ನಮ್ಮ ಮತ್ತು ಗಣೇಶನ ಗೆಳೆತನಕ್ಕೆ ನಮ್ಮಷ್ಟೇ ವಯಸ್ಸು
ನೀತಾ ರಾವ್
ನಾವು ಹುಟ್ಟುವಾಗಲೇ ಈತ ನಮ್ಮ ಮನೆಯಲ್ಲಿ ಇರುತ್ತಾನೆ. ಸ್ವಲ್ಪ ತಿಳಿಯುವ ವಯಸ್ಸಿಗೆ ದೇವರ ಮನೆಯಲ್ಲಿ ಹಕ್ಕಿನಿಂದ ಕುಳಿತ ಉದ್ದ ಸೊಂಡಿಲಿನ, ಮೊರದಗಲ ಕಿವಿಗಳ, ದೊಡ್ಡ ಆನೆಯ ಮುಖದ, ಡುಮ್ಮು ಹೊಟ್ಟೆಯ ಈ ದೇವರು ಮಗುವಿನ ಮುಗ್ಧ ಮನಸ್ಸಿನಲ್ಲೊಂದು ಅಚ್ಚರಿ ಮೂಡಿಸಿ, ಮುಖದಲ್ಲೊಂದು ನಗೆಯ ಚಿಮ್ಮಿಸಿ, ಯಾಕೋ ಏನೋ ಕರೆದರೆ ಜೊತೆಗೆ ಆಡಲಿಕ್ಕೆ ಬಂದೇ ಬಿಡಬಹುದೆನ್ನುವ ಭಾವ ಹುಟ್ಟುಹಾಕಿ ಗೆಳೆಯನಂತಾಗಿಬಿಡುತ್ತಾನೆ.
ಅರೇ ಇದೇನು ಇಷ್ಟು ದೊಡ್ಡ ಹೊಟ್ಟೆ ಇಟ್ಟುಕೊಂಡು ಆ ಪುಟ್ಟ ಇಲಿಯ ಮೇಲೆ ಕುಳಿತಿದ್ದಾನೆ ಪಾಪ! ಎಂದು ಬೈದುಕೊಳ್ಳುವಷ್ಟು ಆಪ್ತನಾಗುತ್ತಾನೆ.
ಮುಂದೆ ಮಾತು ಕಲಿತು ಕತೆ ಹೇಳು ಎಂದು ಅಮ್ಮನಿಗೆ ಗಂಟು ಬೀಳುವ ವಯಸ್ಸು ಬಂದಾಗ ಇವನ ಜನ್ಮ ರಹಸ್ಯವನ್ನು ಪುಟ್ಟ ಕಂದನೆದುರು ಅಮ್ಮ ಬಿಚ್ಚಿಡುತ್ತಾಳೆ. ಮೈ ಮೇಲಿನ ಮಣ್ಣನ್ನೆಲ್ಲಾ ತೆಗೆದು ಸೇರಿಸಿ ಗೊಂಬೆಯೊಂದನ್ನು ಮಾಡಿ ಅದರಲ್ಲಿ ಪ್ರಾಣವನ್ನೂದಿದ ಪಾರ್ವತಿ ಆ ಮಗುವನ್ನು ತನ್ನರಮನೆಯ ದ್ವಾರಕ್ಕೆ ಕಾವಲು ನಿಲ್ಲಿಸಿ ಸ್ನಾನಕ್ಕೆ ಹೋದವಳು ಬೇಗ ಬರಬಾರದಿತ್ತೇ? ತನ್ನ ಗಣದೊಂದಿಗೆ ಎಲ್ಲೋ ಹೊರಗಡೆ ಹೋದ ಪರಶಿವನು ಬಹುಶಃ ಹಸಿದು ಬಳಲಿ ಮನೆಗೆ ಬಂದರೆ ಈ ಪುಟ್ಟ ಪೋರ ಒಳಗೆ ಹೋಗಲಾಗದು ಎಂದು ಮನೆಯ ಯಜಮಾನನನ್ನೇ ತಡೆದರೆ, ತಡೆದಾನೆಯೇ ಪರಮೇಶ್ವರ! ಹಿಂದು ಮುಂದು ಯೋಚನೆ ಮಾಡದೇ ಬಾಲಕನ ರುಂಡ ಚೆಂಡಾಡಿದ.
ಫ್ರೆಂಡ್ ಆಗಲು ಎಲ್ಲಾ ಗುಣಗಳಿವೆ
ಅದೆಲ್ಲೋ ಹೋಗಿ ಬಿದ್ದದ್ದು ಇನ್ನೆಂದೂ ಸಿಗದಂತೆ ಕಳೆದು ಹೋಯ್ತು. ಇಷ್ಟೆಲ್ಲ ಆಗಿ ಹೋದ ನಂತರ ನಿಧಾನವಾಗಿ ಹೊರಬಂದ ಪಾರ್ವತಿ ದೇವಿ ಸತ್ತು ಹೋದ ತನ್ನ ಮಗುವನ್ನು ನೆನೆದು ಅತ್ತೂ ಕರೆದೂ ಮಾಡಿ ಮಗುವನ್ನು ಮತ್ತೆ ಬದುಕಿಸುವಂತೆ ಗಂಡನಿಗೆ ಗಂಟುಬಿದ್ದಳು. ಅವನು ಪರಮೇಶ್ವರ ನಲ್ಲವೇ? ಹಾಗಾಗಿ ಮಗುವನ್ನು ಬದುಕಿಸಿಯೇ ಬಿಟ್ಟ. ಆದರೆ ರುಂಡ ಮಾತ್ರ ಆನೆಯದ್ದು. ದೇಹ ಅವನದೇ. ಎಂಥ ರೋಚಕ ಕಥೆ! ಮಗುವಿಗೆ ಪುಟ್ಟ ಗಣಪನ ಬಗ್ಗೆ ಕರುಣೆ, ಪ್ರೀತಿ, ಸಂತಾಪ ಏನೆಲ್ಲಾ ಉಂಟಾಗುತ್ತದೆ! ಫ್ರೆಂಡ್ ಆಗಲು ಎಲ್ಲಾ ಗುಣಗಳಿವೆ ಅವನಲ್ಲಿ.
ದೊಡ್ಡವನಾದಂತೆ ಹಾಡು ಕಲಿಸು ಎಂದರೆ ಅಮ್ಮ ಮತ್ತೆ ಕೈ ಮುಗಿದು ನಿಲ್ಲಿಸಿ, “ಗಣಪತಿ ರಾಯಾ, ಮುಗದೆವ ಕೈಯಾ, ಸಣ್ಣ ಸಣ್ಣ ಮಕ್ಕಳು ನಿನ್ನ ಸೇವೆ ಮಾಡಲು, ತಪ್ಪಿದರೆ ಒಪ್ಪಿಕೊಳ್ಳಯ್ಯಾ” ಅಂತ ರಾಗವಾಗಿ ಹೇಳಿ ಕೊಡುವಳು. ಶಾಲೆಯಲ್ಲಿ ಮಾಸ್ತರು ಕೂಡ, ” ಗಣಪ್ಪ ಬಂದ, ಹೊಟ್ಟಿ ಮ್ಯಾಲೆ ಗಂಧಾ, ಕಾಯಿ ಕಡಬು ತಿಂದಾ, ಭಾವ್ಯಾಗ ಬಿದ್ದಾ, ಮುಣಗಿ ಮುಣಗಿ ಎದ್ದಾ” ಅಂತ ಬಾಯಿಪಾಠ ಮಾಡಿಸುವರು. ಅಲ್ಲಿಗೆ ಗಣಪ್ಪ ಮಕ್ಕಳ ಮೊದಲ ವರ್ಚ್ಯುವಲ್ ಗೆಳೆಯ.
ಚಂದ್ರನಿಗೆ ಶಾಪ
ಅಂವ ಎಲ್ಲಿದ್ದಾನೆ ಗೊತ್ತಿಲ್ಲ, ಆದರೆ ಇದ್ದಾನೆ ಗೆಳೆಯನಾಗಿ. ಅವನ ಬೇಕು ಬೇಡಗಳನ್ನೆಲ್ಲ ಹೇಳಿಬಿಟ್ಟಿದ್ದಾನೆ. ಗಣಪ್ಪನಿಗೆ ಮೋದಕ ಅಂದ್ರ ಪ್ರೀತಿ ಅಂತ್ಹೇಳಿ ನಾವೂ ಅವನ ಹೆಸರಿನಲ್ಲಿ ಮೋದಕ ಗಿಟ್ಟಿಸುವುದು ಸುಳ್ಳೇ ಮತ್ತೆ? ಅವನಿಗೆ ಕರಿಕೆಯ ಮತ್ತು ಕೆಂಪು ಹೂಗಳ ಮೇಲೆಯೂ ತುಂಬ ಮೋಹ, ಹಾಗಾಗಿ ಅವನಿಗೆ ಇಪ್ಪತ್ತೊಂದು ಕರಿಕೆ ಮತ್ತು ವಿಧವಿಧದ ಕೆಂಪು ಹೂಗಳನ್ನರ್ಪಿಸಿ ಕೈಮುಗಿಯುತ್ತೇವೆ.
ಅದೊಂದು ಚೌತಿಯ ದಿನ ಕೆಂಪು ಪೀತಾಂಬರವನುಟ್ಟು, ಹೆಗಲ ಮೇಲೊಂದು ರೇಷ್ಮೆಯ ಶಲ್ಯ ಹಾಕಿಕೊಂಡು ಭಕ್ತರ್ಯಾರದೋ ಮನೆಯಲ್ಲಿ ಪೊಗದಸ್ತಾಗಿ ಉಂಡು ತನ್ನ ವಾಹನ ಇಲಿರಾಯನ ಮೇಲೆ ಭಾರ ಹಾಕಿಕೊಂಡು ಬರುವಾಗ ಆ್ಯಕ್ಸಿಡೆಂಟಾಗಿ ಬಿದ್ದು ಹೊಟ್ಟೆ ಒಡೆದುಹೋಯ್ತಂತೆ. ಯಾವಾಗಲೂ ಎಲ್ಲರನ್ನೂ ಕದ್ದು ನೋಡುವ ಚಟವನ್ನೇ ಉದ್ಯೋಗ ಮಾಡಿಕೊಂಡಿರುವ ಈ ನಮ್ಮ ಚಂದ್ರಾಮ ಸುಮ್ಮನಿರಬೇಡವೇ! ನೋಡಿ ಕಿಸಿಕಿಸಿ ನಕ್ಕೇಬಿಟ್ಟ. ನಾವು ಬಿದ್ದ ಅಪಮಾನಕ್ಕಿಂತ ಯಾರಾದರೂ ಅದನ್ನು ನೋಡಿದ ಅಪಮಾನವೇ ಜಾಸ್ತಿಯಾಗೋದು ನಮಗೆಲ್ಲ ಗೊತ್ತೇ ಇದೆಯಲ್ಲ. ಗಣಪ್ಪನಿಗೂ ಹಾಗೇ ಆಯ್ತು.
ಅಪಮಾನದಿಂದ ಕುದ್ದು ಹೋದ. ಚಂದ್ರನಿಗೆ ಶಾಪ ಕೊಟ್ಟ, “ಚೌತಿಯ ದಿನ ನಿನ್ನನ್ನು ಯಾರೂ ನೋಡದಿರಲಿ, ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಅಂತ. ಮತ್ತು ಅಲ್ಲಿಯೇ ಸರಸರನೇ ಎಲ್ಲಿಗೋ ಗಡಿಬಿಡಿಯಿಂದ ಹೊರಟಿದ್ದ ನಾಗಪ್ಪನನ್ನೇ ಹಿಡಿದೆತ್ತಿಕೊಂಡು ಶಿಸ್ತಾಗಿ ಬೆಲ್ಟಿನಂತೆ ಕಟ್ಟಿಕೊಂಡು ಮುಂದಿನ ಪ್ರಯಾಣ ಮಾಡಿ ಮನೆಗೆ ಬಂದು ಹಾಯಾಗಿ ಮಲಗಿಕೊಂಡ. ಪಾಪ ಇವನು ಶಪಿಸಿದ ಚಂದ್ರನನ್ನು ನೋಡಿ ಕೃಷ್ಣ ಪರಮಾತ್ಮನೇ ಅಪವಾದಕ್ಕೊಳಗಾಗಬೇಕಾಯ್ತಲ್ಲ!
ಗಣಪ್ಪನ ರೂಪಗಳೆಷ್ಟು
ಅಂದರೆ ನಮ್ಮ ಗಣಪ್ಪನ ಮಹಿಮೆ ಎಷ್ಟು ದೊಡ್ಡದು! ಸ್ಕೂಲಿಗೆ ಹೋಗುವಾಗಲೇ ಇವೆಲ್ಲ ಪರಾಕ್ರಮದ ಕಥೆಗಳು ಕಿವಿಯ ಮೇಲೆ ಬಿದ್ದು ಬಿದ್ದು ಗಣಪ್ಪನೇ ಮಗುವಿನ ಮೊದಲ ಹೀರೋನೂ ಆಗಿಬಿಟ್ಟ. ನಮ್ಮ ಗೆಳೆಯ ಹೀರೋ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಯಾರಾದ್ರೂ ರೋಪು ಹಾಕಿದರೆ ಇವ ಇದ್ದಾನಲ್ಲ, ಬಂದೇ ಬರ್ತಾನೆ ಸಹಾಯಕ್ಕೆ ಅಂತೊಂದು ಧೈರ್ಯವೂ ಬಂತು.
ಸ್ವಲ್ಪ ದೊಡ್ಡವರಾದಂತೆ ಗಣೇಶ ಚತುರ್ಥಿ ಗೆ ಇವನು ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಆಗಿ ಬೆಳಿಗ್ಗೆ, ಸಂಜೆ ಎರಡೂ ವೇಳೆ ಭಕ್ತರಿಂದ “ಸುಖಕರ್ತಾ ದುಃಖಹರ್ತಾ” ಆಗಿ ಪೂಜೆಗೊಳ್ಳತೊಡಗಿದ ನಂತರ “ಓ ಇವನು ಬರಿ ಗೆಳೆಯನಲ್ಲ, ದೇವರು” ಅಂತ ಗೊತ್ತಾಗುತ್ತದೆ. ಹತ್ತು ದಿನಗಳ ಕಾಲ ನಮ್ಮ ಗಲ್ಲಿಗಳನ್ನು ಗಲಗಲ ಗದ್ದಲದಿಂದ ತುಂಬಿ, ಇಡೀ ವಾತಾವರಣ ಭಕ್ತಿಯಿಂದ ತುಂಬಿ ತುಳುಕುವಂತೆ ಮಾಡುವ ಈ ಗಣಪ್ಪನ ರೂಪಗಳೆಷ್ಟು ಗಣಪ್ಪನ ರೂಪಗಳೆಷ್ಟು ಅಂತ ಅಚ್ಚರಿ ಪಟ್ಟದ್ದಿದೆ.
ಅಳು ಬಂದುಬಿಡುತ್ತದೆ
ಹಿಂದಿನ ಓಣಿಯಲ್ಲಿ ಸಂತ ತುಕಾರಾಮನಾದರೆ ನಮ್ಮ ಓಣಿಯಲ್ಲಿ ರಕುಮಾಯಿಯ ಜೊತೆ ನಿಂತ ವಿಠ್ಠಲ ನಾಗಿದ್ದಾನೆ. ಅಲ್ಲೊಂದು ಕಡೆ ರಾಮನಾಗಿ ಬಾಣ ಬಿಡುತ್ತಿದ್ದರೆ, ಇಲ್ಲೊಂದು ಕಡೆ ಕೃಷ್ಣನಾಗಿ ಕೊಳಲನೂದುತ್ತಿದ್ದಾನೆ. ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಮುದ್ದಾಗಿದ್ದಾನೆ. ಪಿಟಿಪಿಟಿ, ಫಳಫಳಗುಟ್ಟುತ್ತ ತಿರುಗುವ ಬಣ್ಣಬಣ್ಣದ ಲೈಟಿನ ಮಾಲೆಯ ಪೆಂಡಾಲುಗಳ ಒಳಗೆ, ಭಕ್ತಿಗೀತೆಗಳ ಗುಂಜನದ ಮಧ್ಯೆ ಅಖಂಡ ಹತ್ತೂ ದಿನಗಳು ನಮ್ಮ ಮನಸ್ಸನ್ನೆಲ್ಲ ಸಂಪೂರ್ಣವಾಗಿ ಆವರಿಸಿಕೊಂಡು ಸೆಳೆಯುತ್ತ ಠೀವಿಯಿಂದ ಕುಳಿತಿರುವ ಅವನಿಗೆ ಸಾಟಿ ಯಾರು? ಊಹೂಂ, ಇಲ್ಲವೇ ಇಲ್ಲ ಎಂಬಷ್ಟು ಭಕ್ತಿಯ ಮೊನೊಪಾಲಿ ಮಾಡಿಕೊಂಡುಬಿಟ್ಟಿದ್ದಾನೆ.
ಅನಂತ ಚತುರ್ದಶಿಯಂದು ಇವನನ್ನು ಪೆಂಡಾಲಿನಿಂದ ಹೊರ ತೆಗೆದು ಕಳಿಸುವಾಗ ಎಷ್ಟು ಬೇಜಾರಾಗುತ್ತದೆ! ಅಳು ಬಂದುಬಿಡುತ್ತದೆ. “ಮುಂದಿನ ವರ್ಷ ಬೇಗನೇ ಬಾ” ಅಂತ ಹೇಳಿ ಕಳಿಸಿ ಬಿಕೋ ಎನ್ನುವ ಮಂಟಪವನ್ನು ನೋಡಿ ಬಿಕ್ಕಿಲ್ಲವೇ ನಾವು?
ನಮ್ಮ ರಾಮ, ಕೃಷ್ಣ ರಂತೆ ಈತ ವಿವಾದವನ್ನೆಂದೂ ಮೈ ಮೇಲೆ ಎಳೆದುಕೊಂಡವನಲ್ಲ. ಎಷ್ಟು ವರ್ಷಗಳ ಹಿಂದೆ ಹುಟ್ಟಿದ, ಎಲ್ಲಿ ಹುಟ್ಟಿದ ಎನ್ನುವುದೆಲ್ಲ ನಮಗೆ ಗೊತ್ತಿಲ್ಲ. ಹಾಗಾಗಿ ಇವನಿಗೆಂದೇ ಮೀಸಲಾದ ಜನ್ಮಸ್ಥಳ ಎಂಬುದಿಲ್ಲ. ಅದರ ಮೇಲೆ ಇನ್ನಾರೋ ಇನ್ನೇನೋ ಕಟ್ಟಿ ಕಾಲು ಕೆರೆದು ಜಗಳ ತೆಗೆಯುವ ಪ್ರಶ್ನೆ ಇಲ್ಲ. ಅಷ್ಟರ ಮಟ್ಟಿಗೆ ಇವನೂ ಸೇಫ್, ನಾವೂ ಸೇಫ್.
ಮುದ್ದು ಗಣಪ್ಪ!
ಇನ್ನು ಪ್ರೀತಿ, ಪ್ರೇಮ, ಲಗ್ನ ಎಂದೆಲ್ಲ ಹಚ್ಚಿಕೊಂಡಿಲ್ಲವಾದ್ದರಿಂದ, ದೇವರ ಬಗ್ಗೆ ಏನೆಲ್ಲಾ ಹುಳುಕು ತೆಗೆಯುವ ಉದ್ಯೋಗದವರಿಗೆ ಇವನು ಯಾವ ಲಾಭದಾಯಕ ಉದ್ಯೋಗವನ್ನೂ ಕರುಣಿಸಿಲ್ಲ.
ಆದರೆ ಮನೆಯ ಯಾವುದೇ ಶುಭ ಕಾರ್ಯವಿರಲಿ ಈತನ ಉಪಸ್ಥಿತಿ ಇರಲೇ ಬೇಕು. ಏಕೆಂದರೆ ವಿಘ್ನ ವಿನಾಶಕನಿಗೆ ಮೊದಲ ಪೂಜೆಯನ್ನು ಸಲ್ಲಿಸಿ ನಂತರ ಉಳಿದೆಲ್ಲ ಕಾರ್ಯಕ್ರಮ. ಉಳಿದೆಲ್ಲ ದೇವತೆಗಳಿಗಿಂತ ಮಂಗಲ ಕಾರ್ಯಗಳಲ್ಲಿ ಇವನದೇ ಜೋರು ಕಾರುಬಾರು.
ಹಾಗಾಗಿ ದೊಡ್ಡವರೂ ಇವನನ್ನು ಕಡೆಗಣಿಸುವಂತೆಯೇ ಇಲ್ಲ. ಚಿಕ್ಕವರಿಗಂತೂ ಇವನ ಮೇಲೆ ಪ್ರೀತಿ ಅಂದರೆ ಅಷ್ಟಿಷ್ಟಲ್ಲ. ಹಾಗಾಗಿ ಇವನು ಎಲ್ಲರಿಗೂ ಬೇಕಾದವ. ಲಂಬೋದರ, ವಿನಾಯಕ, ಪಾರ್ವತಿಸುತ, ಗಜವದನ, ಗೌರಿತನಯ, ಹೀಗೆ ಇವನಿಗೆ ಅನೇಕಾನೇಕ ಹೆಸರುಗಳನ್ನಿಟ್ಟು ಕರೆದು ಪ್ರೀತಿಸಿ ಒಲಿಸಿಕೊಳ್ಳುವ ಜನರು ಇವತ್ತೂ ಮತ್ತು ಯಾವತ್ತೂ ಇರುವವರೇ. ಹಾಗಾಗಿ ಇವನು ಸೂರ್ಯ ಚಂದ್ರರಿರುವವರೆಗೂ, ಈ ಭೂಮಿಯು ತಿರುಗುವವರೆಗೂ ಇದ್ದು ನಮ್ಮ ನಿಮ್ಮೆಲ್ಲರ ಗೆಳೆತನಕ್ಕೆ ಹೊಸ ಹೊಸ ಭಾಷ್ಯಗಳನ್ನು ಬರೆಯುತ್ತಲೇ ಇರುವವ. ಮುದ್ದು ಗಣಪ್ಪ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ