Belagavi NewsBelgaum NewsEducationKannada NewsPolitics

*ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದಲ್ಲಿ ಶಿಕ್ಷಣದ‌ ಪಾತ್ರ‌ ಮಹತ್ವದ್ದಾಗಿದ್ದು, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು  ಅರಿತು‌ ಕಾರ್ಯ ನಿರ್ವಹಿಸುವುದರ ಮೂಲಕ‌ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ (ಸೆ.06) ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಹಾಗೂ ಬೆಳಗಾವಿ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು  ಒಳ್ಳೆಯ ನಾಗರಿಕರಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ. ವಿದ್ಯಾರ್ಥಿಗಳ ಉತ್ತಮ‌‌ ಭವಿಷ್ಯ  ಶಿಕ್ಷಕರ ಕೈಯಲ್ಲಿದೆ. ವಿದ್ಯಾರ್ಥಿಗಳು   ಉತ್ತಮ ಪ್ರಜೆಗಳಾಗಿ ಬೆಳೆದು  ನಾಡಿನ ಹೆಸರನ್ನು ವಿಶ್ವದಾದ್ಯಂತ ಪಸರಿಸುವದರ ಜೊತೆಗೆ ಅವರ ಜೀವನಕ್ಕೆ ದಾರಿ‌ ತೋರಿಸುವದರಲ್ಲಿ  ಶಿಕ್ಷಕರ‌ ಪಾತ್ರ ಮಹತ್ವದಾಗಿದೆ ಎಂದರು.

ಸರಕಾರಿ‌ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದಂತಹ ಅನೇಕರು ಇಂದು ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದನ್ನು ನಾವು ಕಾಣಬಹುದಾಗಿದೆ.   ಸಾವಿತ್ರಿಬಾಯಿ ಫುಲೆ ಅವರ ದಿಟ್ಟತನದಿಂದ ಇವತ್ತು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಬಸವಣ್ಣ, ಅಂಬೇಡ್ಕರ್ ಹಾಗೂ ಇನ್ನೂ ಮುಂತಾದ ಸಮಾಜ ಸುಧಾರಕರ ಇತಿಹಾಸಗಳನ್ನು  ವಿದ್ಯಾರ್ಥಿಗಳಿಗೆ ತಿಳಿಸುವುದರ‌ ಮೂಲಕ ಉತ್ತಮ‌ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು. 

Home add -Advt

ಶಿಕ್ಷಕರು  ಕೊಟ್ಟಂತಹ ಮಾರ್ಗದರ್ಶನ  ವಿದ್ಯಾರ್ಥಿಗಳು ತಮ್ಮ ಮನದಲ್ಲಿ ಇಟ್ಟುಕೊಳ್ಳುವಂತಹ ಕಾರ್ಯವನ್ನು ಇಂದಿನ‌ ಶಿಕ್ಷಕರು‌ ಮಾಡಬೇಕಾಗಿದೆ. ಶಾಲಾ‌ ತರಗತಿಗಳಲ್ಲಿ ಶಾಲಾ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳು‌ ಹಾಗೂ‌ ಬದುಕಿನ‌ ಪಾಠಗಳ‌ ಕುರಿತು ತಿಳಿಸಿಕೊಡಬೇಕು.

ಸರಕಾರಿ ಶಾಲೆಗಳ‌ ಅಭಿವೃದ್ದಿಗಾಗಿ ಸರಕಾರ‌ದಿಂದ ಸಾಕಷ್ಟು ಅನುದಾನವನ್ನು ಒದಗಿಸಲಾಗುತ್ತಿದೆ. ಈ‌ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಶಾಲೆಯಲ್ಲಿ‌ ಉತ್ತಮ  ವಾತಾವರಣ‌ ನಿರ್ಮಾಣ‌ ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಕಾರ್ಯಕ್ರಮದ‌‌ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಆಸೀಫ್ ಸೇಠ ಅವರು ಮಾತನಾಡಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ವಂದನೆಗಳನ್ನು ತಿಳಿಸಿ, ಶಿಕ್ಷಣದಲ್ಲಿ ಕಲಿಸುವಂತಹ ವಿಷಯಕ್ಕೆ ಮಹತ್ವ ಕೊಡಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಡುವ ದಾರಿ ತೋರಿಸಬೇಕು. ಶಿಕ್ಷಕರೊಂದಿಗೆ ನಾವು ಸದಾಕಾಲ ಇರುತ್ತೇವೆ ನಿಮ್ಮ ಕಾರ್ಯವನ್ನು ನಿರಂತರ ದೇಶದವನ್ನು ಕಟ್ಟುವ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಮೀಸಲಿಡಿ ಎಂದರು.

ಕಾರ್ಯಕ್ರಮದಲ್ಲಿ ಬುಡಾ ಆದ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆ, ಮಹಾನಗರ  ಪಾಲಿಕೆ ಆಯುಕ್ತರಾದ ಶುಭ.ಬಿ,  ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ ಸೇರಿದಂತೆ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉತ್ತಮ‌ ಶಿಕ್ಷಕರನ್ನು‌ ಹಾಗೂ  ನಿವೃತ್ತ ಶಿಕ್ಷಕರನ್ನು ಜಿಲ್ಲಾ‌ ಉಸ್ತುವಾರಿ‌ ಸಚಿವರು, ಶಾಸಕರು ಹಾಗೂ ಗಣ್ಯರುಗಳಿಂದ ಸನ್ಮಾನಿಸಲಾಯಿತು.

Related Articles

Back to top button