಿಳಿದರು.
ಈ ಹಂತದಲ್ಲಿ, ಮುಂದಾಲೋಚನೆ ಇರುವ ಯಾವುದೇ ಅಧಿಕಾರಿ ದುಷ್ಕೃತ್ಯ ನಡೆಸಿದ ಪುಂಡರನ್ನು ಒದ್ದು ಒಳಹಾಕಿ ಮುಂದಾಗಬಹುದಾಗಿದ್ದ ಘಟನೆಗಳನ್ನು ತಪ್ಪಿಸುತ್ತಿದ್ದರು. ಆದರೆ ಅಧಿಕಾರಿಯೇ ದುರುದ್ದೇಶದಿಂದ ವರ್ತಿಸಿದರೋ ಅಥವಾ ಯಾರಾದರೂ ಅವರನ್ನು ದಾರಿ ತಪ್ಪಿಸಿದರೋ ಗೊತ್ತಿಲ್ಲ, ವಿನಾಕಾರಣ ಕೌಂಟರ್ ಪ್ರಕರಣ ದಾಖಲಿಸಿಕೊಂಡು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದರು.
ಕಾಲು ಹಾಕಲೂ ಜಾಗವಿಲ್ಲದಷ್ಟು ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ತನ್ನ ಮೇಲೆ ಅತ್ಯಾಚಾರಕ್ಕೆ ಕಂಡಕ್ಟರ್ ಯತ್ನಿಸಿದ ಎಂದು ಬಾಲಕಿಯೊಬ್ಬಳು ದೂರು ನೀಡಿದರೆ ಯಾರಾದರೂ ನಂಬಲು ಸಾಧ್ಯವೇ? 90 ಜನರಿರುವ ಬಸ್ ನಲ್ಲಿ ಅಂತಹ ಘಟನ ನಡೆಯಲು ಸಾಧ್ಯವೇ? ಈ ಬಗ್ಗೆ ಪೊಲೀಸ್ ಅಧಿಕಾರಿಗೆ ಸ್ವಲ್ಪವಾದರೂ ಸಾಮಾನ್ಯ ಜ್ಞಾನ ಬೇಡವೇ? ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಬಹುದಿತ್ತು.
ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಘಟನೆ ಬೆಳೆಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಮೂಲಕ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾರಿಹಾಳ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ಗುರುರಾಜ ಕಲ್ಯಾಣ ಶೆಟ್ಟಿಗೆ ಸ್ಪಷ್ಟ ಸಂದೇಶ ಕಳಿಸಿದ್ದರು. ಆ ದಿನ ರಾತ್ರಿ 11 ಗಂಟೆವರೆಗೂ ಘಟನೆಯ ಬೆಳವಣಿಗೆ ಮೇಲೆ ನಿಗಾ ಇಟ್ಟು, ಬೇರೆ ರೀತಿಯ ತಿರುವ ಪಡೆಯದಂತೆ ಸಚಿವರು ಮತ್ತು ವಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಎಚ್ಚರಿಕೆ ವಹಿಸಿದ್ದರು.
ಆದರೆ ಮಧ್ಯರಾತ್ರಿ 12 ಗಂಟೆಗೆ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಯಿತು. ಸಿಪಿಐ ಕಲ್ಯಾಣ ಶೆಟ್ಟಿ ವಿವೇಕತನ ಬಳಸಿದ್ದರೆ ಈ ಹಂತದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಿತ್ತು. ಪೋಕ್ಸೋ ಕೇಸ್ ದಾಖಲಾದ ಸುದ್ದಿಯನ್ನು ಬೆಳ್ಳಂ ಬೆಳಗ್ಗೆ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಪೊಲೀಸ್ ಆಯುಕ್ತರು ಶಾಕ್ ಆದರು.
ಕರ್ತವ್ಯ ನಿರತ ಸರಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಬಂಧಿಸಿ ಪ್ರಕರಣಕ್ಕೆ ಸುಖಾಂತ್ಯ ಕಾಣಿಸಬೇಕೆಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರಯತ್ನ ವಿವೇಕತನ ತೋರದ ಅಧಿಕಾರಿಯಿಂದಾಗಿ ದಾರಿತಪ್ಪುವಂತಾಯಿತು, ಕನ್ನಡಿಗರು ಕೆರಳಿ ಪ್ರಕರಣ ಬುಗಿಲೇಳುವಂತಾಯಿತು. ಜೊತೆಗೆ, ಸಚಿವೆಯ ಮೇಲೆಯೇ ಅನಗತ್ಯ ಅನುಮಾನಕ್ಕೆ ಕಾರಣವಾಯಿತು.
ಈಗ ಪೋಕ್ಸೋ ಕೇಸ್ ವಾಪಸ್ ಪಡೆಯುವುದಾಗಿ ಬಾಲಕಿಯ ಪಾಲಕರು ಹೇಳಿಕೆ ನೀಡಿದ್ದಾರೆ. ಆದರೆ ಕಾನೂನು ಪ್ರಕಾರ ಒಮ್ಮೆ ದಾಖಲಾದ ಪೋಕ್ಸೋ ಕೇಸ್ ನ್ನು ಹಿಂದಕ್ಕೆ ಪಡೆಯುವುದು ಕಷ್ಟ. ಪೊಲೀಸರು ವಿಚಾರಣೆ ನಡೆಸಿ ಬಿ ರಿಪೋರ್ಟ್ ಹಾಕಿದ ನಂತರವೇ ಕೇಸ್ ಕ್ಲೋಸ್ ಆಗಲಿದೆ. ವಿವೇಕತನ ತೋರದ ಸಿಪಿಐಯನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರನ್ನು ಅಮಾನತುಗೊಳಿಸಬೇಕೆನ್ನುವ ಒತ್ತಡ ಜೋರಾಗಿದೆ. ಅವರ ವಿರುದ್ಧ ಆಂತರಿಕ ತನಿಖೆ ನಡೆಯುತ್ತಿದೆ. ತನಿಖೆ ನಂತರ ಮುಂದಿನ ಕ್ರಮ ಆಗಬಹುದು. ಆದರೆ ಇಂತಹ ಅಧಿಕಾರಿಯಿಂದಾಗಿ ಎಷ್ಟೊಂದು ಅವಾಂತರವಾಯಿತು ಎನ್ನುವುದೇ ಬೇಸರದ ಸಂಗತಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ