ಎಂ.ಕೆ.ಹೆಗಡೆ, ಬೆಳಗಾವಿ – ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ನ 17 ಶಾಸಕರು ರಾಜಿನಾಮೆ ನೀಡಿದ್ದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಉರುಳಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಜೊತೆಗೆ ಅವುಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಬಂದಿದೆ.
15 ಕ್ಷೇತ್ರಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದಾರೆ. ಜೊತೆಗೆ ಬಿಜೆಪಿ ಮತಗಳು ಅದಕ್ಕೆ ಪ್ಲಸ್ ಆಗಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪರ್ಯಾಯ ಅಭ್ಯರ್ಥಿಗಳು ಸಿಗುವುದೂ ಕಷ್ಟ. ಹಾಗಾಗಿ ಎಲ್ಲ 15 ಕ್ಷೇತ್ರಗಳಲ್ಲಿ ಅರ್ಹರಾಗಿರುವ ಶಾಸಕರು ಸೇರಿ, ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎನ್ನುವ ಲೆಕ್ಕಾಚಾರ ಇತ್ತು.
ಉಪಚುನಾವಣೆ ಪ್ರಚಾರಕ್ಕೆ ಬಿಜೆಪಿ 40 ಸ್ಟಾರ್ ಪ್ರಚಾರಕರನ್ನು ನೇಮಿಸಿದರೂಅಷ್ಟೊಂದು ಗಂಭೀರವಾಗಿ ತೆಗೆದುಕೊಡಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಒಂದು ಸುತ್ತು ಎಲ್ಲ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವ ಯೋಜನೆ ಹಾಕಿಕೊಂಡಿದ್ದರು.
ಆದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಲೆಕ್ಕಾಚಾರ ತಲೆಕೆಳಗಾಗುವ ಲಕ್ಷಣ ಘೋಚರಿಸಲಾರಂಭಿಸಿತು. ಅನೇಕ ಕಡೆ ಬಂಡಾಯ ಎದುರಿಸಬೇಕಾಯಿತು. ಕೆಲವೆಡೆ ಪ್ರತಿಪಕ್ಷಗಳಿಗೆ ಪ್ರಬಲ ಅಭ್ಯರ್ಥಿ ಸಿಕ್ಕಿಬಿಟ್ಟರು. ಹಾಗಾಗಿ ಬಿಜೆಪಿ ಉಪಚುನಾವಣೆಯನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿತು.
ಬೆಚ್ಚಿ ಬೀಳಿಸಿದ ಆಂತರಿಕ ಸಮೀಕ್ಷೆ
ಆದರೆ, 3-4 ದಿನದ ಹಿಂದೆ ಹಠಾತ್ ಆಗಿ ಬಿಜೆಪಿ ಗೇಮ್ ಪ್ಲ್ಯಾನ್ ಬದಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಸುತ್ತಿನ ಪ್ರಚಾರದ ಯೋಚನೆಯಲ್ಲಿದ್ದವರು ದಿಢೀರ್ ಆಗಿ ಚುನಾವಣೆಯವರೆಗೂ ಕ್ಷೇತ್ರದಲ್ಲೇ ಇರಲು ತೀರ್ಮಾನಿಸಿದರು. ಪ್ರತಿ ಕ್ಷೇತ್ರದಲ್ಲಿ 2 ರಿಂದ 3 ಬಾರಿ ಪ್ರಚಾರ ಭಾಷಣ ಮಾಡಲು ನಿರ್ಧರಿಸಿದರು.
ಈ ದಿಢೀರ್ ಬದಲಾವಣೆಗೆ ಕಾರಣವಾಗಿದ್ದು ಬಿಜೆಪಿಯ ಆಂತರಿಕ ಸಮೀಕ್ಷೆ.
ಬಿಜೆಪಿ ನಡಸಿದ ಚುನಾವಣೆ ಪೂರ್ವ ಆಂತರಿಕ ಸಮೀಕ್ಷೆ ಪಕ್ಷದ ನಾಯಕರನ್ನು, ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಚ್ಚಿ ಬೀಳಿಸಿದೆ. 15ರಲ್ಲಿ ಶೇ.50 ಸ್ಥಾನವನ್ನೂ ಗೆಲ್ಲುವುದು ಸುಲಭವಿಲ್ಲ ಎನ್ನುತ್ತಿದೆ ಬಿಜೆಪಿಯ ಆಂತರಿಕ ಸಮೀಕ್ಷೆ.
ಪ್ರಸ್ತುತ ಬಿಜೆಪಿ ಸರಕಾರ ಉಳಿಯಬೇಕೆಂದರೆ ಕನಿಷ್ಟ 8 ಸ್ಥಾನಗಳನ್ನಾದರೂ ಗೆಲ್ಲಲೇ ಬೇಕು. ಆದರೆ ಈಗಿನ ಸಮೀಕ್ಷೆಯ ಪ್ರಕಾರ 8 ಸ್ಥಾನ ಗೆಲ್ಲುವುದೂ ಕಷ್ಟ. ಹಾಗಾಗಿಯೇ ಯಡಿಯೂರಪ್ಪ ಬಿಜೆಪಿಯ ಹಿರಿಯ ನಾಯಕರ ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.
ಎಲ್ಲ ನಾಯಕರೂ ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಬೀಡುಬಿಡುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಒಬ್ಬೊಬ್ಬ ನಾಯಕರಿಗೆ ಒಂದೊಂದು ಕ್ಷೇತ್ರ ವಹಿಸಿದ್ದಾರೆ. ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಅವರಿಗೂ ವಹಿಸಿದ್ದಾರೆ.
ಜಾತಿ ಕಾರ್ಡ್
ಅಲ್ಲದೆ ದಿಢೀರ್ ಆಗಿ ಮತ್ತು ನೇರವಾಗಿ ಜಾತಿ ಕಾರ್ಡ್ ಹರಿಬಿಟ್ಟಿದ್ದಾರೆ. ಹೋದಲ್ಲೆಲ್ಲ ವೀರಶೈವ ಸಮಾಜದವರು ನಾನು ಮುಖ್ಯಮಂತ್ರಿಯಾಗಿ ಉಳಿಯುವುದಕ್ಕಾಗಿ ಬಿಜೆಪಿ ಅಭ್ಯರ್ಥಿಗಳಿಗೇ ಮತ ಚಲಾಯಿಸಬೇಕಂದು ವಿನಂತಿಸುತ್ತಿದ್ದಾರೆ. ಕನಿಷ್ಟ 12 ಸ್ಥಾನದ ಗುರಿ ಇಟ್ಟುಕೊಂಡು ಕಾರ್ಯಯೋಜನೆ ರೂಪಿಸಿದ್ದಾರೆ.
ಬಿಜೆಪಿಯ ಆಂತರಿಕ ಸಮೀಕ್ಷೆ ಪ್ರಕಾರ ಗೋಕಾಕ, ಹೊಸಕೋಟೆ, ಹುಣಸೂರು, ಕೆ.ಆರ್.ಪೇಟೆ, ರಾಣೆಬೆನ್ನೂರು, ಚಿಕ್ಕಬಳ್ಳಾಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಬಹಳ ಕಷ್ಟವಿದೆ. ಗೋಕಾಕ, ಹೊಸಕೋಟೆ, ವಿಜಯನಗರಗಳಲ್ಲಿ ಬಂಡಾಯ ಅಭ್ಯರ್ಥಿಗಳಿಂದಾಗಿ ಸಮಸ್ಯೆಯಾಗಲಿದೆ ಸಮಸ್ಯೆಯಾಗಲಿದೆ.
ಆಂತರಿಕ ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಭಯಗೊಂಡಿರುವ ಬಿಜೆಪಿ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹಾಗಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಕೂಡ ನೇರವಾಗಿ ಆಖಾಡಕ್ಕಿಳಿದಿದ್ದಾರೆ. ಮಂತ್ರಿಗಳಿಗೆಲ್ಲ ಒಂದೊಂದು ಕ್ಷೇತ್ರದ ಜವಾಬ್ದಾರಿ ಹೊರಿಸಲಾಗಿದೆ.
ಇನ್ನುಳಿದಿರುವ ದಿನಗಳಲ್ಲಿ ಇನ್ನಷ್ಟು ಗಂಭೀರವಾದ ಪ್ಲ್ಯಾನ್ ಗಳು ಜಾರಿಯಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ