ಪ್ರಗತಿವಾಹಿನಿ ಸುದ್ದಿ, ಅಥಣಿ- ಪ್ರಾದೇಶಿಕ ಪಕ್ಷ ಏನು ಬೇಕಾದರೂ ಮಾಡಬಹುದೆಂದು ಆಂದ್ರಪ್ರದೇಶದ ಜಗನಮೋಹನ ರೆಡ್ಡಿ ಅವರು ತೋರಿಸಿದ್ದಾರೆ. ಅದೆ ರೀತಿ ಕರ್ನಾಟಕದಲ್ಲೂ ಸಹ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮಾಡಿ ತೋರಿಸುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಹೇಳಿದರು.
ಸ್ಥಳೀಯ ನಗರದ ಶಿವಣಗಿ ಸಾಂಸ್ಕ್ರತಿಕ ಭವನದಲ್ಲಿ ಇಂದು ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಪ್ರಾದೇಶಿಕ ಪಕ್ಷವಾದಂತಹ ಆಂಧ್ರಪ್ರದೇಶದ ಜಗನ್ ಮೋಹನ ರೆಡ್ಡಿ ಅವರ ಪಕ್ಷದಿಂದ ಸುಮಾರು ೧೫೦ ಜನ ಶಾಸಕರು ಆಯ್ಕೆ ಆಗುವುದರ ಮೂಲಕ ದೇಶದ ಗಮನ ಸೆಳೆದರು. ಈಗ ಜಗನಮೋಹನ ರೆಡ್ಡಿ ಅವರು ಹೇಳಿದಂತೆ ಕೇಂದ್ರ ಸರಕಾರವು ಸಹ ಕೇಳುತ್ತದೆ ಎಂದರೆ ಅದು ಪ್ರಾದೇಶಿಕ ಪಕ್ಷದ ತಾಕತ್ತು ಎಂದು ಹೇಳಿದರು.
ಉತ್ತರ ಕರ್ನಾಟಕದ ಜವಾಬ್ದಾರಿ
ನಮ್ಮ ಜೆ.ಡಿ.ಎಸ್. ಪಕ್ಷಕ್ಕೂ ಒಂದಿಲ್ಲ ಒಂದು ಭಾರಿ ಆ ಭಾಗ್ಯ ಬಂದೆ ಬರುತ್ತದೆ. ಕಾರ್ಯಕರ್ತರು ಎದೆಗುಂದಬಾರದು ಎಂದು ಕರೆ ನೀಡಿದರು. ಈಗ ರಾಷ್ಟ್ರೀಯ ಅಧ್ಯಕ್ಷರಾದ ದೇವಗೌಡರು ಮತ್ತು ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ ಅವರು ನನಗೆ ಉತ್ತರ ಕರ್ನಾಟಕದ ಜವಾಬ್ದಾರಿಯನ್ನು ನೀಡಿದ್ದಾರೆ. ಅದಕ್ಕಾಗಿ ಎಲ್ಲ ೧೭ ಮತಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಯನ್ನು ಜೆಡಿಎಸ್ ನಿಂದ ಕಣಕ್ಕೆ ಇಳಿಸೇ ಇಳಿಸುತ್ತೇವೆ ಎಂದು ಅವರು ಹೇಳಿದರು.
ಬೇರೆ ಪಕ್ಷವನ್ನು ಟೀಕಿಸುವ ಬದಲು ನಮ್ಮ ಮನೆ ವ್ಯವಸ್ಥೆಯನ್ನು ಸರಿಪಡಿಸೋಣ. ಎಲ್ಲಿ ಕೆಟ್ಟಿದೆ ಅಲ್ಲಿ ರೀಪೆರಿ ಮಾಡೋಣ. ಈ ಹಿಂದೆ ನಮ್ಮ ಪಕ್ಷದಿಂದಲೇ ಅತಿ ಹೆಚ್ಚು ಜನ ಈ ಬೆಳಗಾವಿ ಜಿಲ್ಲೆಯಲ್ಲಿ ಆಯ್ಕೆ ಆಗಿದ್ದರು. ಈಗ ಕಾಲ ಚಕ್ರ ಬದಲಾಗಿದೆ. ಬಿ.ಜೆ.ಪಿ., ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚು ಇದ್ದಾರೆ. ಮುಂದೆಯೂ ಕಾಲಚಕ್ರ ಇದೇ ರೀತಿ ಇರುವುದಿಲ್ಲ. ಬದಲಾವಣೆ ಆಗೇ ಆಗುತ್ತದೆ. ವ್ಯವಸ್ಥಿತವಾದ ಸಂಘಟನೆಯನ್ನು ಮಾಡಿ ಚುನಾವಣೆಗಳನ್ನು ಎದುರಿಸಿದರೆ ನಮ್ಮ ಅಭ್ಯರ್ಥಿಗಳು ಆಯ್ಕೆ ಆಗೇ ಆಗುತ್ತಾರೆ. ನಾವು ಮತ್ತೆ ಅಧಿಕಾರ ಹಿಡಿದೆ ಹಿಡಿಯುತ್ತೇವೆ ಎಂದು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು.
ಬಿಜೆಪಿ ತಡೆ ಹಿಡಿದಿದೆ
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಬೇಕು. ಆಡಳಿತ ವ್ಯವಸ್ಥೆ ತಪ್ಪಿದಾಗ ಅದರ ವಿರುದ್ದ ನಾವು ಹೋರಾಟ ಮಾಡಬೇಕು. ಮೊನ್ನೆ ನೆರೆ ಹಾವಳಿಯಲ್ಲಿ ಲಕ್ಷಾಂತರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆದವು. ಸರಕಾರ ಮಾತ್ರ ಅವರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ ಅವರು ೮ ಸಾವಿರ ಕೋಟಿ ಸಾಲ ಮನ್ನಾ ಹಣ ಬಿಡುಗಡೆ ಮಾಡಿದ್ದನ್ನು ಬಿಜೆಪಿ ತಡೆ ಹಿಡಿದಿದೆ ಎಂದು ಟೀಕಿಸಿದರು.
ಭಾರಿ ನೆರೆ ಹಾವಳಿ ಬಂದರೂ ನಮ್ಮ ಪ್ರಧಾನ ಮಂತ್ರಿಗಳು ಮಾತ್ರ ಇತ್ತಕಡೆ ಬರಲಿಲ್ಲ. ಜನರ ಸಂಕಷ್ಟ ಆಲಿಸಲಿಲ್ಲ. ಪ್ರವಾಹದ ನಿಜ ಪರಸ್ಥಿತಿ ರಾಜ್ಯಕ್ಕೆ ಭೇಟ್ಟಿ ನೀಡಿ ಅರಿಯಲಿಲ್ಲ. ಒಂದು ಬಿಡಿಗಾಸು ಹಣವನ್ನು ಕೇಂದ್ರದಿಂದ ರಾಜ್ಯಕ್ಕೆ ಬಿಡಲಿಲ್ಲ. ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಾನು ಸ್ಫರ್ಧೆ ಮಾಡಲ್ಲ
ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಾಜಿ ಸಚಿವೆ ಲೀಲಾದೇವಿ ಪ್ರಸಾದ ಮಾತನಾಡಿ, ನನಗೆ ಹೈಕಮಾಂಡ್ ಅಥಣಿ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ದಾರೆ. ಇಂದಿನ ಸಭೆಯಲ್ಲಿ ನೀವು ಸಹ ಒತ್ತಾಯ ಮಾಡಿದ್ದೀರಿ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ಆದರೆ ನನಗೆ ಈಗ ೮೬ ವರ್ಷ. ನನಗೆ ಸ್ಪರ್ಧೆ ಮಾಡುವ ಇಚ್ಚೆಇಲ್ಲ, ಮಾಡಲ್ಲ. ಈ ಮತಕ್ಷೇತ್ರಕ್ಕೆ ಯುವಕರಿಗೆ ಅವಕಾಶ ನೀಡಿ. ಅವರ ಪರವಾಗಿ ನಾನೆ ನಿಂತಿದ್ದೇನೆ ಎಂದು ಭಾವಿಸಿ ಚುನಾವಣೆಯಲ್ಲಿ ಗೆಲುವಿಗೆ ಪ್ರಯತ್ನ ಮಾಡುವೆ ಎಂದು ಹೇಳಿದರು.
ಪಕ್ಷ ಶೋಚನಿಯ ಸ್ಥಿತಿಯಲ್ಲಿ
ಹಿರಿಯ ಧುರೀಣ ಗಿರೀಶ ಬುಟಾಳೆ ಮಾತನಾಡಿ, ಅಥಣಿ ಮತಕ್ಷೇತ್ರದಲ್ಲಿ ಪಕ್ಷದ ಸ್ಥಿತಿ ಶೋಚನೀಯವಾಗಿದೆ. ಅದಕ್ಕಾಗಿ ಸಂಘಟನೆಗೆ ರಾಜ್ಯ ನಾಯಕರು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿದರು.
ನಂತರ ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ, ಶಂಕರ ಮಾಡಲಗಿ, ಶ್ರೀಶೈಲ ಹಳ್ಳದಮಳ್ಳ, ಮಾತನಾಡಿದರು. ಇದೆ ವೇಳೆ ಲಕ್ಕಪ್ಪ ಮುಡಿಸಿ, ಅಣ್ಣಾರಾಯ ಹಾಲಳ್ಳಿ, ಮುರುಗಯ್ಯಾ ಇಟ್ನಾಳಮಠ(ಘಟನಟ್ಟಿ), ಗೀರಿಶ ಬುಟಾಳೆ, ಎಸ್ ಬಿ ನಾಯಿಕ, ಮಹೇಶ ಅವಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಐವರಿಂದ ಟಿಕೇಟ್ ಗಾಗಿ ಅರ್ಜಿ ಸಲ್ಲಿಕೆ
ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೋನರೆಡ್ಡಿ ಅವರಿಗೆ ಶ್ರೀಶೈಲ ಹಳ್ಳದಮಳ, ಅಣ್ಣಾರಾಯ ಹಾಲಳ್ಳಿ, ಗಿರೀಶ ಬುಟಾಳಿ, ಲಕ್ಷ್ಮಣ ಮುಡಸಿ, ಪುಂಡಲೀಕ ಪಾಟೀಲ ಅವರು ಜೆಡಿಎಸ್ ಟಿಕೇಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದರು. ಅರ್ಜಿ ಸ್ವೀಕರಿಸಿ ಕೋನರೆಡ್ಡಿ ಅವರು ಇನ್ನೆರಡು ದಿನಗಳಲ್ಲಿ ಕುಮಾರಸ್ವಾಮಿ ಹಾಗೂ ದೇವೆಗೌಡರ ಸಮ್ಮುಖದಲ್ಲಿ ಅರ್ಜಿ ಪರಿಶೀಲಿಸಿ ಕ್ಷೇತ್ರದ ಮತದಾರರ ವರದಿ ಸಹಾಯದಿಂದ ಅಭ್ಯರ್ಥಿ ಘೋಷಣೆ ಮಾಡಲಾಗುವುದೆಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ