
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿದ್ದ ಬೆಂಗಳೂರು ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲೂ ಹೆಸರು ಬಾರದ್ದರಿಂದ ಅಸಮಾಧಾನಕ್ಕೆ ಒಳಗಾದ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈ ಹಿಂದಿನ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೂ ಅವರನ್ನು ಪಕ್ಷ ಪುರಸ್ಕರಿಸಿಲ್ಲ ಎಂಬುದು ಅಖಂಡ ಅಸಮಾಧಾನ. ಕೆಲ ತಿಂಗಳುಗಳ ಹಿಂದೆ ಅವರ ನಿವಾಸದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಘಟನೆಯನ್ನು ಖಂಡಿಸುವ ಗೋಜಿಗೂ ಹೋಗದೆ ಪೂರ್ಣ ಮೌನ ವಹಿಸಿತ್ತು. ಆ ವೇಳೆಗಾಗಿಯೇ ಕಾಂಗ್ರೆಸ್ ಬಗ್ಗೆ ಅಸಮಾಧಾನದ ಕಿಡಿಗಳು ಹೊತ್ತಿಕೊಂಡಿದ್ದವು. ಆಗ ಅಖಂಡ ಬಿಜೆಪಿ ಸೇರುತ್ತಾರೆಂಬ ದಟ್ಟ ವದಂತಿಗಳು ಹರಡಿದ್ದವು. ಆದರೆ ಅವರು ಕಾಂಗ್ರೆಸ್ ನಲ್ಲೇ ಮುಂದುವರಿದಿದ್ದರು.
ಇದೀಗ ಎಲ್ಲ ಊಹಾಪೋಹಗಳಿಗೆ ತೆರೆಯೊಡ್ಡಿರುವ ಅಖಂಡ ಶ್ರೀನಿವಾಸಮೂರ್ತಿ ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದಾರೆ.