Kannada NewsKarnataka NewsLatest

ವಾಹನಗಳ ಗಾಳಿ ಬಿಟ್ಟು ಸವಾರರ ಮೇಲೆ ಹಲ್ಲೆ ನಡೆಸಿದ ಪ್ರತಿಭಟನಾಕಾರರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಇಂದು ಖಾಸಗಿ ಸಾರಿಗೆ ಒಕ್ಕೂಟ ನಡೆಸಿರುವ ಪ್ರತಿಭಟನೆ ಅಲ್ಲಲ್ಲಿ ಹಲ್ಲೆ ಘಟನೆಗಳಿಗೂ ಕಾರಣವಾಗಿದೆ.

ಬಹುತೇಕ ಖಾಸಗಿ ಸೇವಾ ವಾಹನಗಳು ಇಂದು ರಸ್ತೆಗಿಳಿದಿಲ್ಲ. ಆದರೆ ಬೆಂಗಳೂರಿನ ಕೆಲವೆಡೆ ರೆಪಿಡೊ, ಗೂಡ್ಸ್ ವಾಹನಗಳು ಸೇವೆ ಮುಂದುವರಿಸಿರುವುದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಪ್ರತಿಭಟನೆಯಲ್ಲಿ ನಿರತರಾದ ಕೆಲವರು ರಸ್ತೆಗಿಳಿದ ಖಾಸಗಿ ಸೇವಾ ವಾಹನಗಳ ಟೈರ್ ಗಳ ಗಾಳಿ ಬಿಟ್ಟು ವಾಹನ ಸವಾರರನ್ನು ಹಿಗ್ಗಾಮುಗ್ಗ ಥಳಿಸಿದ್ದಲ್ಲದೆ, ವಾಹನ ಕೂಡ ಜಖಂಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ಕ್ಯಾಬ್ ಚಾಲಕರ ಗುಂಪೊಂದು ರಾಪಿಡೊ ಚಾಲಕ ಮತ್ತು ಹಿಂಬದಿ ಸವಾರನ ಮೇಲೆ ಹಲ್ಲೆ ನಡೆಸಿದೆ. ರೆಪಿಡೊ ಬೈಕ್ ಜಖಂಗೊಳಿಸಿದ್ದಲ್ಲದೆ ಸವಾರರ ಮೇಲೆ ಹಲ್ಲೆಗೈದು ಗಾಯಗೊಳಿಸಿದೆ.

ಬೊಮ್ಮನಳ್ಳಿ ರಸ್ತೆಯಲ್ಲಿ ಕೆಲ ಪ್ರತಿಭಟನಾಕಾರರು ರೆಪಿಡೊ ಬೈಕ್ ಒಂದನ್ನು ತಾವೇ ಫೋನ್ ಮಾಡಿ ಬುಕ್ ಮಾಡಿ ಕರೆಸಿಕೊಂಡು ಚಾಲಕನ ಮೇಲೆ ಹಲ್ಲೆಗೈದ ಪ್ರಕರಣ ಕೂಡ ನಡೆದಿದೆ. ಎಸ್​ಪಿ ರಸ್ತೆಯ ಸುಜಾತಾ ಟಾಕೀಸ್ ಬಳಿ ಐದಾರು ಗೂಡ್ಸ್ ಗಾಡಿಗಳ ಟೈರ್ ಗಾಳಿ ತೆಗೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಈ ವಾಹನಗಳು ರಸ್ತೆ ನಡುವೆ ನಿಂತು ಸಂಚಾರಕ್ಕೆ ಅಡಚಣೆಯಾದವು. ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ತೆರವುಗೊಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button