ಸರ್ಕಾರದ ಅಭಿವೃದ್ಧಿ ಕಾರ್ಯದಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದು – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
*ಶ್ರೀ ಶೀಲಸಂಪಾದನಾ ಮಠದ 100ನೇ ಅನುಭಾವ ಸಂಗಮ ಶತಮಾಸೋತ್ಸವದಲ್ಲಿ ಸಚಿವರು ಭಾಗಿ*
ಪ್ರಗತಿವಾಹಿನಿ ಸುದ್ದಿ, *ಭದ್ರಾವತಿ :*
ನಾಡಿನ ಅನೇಕ ಮಠಮಾನ್ಯಗಳಿಂದ ಸರ್ಕಾರ ಸದಾ ಮಾರ್ಗದರ್ಶನ ಪಡೆಯುತ್ತಿದ್ದು, ಸರ್ಕಾರದ ಜನಾಭಿವೃದ್ದಿ ಕಾರ್ಯದಲ್ಲಿ ಮಠಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಭದ್ರಾವತಿ ತಾಲ್ಲೂಕಿನ ಗೋಣಿಬೀಡಿನ ಇತಿಹಾಸ ಪ್ರಸಿದ್ಧ ಶ್ರೀ ಶೀಲಸಂಪಾದನಾ ಮಠದಲ್ಲಿ ಸ್ಪಿರಿಚ್ಯುಯಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ 100ನೇ ಅನುಭಾವ ಸಂಗಮ
ಶತಮಾಸೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಶಿವಶರಣೆ ಅಕ್ಕ ನಾಗಲಾಂಬಿಕೆ ಮಹಿಳಾ ಮಂಡಳಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದರು.
ಸಮಾಜಕ್ಕೆ ಮಠಮಾನ್ಯಗಳು ನೀಡುತ್ತಿರುವ ಅಕ್ಷರ, ಆಶ್ರಯ, ಅನ್ನದಾಸೋಹ, ಆರೋಗ್ಯ ಸೇವೆ ಸರ್ಕಾರಕ್ಕೆ ಮಾದರಿಯಾಗಿವೆ. ದೇಶಕ್ಕೆ ಮಠಮಾನ್ಯಗಳು ನೀಡುತ್ತಿರುವ ಸೇವೆಗಳಿಂದಲೇ ಸಮಾಜ ಸುಭಿಕ್ಷೆಯಿಂದ ಕೂಡಿರಲು ಸಾಧ್ಯವಾಗಿದೆ. ಸರ್ಕಾರದ ಸತ್ಕಾರ್ಯಗಳಲ್ಲಿ ಮಠಗಳ ಪಾತ್ರವು ಹಿರಿದು ಎಂದರು.
ಭಾರತೀಯ ಸಂಪ್ರದಾಯ ಸಂಸ್ಕೃತಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕೃತಿಯಲ್ಲಿ ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ. ಭಾರತೀಯರ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಶ್ರೀಮಠಗಳು ಕೊಡುಗೆ ಅಪಾರವಾದದ್ದು. ಮಕ್ಕಳು ಸಂಸ್ಕಾರವಂತರಾಗಲು ಮಠಗಳಿಂದ ದೊರೆಯುವ ಶಿಕ್ಷಣ ಪೂರಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ನಾಡು ವಿವಿಧತೆಯಲ್ಲಿ ಏಕತೆ, ಸಮಗ್ರತೆಯನ್ನು ಸಾರುತ್ತಿದೆ. ನಮ್ಮಲ್ಲಿರುವ ಅರಾಜಕತೆ, ಅಸಮಾನತೆಯನ್ನು ನಮ್ಮ ಮಠಗಳು ಹೋಗಲಾಡಿಸುವ ಕಾರ್ಯವನ್ನು ಮಾಡುತ್ತಿವೆ. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮಠಗಳು ಮುನ್ನಡೆಯುತ್ತಿವೆ. ಜಾತಿ, ಧರ್ಮಗಳ ಭಿನ್ನತೆಯನ್ನು ಹೋಗಲಾಡಿಸುವ ಕೆಲಸವನ್ನು ಮಠಗಳು ಮಾಡುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಜಾತಿ, ಧರ್ಮ ಎಣಿಸದೆ, ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೆ ಸರ್ವಜನರ ಹಿತ ಕಾಯುವ ಕೆಲಸವನ್ನು ಮಾಡುತ್ತಿದೆ. ಬಡವರ ಅಭ್ಯುದಯಕ್ಕೆ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದ ಜನರು ನೀಡಿದ ಆಶೀರ್ವಾದಕ್ಕೆ ಸರ್ಕಾರ ಧನ್ಯತಾಭಾವದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆನಂದಪುರ ಶ್ರೀ ಮುರುಘರಾಜೇಂದ್ರ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ವಹಿಸಿದ್ದರು.
ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದ ಡಾ. ಸಿದ್ದಲಿಂಗ ಮಹಾಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಮಹೇಶ್ ಮಾಸಾಳ್ ಸೇರಿದಂತೆ ಶ್ರೀಮಠದ ಎಲ್ಲಾ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ