ಮುದ್ರಣ ಮಾಧ್ಯಮ ಉಳಿಯಬೇಕು, ಬೆಳೆಯಬೇಕು

ಎಂ.ಕೆ.ಹೆಗಡೆ, ಬೆಳಗಾವಿ -ಕೊರೋನಾ ವಿಶ್ವದಲ್ಲಿ ಎಲ್ಲ ಉದ್ಯಮಗಳನ್ನೂ ಕೊಂದು ಹಾಕುತ್ತಿದೆ. ಕೆಲವು ಉದ್ಯಮಗಳಂತೂ ಮತ್ತೆ ಏಳಲಾಗದ ಸ್ಥಿತಿ ತಲುಪುತ್ತಿದೆ. ಯಾವಾಗ ಈ ಮಹಾಮಾರಿ ಅಂತ್ಯವಾಗುತ್ತದೆಯೋ ಎಂದು ಜನ ಕಾಯುತ್ತಿದ್ದಾರೆ.

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಲ್ಲಿ ಮುದ್ರಣ ಮಾಧ್ಯಮವೂ ಸೇರಿದೆ. ಕೊರೋನಾ ವೈರಸ್ ತನ್ನ ಕಬಂಧ ಬಾಹು ವಿಸ್ತರಿಸುತ್ತಿದ್ದಂತೆ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಮುದ್ರಣ ಮಾಧ್ಯಮಕ್ಕೂ ಸಂಕಷ್ಟ ಎದುರಾಗಿದೆ. ಪತ್ರಿಕೆಗಳ ಮೂಲಕ ಕೊರೋನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿಯಿಂದಾಗಿ ಇಂತಹ ಪರಿಸ್ಥಿತಿ ಬಂದೊದಗಿದೆ.

1843ರಲ್ಲಿ ಮಂಗಳೂರು ಸಮಾಚಾರದ ಮೂಲಕ ಆರಂಭವಾದ ಕನ್ನಡ ಪತ್ರಿಕೋದ್ಯಮ ಇಂದು ಅಗಾಧವಾಗಿ ಬೆಳೆದು ನಿಂತಿದೆ. ಟಿವಿ ಚಾನೆಲ್, ಸಾಮಾಜಿಕ ಜಾಲತಾಣಗಳು ಮತ್ತು ಆನ್ ಲೈನ್ ಪತ್ರಿಕೆಗಳ ಸ್ಪರ್ಧೆಯ ಮಧ್ಯೆಯೂ ಪತ್ರಿಕೆಗಳು ತಮ್ಮದೇ ಛಾಪು ಮೂಡಿಸಿ ಬೆಳವಣಿಗೆ ಕಂಡಿವೆ.

ಕರ್ನಾಟಕದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ದಿನ ಪತ್ರಿಕೆಗಳು ಮಾರಾಟವಾಗುತ್ತಿವೆ. ಹೊಸ ಪತ್ರಿಕೆಗಳು ಹುಟ್ಟಿಕೊಂಡರೂ ಹೊಸ ಓದುಗರು ಹುಟ್ಟಿಕೊಳ್ಳುತ್ತ ಉದ್ಯಮ ವಿಸ್ತಾರವಾಗುತ್ತಲೇ ಹೋಗುತ್ತಿವೆ. ಸಂಪಾದಕೀಯ ಸಿಬ್ಬಂದಿಯಿಂದ ಪತ್ರಿಕೆ ಹಂಚುವ ಹುಡುಗರವರೆಗೆ ಲಕ್ಷಾಂತರ ಜನ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಪ್ರತ್ಯಕ್ಷ, ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಉದ್ಯಮದ ಮೇಲೆ ಅವಲಂಬಿಸಿವೆ.

ಆದರೆ ಇತ್ತಿಚೀನ ದಿನಗಳಲ್ಲಿ ನ್ಯೂಸ್ ಪ್ರಿಂಟ್ ದರ ಏರಿಕೆ ಮತ್ತಿತರ ಕಾರಣಗಳಿಂದಾಗಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಕೆಲವುಮಟ್ಟಿಗೆ ಮ್ಯಾನೇಜ್ ಮೆಂಟ್ ತಪ್ಪೂ ಇರಬಹುದು. ಆದರೆ ಪತ್ರಿಕೆ ಇವೆಲ್ಲವನ್ನೂ ಮೆಟ್ಟಿ ನಿಂತು ಬೆಳೆಯುವ ವಿಶ್ವಾಸವಿದೆ.

ಇದೆಲ್ಲದರ ಮಧ್ಯೆ ಇದೀಗ ಕೊರೋನಾ ವೈರಸ್ ಹರಡುತ್ತಿದ್ದಂತೆ ಪತ್ರಿಕೋದ್ಯಮದಲ್ಲಿ ದೊಡ್ಡ ಆತಂಕ ಉಂಟಾಗಿದೆ. ಪತ್ರಿಕೆಗಳೂ ಕೊರೋನಾ ವೈರಸ್ ಹರಡಲು ಕಾರಣವಾಗಬಹುದು, ಹಾಗಾಗಿ ತಾತ್ಕಾಲಿಕವಾಗಿ ಪತ್ರಿಕೆ ತರಿಸುವುದನ್ನು ನಿಲ್ಲಿಸಿ ಎನ್ನುವ ಸಂದೇಶ ಹರಿದಾಡಿತು.(ದುರದೃಷ್ಟವಶಾತ್ ಪ್ರಮುಖ ಪತ್ರಿಕೆಯೊಂದರಲ್ಲೂ ಇಂತಹ ಹೇಳಿಕೆ ಪ್ರಕಟವಾಯಿತು.)

ಪತ್ರಿಕೆಗಳಿಂದ ಕೊರೋನಾ ವೈರಸ್ ಹರಡುತ್ತದೆ ಎನ್ನುವುದು ಎಲ್ಲೂ ದೃಢಪಟ್ಟಿಲ್ಲ. ಪತ್ರಿಕೆಗಳೂ ಸೇರಿದಂತೆ ಮಾಧ್ಯಮಗಳ ಹೊಣೆಗಾರಿಕೆ, ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರತಿ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದಾರೆ.

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಮುಖ 8 ಪತ್ರಿಕೆಗಳು ಸೇರಿ ಒಂದೇ ಸಂಪಾದಕೀಯ ಬರೆದವು. ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ ಎನ್ನುವುದನ್ನು ಒತ್ತಿ ಹೇಳಿದವು. ಹಲವಾರು ಗಣ್ಯರು ಕೂಡ ಇಂತಹ ಹೇಳಿಕೆ ನೀಡುವುದರ ಜೊತೆಗೆ ತಾವು ಪತ್ರಿಕೆಯನ್ನು ಧೈರ್ಯದಿಂದ ಓದುತ್ತಿರುವ ಫೋಟೋಗಳನ್ನು ಶೇರ್ ಮಾಡಿದರು. ಆದಾಗ್ಯೂ ಬಂದಿರುವ ಸಂಕಷ್ಟದಿಂದ ಪಾರಾಗಲು ಮುದ್ರಣ ಮಾಧ್ಯಮಕ್ಕೆ ಇನ್ನೂ ಕೆಲವು ಸಮಯ ಬೇಕಾಗಬಹುದು.

ಇಂತಹ ಸಂಕಷ್ಟದಿಂದ ಮುದ್ರಣ ಮಾಧ್ಯಮ ಪಾರಾಗಬೇಕು. ಮಾಧ್ಯಮಗಳೆಲ್ಲ ಒಟ್ಟಾಗಿ ನಿಂತು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕು.

ಜೊತೆಗೆ, ಜನರು ಕ್ಷಣಕ್ಷಣದ ಸುದ್ದಿಗಾಗಿ ಕಾಯುತ್ತಿರುವ ಈ ಸಂದರ್ಭದಲ್ಲಿ ಮತ್ತು ಜನರ ಸುದ್ದಿಯ ದಾಹವನ್ನು ಇ ಪತ್ರಿಕೆಗಳು, ಟಿವಿಗಳು ತಣಿಸುತ್ತಿರುವ ಸಂದರ್ಭದಲ್ಲಿ ಅವುಗಳ ವಿರುದ್ಧ ಕೆಲವು ಪತ್ರಿಕೆಗಳು ನೀಡುತ್ತಿರುವ ಜಾಹಿರಾತನ್ನೂ ನಿಲ್ಲಿಸಬೇಕು. ಮಾಧ್ಯಮಗಳಲ್ಲಿ ಒಗ್ಗಟ್ಟು ಮೂಡಬೇಕು. ಒಟ್ಟಾಗಿ ಬೆಳೆಯಬೇಕು. ಜನರ ನಿರೀಕ್ಷೆಗೆ ಗೌರವ ಕೊಟ್ಟು, ಇತರ ಮಾಧ್ಯಮಗಳೊಂದಿಗೇ ಮುದ್ರಣ ಮಾಧ್ಯಮವೂ ಮುಂದುವರಿಯಬೇಕೇ ವಿನಃ ಅವುಗಳ ಬಗೆಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಬೇಡ.

ಭಾರತದಲ್ಲಿ ಮುದ್ರಣ ಮಾಧ್ಯಮಕ್ಕೆ ಇಷ್ಟು ಬೇಗ ಸಾವು ಬರುವುದಿಲ್ಲ. ಅದನ್ನು ತಂದುಕೊಳ್ಳಲೂಬಾರದು. ಜನರ ವಿಶ್ವಾಸವನ್ನು ಗೆಲ್ಲುತ್ತ, ಇತರ ಮಾಧ್ಯಮಗಳಿಗೂ ಗೌರವ ನೀಡುತ್ತ ಮುಂದುವರಿದಲ್ಲಿ ಯಾವುದೇ ಅಪಾಯವಿಲ್ಲ, ಯಾರಿಗೂ ತೊಂದರೆ ಇಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button