
ಪ್ರಗತಿವಾಹಿನಿ ಸುದ್ದಿ; ಸವದತ್ತಿ: ಅನುಭಾವಿಗಳ ಒಡನಾಟ ಅಮೃತತ್ವಕ್ಕೆ ಸಮನಾಗಿದ್ದು, ಅಂತವರ ಒಡನಾಟ ಭಗವಂತನ ಒಡನಾಟಕ್ಕೆ ಸರಿ ಸಮಾನವಾಗಿದೆ ಎಂದು ಸಹಜ ಸ್ಥಿತಿಯೋಗ ಶಿಬಿರದ ಶ್ರೀ ವಿರುಪಾಕ್ಷ ಗುರೂಜಿ ಹೇಳಿದರು.
ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗಾವಿಯ ಶಾಂತಾಯಿ ವೃದ್ದಾಶ್ರಮದಿಂದ ಆಗಮಿಸಿದ ಹಿರಿಯ ಜೀವಿಗಳಿಗೆ ದೇವಸ್ಥಾನ ಅಭಿವೃದ್ದಿ ಸಂಸ್ಥೆಯವರು ಮತ್ತು ಶ್ರೀ ರಾಮಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯವರು ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೇವಾ ಮನೋಭಾವನೆಯ ಜೊತೆಯಾಗಿ ಮಾತೃಹೃದಯದ ಪ್ರೀತಿಯನ್ನು ಕಾಣುವತ್ತ ನಾವು ಪಯಣಿಸಬೇಕಿದೆ. ಸೇವಾ ಮನೋಭಾವನೆಗಳಿಗೆ ಎಂದಿಗೂ ಬೆಲೆಕಟ್ಟಲು ಸಾಧ್ಯವಿಲ್ಲದಾಗಿದ್ದು, ಸಮಾಜ ಮುಖಿಯಾಗಿ ನೊಂದವರ ಬಾಳಿನ ಬೆಳಕಾಗಿ ವಯೋವೃದ್ದರಿಗೆ ಉತ್ತಮ ಬದುಕು ನೀಡುತ್ತಿರುವ ವಿಜಯ ಮೋರೆಯವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಂತಾಯಿ ವೃದ್ದಾಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಮಾತನಾಡಿ, ಆಶ್ರಮದ ಹಿರಿಯ ಜೀವಿಗಳಿಗೆ ತೋರುತ್ತಿರುವ ಪ್ರೀತಿ ಮತ್ತು ಸೇವಾ ಮನೋಭಾವ ಮನಸ್ಸನ್ನು ಅತ್ಯಂತ ಖುಷಿಗೊಳಿಸಿದ್ದು, ಅತ್ಮ ಸಂತೋಷ ಉಕ್ಕಿ ಬರುತ್ತಿದೆ ಎಂದರು. ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಸಮಿತಿಯವರು ಶ್ರೀ ಕ್ಷೇತ್ರದ ಯಲ್ಲಮ್ಮಾದೇವಿಯ ದರ್ಶನದೊಂದಿಗೆ ಆಶ್ರಮದ ಹಿರಿಯ ಅಜ್ಜ ಅಜ್ಜಿಯವರಿಗೆ ಮಾತೃ ಹೃದಯದ ಪ್ರೀತಿ ತೋರಿ ವಿಶೇಷ ಕಾಳಜಿಯಿಂದ ಪ್ರಸಾದದ ವ್ಯವಸ್ಥೆ ಮಾಡಿರುವುದು ಹಿರಿಯ ಜೀವಿಗಳಿಗೆ ಅತ್ಯಂತ ಸಂತಸ ತಂದಿದೆ ಎಂದರು. 34 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಈ ಆಶ್ರಮದ ಸೇವೆಯು ತಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಇಂದು ಸಾರ್ಥಕತೆಯತ್ತ ಸಾಗುತ್ತಿದೆ ಎಂದರು.
ಶ್ರೀ ರಾಮಲಿಂಗೆಶ್ವರ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಪುಂಡಲೀಕ ಭೀ. ಬಾಳೋಜಿ ಮಾತನಾಡಿ, ಸಮಾಜದಲ್ಲಿ ನೊಂದವರ ಬದುಕಿಗೆ ದಾರಿದೀಪವಾಗಿರುವ ಶಾಂತಾಯಿ ವೃದ್ದಾಶ್ರಮದ ವಿಜಯ ಮೋರೆಯವರ ಕಾರ್ಯ ಸಮಾಜಕ್ಕೆ ಕನ್ನಡಿಯಾಗಿದ್ದು, ಸುಮಾರು 775ಕ್ಕೂ ಅಧಿಕ ಅನಾಥ ಶವಗಳಿಗೆ ಮುಕ್ತಿಯನ್ನು ನೀಡಿರುವ ಇವರ ಮಾನವೀಯತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಅನ್ನಪ್ಪ ಪವಾರ, ಮಲ್ಲೇಶ ರಾಜನಾಳ, ಧರ್ಮರಾಜ ಗಿರಿಜನ್ನವರ, ರಾಜು ಸುರಪುರ, ಅಂದುಸಿಂಗ್ ರಜಪುತ, ಕೇದಾರ ಮೊಕಾಶಿ, ಶಿವಾನಂದ ತಾರಿಹಾಳ, ರವಿ ಗಿರಿಜನ್ನವರ, ಲಕ್ಷ್ಮಣ ಕಿಟದಾಳ, ವಿಠ್ಠಲ ಜಾಮದಾರ, ವಿಠ್ಠಲ ತಾರಿಹಾಳ, ಅಶೋಕ ಮೊಕಾಶಿ, ಸುರೇಶ ಬಾಳೋಜಿ, ಮಂಜುನಾಥ ಡಬಕೆ, ಚಂದ್ರಶೇಖರ ಮುನ್ನೋಳಿಮಠ, ಮಾರುತಿ ಜಾಧವ, ಸಿದ್ದಪ್ಪ ರಾಹುತ, ಅಶೋಕ ಶಿಂಧೆ, ಕುಮಾರ ಜಕಾತಿ ಇತರರು ಉಪಸ್ಥಿತರಿದ್ದರು.
ಮಹೇಶ ಜಾಮದಾರ ಪ್ರಾರ್ಥಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿದರು. ಹುಸೇನ ನದಾಫ ವಂದಿಸಿದರು.