EducationKannada NewsKarnataka NewsLatest

*ಈ ಸರಕಾರಿ ಪ್ರೌಢ ಶಾಲೆ ಪ್ರವೇಶಕ್ಕೆ ನೂಕು ನುಗ್ಗಲು!*

ಪ್ರಗತಿವಾಹಿನಿ ಸುದ್ದಿ : ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕಾಗಿ ಮೊದಲ ದಿನವೇ ೨೫೦ಕ್ಕೂ ಅಧಿಕ ಪಾಲಕರು ಸರತಿಯಲ್ಲಿ  ನಿಂತು ಅರ್ಜಿ ನಮೂನೆ ಸ್ವೀಕರಿಸಿದ್ದು ಗಮನ ಸೆಳೆಯಿತು.

ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಶಿರಸಿಯ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಎಂಟನೇ ವರ್ಗದಲ್ಲಿ ಓದಿಸಲು ಅರ್ಜಿ ಪಡೆಯಲು ಪಾಲಕರು ಸರತಿಯಲ್ಲಿ ನಿಂತು ಸ್ವೀಕರಿಸಿದರು.

ಎಂಟು ಹಾಗೂ ಒಂಬತ್ತನೇಯ ವರ್ಗಕ್ಕೆ ೨೦೨೫-೨೬ರ ದಾಖಲಾತಿಗೆ ಪ್ರೌಢ ಶಾಲೆಯಿಂದ ಮಾರ್ಚ ೨೭, ೨೮ ಹಾಗೂ ಏಪ್ರೀಲ್ ೧ರಂದು‌ ಅರ್ಜಿ ನೀಡಲಾಗುತ್ತದೆ ಎಂದು ಪ್ರಕಟಿಸಿತ್ತು. ಇದನ್ನು ಗಮನಿಸಿದ ಇನ್ನೂರೈವತ್ತಕ್ಕೂ ಅಧಿಕ ಪಾಲಕರು ಮೊದಲ ದಿನವೇ ಅರ್ಜಿ ಪಡೆಯಲು  ಆಸಕ್ತರಾದರು.

೧೬೦ಕ್ಕೂಅಧಿಕ ವರ್ಷದ ಇತಿಹಾಸವುಳ್ಳ, ಗಿರೀಶ‌ ಕಾರ್ನಾಡ, ರಾಮಕೃಷ್ಣ ಹೆಗಡೆ ಅವರೂ ಸೇರಿದಂತೆ‌ ಸಾವಿರಾರು ಸಾಧಕರನ್ನು‌ ಕೊಡುಗೆಯಾಗಿ ನೀಡಿದ ಪ್ರೌಢಶಾಲೆ‌ ಎಂಬ ಹೆಗ್ಗಳಿಕೆ ಇದೆ. ಪ್ರತೀ ವರ್ಷ ಐನೂರಕ್ಕೂ ಅಧಿಕ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಿಸುವ ಪ್ರೌಢ ಶಾಲೆ ಇದಾಗಿದೆ. 

Home add -Advt

ಈ‌ ಮಧ್ಯೆ  ನಾಲ್ಕು ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದು ದಾಖಲೆ ಮಾಡಿದ್ದಾರೆ. ಎ ಗ್ರೇಡ್ ಮಾನ್ಯತೆಯ ಪ್ರೌಢ ಶಾಲೆಯಲ್ಲಿ ಕಲೆ ಹಾಗೂ ಕ್ರೀಡೆಗೂ ಉತ್ತೇಜನವಿದೆ ಎಂಬುದನ್ನೂ ಗಮನಿಸಿದ ಪಾಲಕರು ಈ ಪ್ರೌಢ ಶಾಲೆಗೆ ಮಕ್ಕಳ ಪ್ರವೇಶಕ್ಕಾಗಿ ಬೇಕಾದ ಆರಂಭಿಕ ಅರ್ಜಿ ಸ್ವೀಕರಿಸಲು ಬಯಸಿದ್ದಾರೆ.

ಗುರುವಾರ ಬೆಳಿಗ್ಗೆಯಿಂದಲೇ ಅರ್ಜಿ ನೀಡಲಾಗುತ್ತಿದ್ದು, ಆಂಗ್ಲ ವಿಭಾಗ, ಕನ್ನಡ ವಿಭಾಗದಲ್ಲಿ ಮಕ್ಕಳ ಸೇರ್ಪಡೆ ಬಯಸಿದ ಪಾಲಕರು ಅರ್ಜಿ ಸ್ವೀಕರಿಸಿದರು.

ಇನ್ನು, ಶುಕ್ರವಾರ ಹಾಗೂ ಏ.೧ ರಂದು‌ ಪ್ರವೇಶದ ಅರ್ಜಿ ವಿತರಣೆ ನಡೆಯಲಿದೆ.  ಭರಣ ಮಾಡಿದ ಅರ್ಜಿಯನ್ನು  ಏಪ್ರೀಲ್‌ ೯, ೧೧ ಹಾಗೂ ೧೨ರಂದು ಹಿಂದಿನ ತರಗತಿಯ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಮತ್ತು ಭರ್ತಿ ಮಾಡಿದ ಅರ್ಜಿಯನ್ನು ವಾಪಸ್ ನೀಡುವುದು ಎಂದು ಪ್ರಭಾರಿ ಉಪ‌ ಪ್ರಾಚಾರ್ಯ ಆರ್.ವಿ.ನಾಯ್ಕ ತಿಳಿಸಿದ್ದಾರೆ.

Related Articles

Back to top button