
ಲೇಖನ : ರವಿ ಕರಣಂ.
ನಾವೆಲ್ಲ ಸಾಧನೆಯ ಕಡೆ ವಿಚಾರ ಮಾಡುವುದು ಕಡಿಮೆ. ಕಾರಣ ದೈನಂದಿನ ಜೀವನದಲ್ಲಿ ಅವಶ್ಯಕತೆಗಳನ್ನು ಈಡೇರಿಸಿಕೊಂಡರೆ ಸಾಕೆಂಬ ಭಾವ. ನೆಮ್ಮದಿಯಿಂದ ದಿನದೂಡಿ, ಹೊರಟು ಹೋದರಾಯಿತು. ನಮ್ಮ ನೆನಪು ಯಾರಿಗಿದ್ದು, ಉಪಯೋಗವೇನು? ಎಂಬ ಭಾವವೂ ಹಲವರಲ್ಲಿದ್ದಿರಬಹುದು. ಅದು ಹಾಗಲ್ಲ. ಇದು ಲಾಭ- ನಷ್ಟಗಳ ಲೆಕ್ಕಾಚಾರವಲ್ಲ. ಒಂದಲ್ಲಾ ಒಂದು ರಂಗದಲ್ಲಿ ಸಾಧನೆಗಳು, ನಮ್ಮ ಜೀವನದ ಮೈಲುಗಲ್ಲುಗಳಾಗಿ, ಮುಂದಿನವರಿಗೆ ಸರಿ ತಪ್ಪುಗಳ ಬಗ್ಗೆ ತಿಳಿಯಬೇಕಲ್ಲ ! ಸಂಸ್ಕೃತಿಯೆಂಬುದು ಸದಾ ಚಲನೆಯಲ್ಲಿರುವಂಥದ್ದು. ಅಲ್ಲಿ ಒಳ್ಳೆಯದೂ ಕೆಟ್ಟದ್ದು ಜೊತೆಯಾಗಿದ್ದು, ಪರಿಣಾಮಗಳ ಆಯ್ಕೆಗೆ ಸುಲಭವಾಗುತ್ತದೆ. ಅದಕ್ಕೆ ಬೇಕಾದುದನ್ನು ಕಥೆಯ ಮೂಲಕ ಹೇಳಲಿಚ್ಛಿಸುತ್ತೇನೆ.
ಅವನು ಚಿಂತಾಕ್ರಾಂತನಾಗಿ ಕುಳಿತಿದ್ದನು. ಅವನ ಮನಸ್ಸಿನಲ್ಲಿ ದುಃಖದ ಕಾರಂಜಿ ಚಿಮ್ಮುತ್ತಿತ್ತು. ಅತ್ಯಂತ ಬಲಿಷ್ಠವಾದ ಸೈನ್ಯವನ್ನು ಹೊಂದಿದ್ದರೂ ಕೂಡ, ಸಣ್ಣ ಸಣ್ಣ ರಾಜರುಗಳ ಜೊತೆಗೆ ಹೋರಾಡಿ, ಸೋತು ಸುಣ್ಣವಾಗಿ ಅರಮನೆಗೆ ಹಿಂತಿರುಗುತ್ತಿದ್ದನು. ತನ್ನಲ್ಲಿ ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯಗಳು ಇದ್ದಾಗಲೂ ಕೂಡ, ಜಯ ನನ್ನಿಂದ ಏಕೆ ದೂರವಾಗಿದೆ ? ಎಂಬುದನ್ನೇ ವಿಚಾರ ಮಾಡುತ್ತಾ ಕುಳಿತಿದ್ದನು.
ಒಮ್ಮೆ ಅವನ ಕಣ್ಣು ಅರಮನೆಯ ಮೂಲೆಯ ಕಡೆಗೆ ಹೋಯಿತು. ಒಂದು ಜೇಡರ ಹುಳು ತಾನು ಕಟ್ಟಿದ ಬಲೆಯಲ್ಲಿ ಸಿಕ್ಕು ಬಿದ್ದು ಒದ್ದಾಡುತ್ತಿತ್ತು. ತಾನು ಕಟ್ಟಿದ ಬಲೆಯ ಎಳೆಗಳು, ತನ್ನ ಭಾರವನ್ನು ತಾಳಿಕೊಳ್ಳದೇ ಕಳಚಿ ಕೆಳಗೆ ಬೀಳುತ್ತಿತ್ತು. ಮತ್ತೆ ಮತ್ತೆ ಎಳೆಗಳನ್ನು ಹಿಡಿದು ಮೇಲೆ ಹತ್ತುತ್ತಿತ್ತು.ಇದೇ ರೀತಿಯ ಆಟ ನಡೆದೇ ಇತ್ತು. ಕಡೆಗೆ ಹಲವಾರು ಬಾರಿ ಪ್ರಯತ್ನಗಳನ್ನು ಮಾಡಿ, ತಾನು ತಲುಪಬೇಕಾದ ಜಾಗವನ್ನು ತಲುಪಿತು. ಇದನ್ನು ನೋಡಿದ ರಾಜನಿಗೆ ಒಂದು ವಿಚಾರ ಸ್ಪಷ್ಟವಾಗಿ ಹೊಳೆಯಿತು. ಯಾವುದೇ ಒಂದು ಕೆಲಸದಲ್ಲಿ ಸೋತರೂ ಕೂಡ, ನಿರಾಶರಾಗದೆ, ಅಂಜದೆ ಮುಂದುವರಿಯಬೇಕು ಸತತ ಪ್ರಯತ್ನ, ದೃಢ ವಿಶ್ವಾಸ, ನಂಬಿಕೆಯಿಂದ ಮುಂದುವರೆಯ ಬೇಕು. ಸೋಲುಗಳಿಗೆ ತಲೆ ಬಾಗಬಾರದು. ನಾವು ಹುಟ್ಟಿದ್ದೆ ಗೆಲ್ಲುವುದಕ್ಕಾಗಿ ಎಂಬ ವಿಚಾರ ಮನದಲ್ಲಿ ಮೂಡಿತು.
ತಕ್ಷಣವೇ ತನ್ನ ಸೈನ್ಯದ ಮುಖ್ಯಸ್ಥನನ್ನು ಕರೆಸಿದನು. ಸೇನಾಧಿಪತಿಗೆ ರಾಜನು ಆಜ್ಞೆ ಮಾಡಿದನು. “ನಾವು ನಾಳೆಯೇ ಯುದ್ದಕ್ಕೆ ಹೊರಡುತ್ತಿದ್ದೇವೆ. ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಿ. ಹಾಗೆಯೇ ನಮ್ಮ ಸೈನಿಕರಿಗೆ ತಿಳಿಸಿ ಬಿಡಿ. ನಾಳೆಯ ಯುದ್ಧದಲ್ಲಿ ಜಯ ನಮ್ಮದೇ ಆಗಿರುತ್ತದೆ. ಅದರಲ್ಲಿ ಅನುಮಾನವೇ ಇಲ್ಲ” ಈ ಮಾತುಗಳು ಸೇನಾಪತಿಗೆ ರೋಮಾಂಚನ ಮಾಡಿದವು. ರಾಜನಲ್ಲಿಯ ಈ ಆತ್ಮವಿಶ್ವಾಸ, ಬಲವಾದ ನಂಬಿಕೆಯನ್ನು ಕಂಡು, ಅತಿಯಾಗಿ ಸಂತೋಷಗೊಂಡನು. ಅವನು ಒಂದೇ ಉಸಿರಿನಲ್ಲಿ ಹೆಜ್ಜೆ ಹಾಕಿ, ತಾಲೀಮು ನಡೆಸುತಿದ್ದ ಸೈನಿಕರ ಬಳಿ ಬಂದನು.
ಸೈನಿಕರು ಒಂದು ಕ್ಷಣ ಸೇನಾಪತಿಯ ಮುಖವನ್ನು ನೋಡಿ, ಕುತೂಹಲದಿಂದ ಸಮೀಪಿಸಿದರು. ಆಗವನು ರಾಜನು ಹೇಳಿದ ಮಾತುಗಳನ್ನು ಯಥಾವತ್ತಾಗಿ, ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದನು. ಇದನ್ನು ಕೇಳಿದ ಸೈನಿಕರಿಗೆ ರೋಮಾಂಚನವಾಯಿತು. ಅತ್ಯುತ್ಸಾಹದಿಂದಲೇ ತಮ್ಮ ಆಯುಧಗಳನ್ನೆಲ್ಲ ಸಿದ್ದ ಮಾಡಿಕೊಂಡರು. ಬೆಳಗಾಗುವುದನ್ನೇ ಕಾಯತೊಡಗಿದರು. ಹಲವು ಬಾರಿ ಸೋತು ಸುತ್ತಮುತ್ತಲಿನ ರಾಜ್ಯಗಳವರ ಮುಂದೆ ನಗೆ ಪಾಟಲಿಗೀಡಾಗಿದ್ದ ಸೈನ್ಯಕ್ಕೆ ತನ್ನ ಶಕ್ತಿ ಪ್ರದರ್ಶನ ಮಾಡಿ ತೋರಬೇಕೆಂಬ ಉತ್ಕಟ ಇಚ್ಛೆ ಒಳಗೊಳಗೆ ಕುದಿಯತೊಡಗಿತ್ತು.
ಬೆಳಗಾಯಿತು. ರಾಜನು ಹುಮ್ಮಸ್ಸಿನಿಂದಲೇ ಕೋಣೆಯಿಂದ ಕೆಳಗಿಳಿದು ಬಂದನು. ಅವನಲ್ಲಿದ್ದ ಉತ್ಸಾಹ ಮುಗಿಲು ಮುಟ್ಟಿತ್ತು. ಅದನ್ನು ಕಂಡು ಸೇನಾಪತಿಗೂ, ಸೈನಿಕರಿಗೂ ಅದೇ ಉತ್ಸಾಹ ಪ್ರತಿ ಬಿಂಬಿಸಿತು.
ಶತೃ ಪಡೆಯು ಈ ರಾಜ ಅಸಮರ್ಥ. ಬರೀ ಸೋಲುಗಳಲ್ಲಿಯೇ ಜೀವನ ಕಳೆದಿದ್ದಾನೆ. ಇನ್ನು ನಮ್ಮ ಮುಂದೆಯೂ ಪರಾಭವಗೊಳ್ಳುವುದು ಖಚಿತವೆಂದು ಉದಾಸೀನ ಭಾವದಿಂದಿದ್ದರು. ಆದರೆ ಅಂದಿನ ಯುದ್ದದ ತಂತ್ರಗಳು ವಿಭಿನ್ನವಾಗಿದ್ದವು. ರಾಜನ ಸೈನ್ಯ ಸಾಗರದಲೆಗಳಂತೆ ಎದುರಿಗೆ, ಅಕ್ಕ ಪಕ್ಕ, ಎಲ್ಲೆಡೆಯಿಂದಲೂ ಸುತ್ತುವರೆಯಿತು. ಶತೃಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕಟ್ಟಿ ಹಾಕಿತು. ಶತೃಗಳು ಶರಣಾದರು. ಕಪ್ಪ ಕಾಣಿಕೆಗಳನ್ನು ಸಲ್ಲಿಸಿ, ಅಧೀನದಲ್ಲಿರುತ್ತೇವೆ ಎಂದು ಪ್ರಾಣ ಭಿಕ್ಷೆ ಬೇಡಿದರು.
ಈ ವಿಷಯ ದಶ ದಿಕ್ಕಿಗೂ ಹರಡಿತು. ಎಲ್ಲ ರಾಜರುಗಳು ನಡುಗಿ ಹೋದರು. ಇನ್ನು ತಮಗೂ ಇದೇ ಗತಿಯೆಂದು ಉಡುಗಿ ಹೋದರು. ಯುದ್ಧವನ್ನು ಜಯಿಸಿದ ರಾಜನು ತನ್ನ ರಾಜ್ಯಕ್ಕೆ ಹಿಂದಿರುಗಿದ. ಇಡೀ ರಾಜ್ಯ ಈ ಜಯದ ವಾರ್ತೆಯನ್ನು ಕೇಳಿ, ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದರು. ಇದುವರೆಗೂ ತಮಗಾದ ಅಪಮಾನ,ನೋವು, ಸಂಕಟಗಳನ್ನೆಲ್ಲ ಗಾಳಿಗೆ ತೂರಿದರು.
ಗಮನಿಸಿ. ಅದೇ ರಾಜ, ಅದೇ ಸೈನ್ಯ ಪ್ರತಿ ಸಾರಿ ಸೋತು ಬರುತಿದ್ದುದು, ಆತ್ಮವಿಶ್ವಾಸದ ಕೊರತೆಯಿಂದ. ತಮ್ಮ ಸಾಮರ್ಥ್ಯದ ಬಗ್ಗೆ ಇದ್ದ ಅಪ ನಂಬಿಕೆಯಿಂದ. ಪ್ರಯತ್ನಗಳು ಪೂರ್ವ ಯೋಜಿತವಿಲ್ಲದ ಕಾರಣದಿಂದ. ಅಷ್ಟೇ. ಅದೇ ರಾಜ ಯಾವಾಗ ಆತ್ಮವಿಶ್ವಾಸ, ನಂಬಿಕೆ, ಉತ್ಸಾಹ ತೋರಿದನೋ ಅದು ಇಡೀ ವಾತಾವರಣ ಗೆಲುವಿನ ಛಾಯೆಯಲ್ಲಿ ತುಂಬಿ ಹೋಯಿತು. ಪೋರ್ಚುಗೀಸ್ ಆ ರಾಜನೇ ಅ್ಯಂಡಿ ಬ್ರೂಸ್. ಕೇವಲ ಒಂದು ಚಿಕ್ಕ ಕೀಟದಿಂದ ಸ್ಫೂರ್ತಿಗೊಂಡು ಗೆಲುವಿನ ದಾರಿಯನ್ನು ಕಂಡುಕೊಂಡನು.
ನಾವು ಯಾವತ್ತೂ ಸೋಲುಗಳಿಗೆ ಬಲಿಯಾಗುವುದು, ಸರಿಯಾದ ಪ್ರಯತ್ನ, ಸ್ವನಂಬಿಕೆ, ಆತ್ಮವಿಶ್ವಾಸ ಮತ್ತು ಉತ್ಸಾಹದ ಕೊರತೆಗಳಿಂದ. ನಾವು ಗೆಲ್ಲಲು ಬಂದಿದ್ದೇವೆಯೇ ಹೊರತು ಸೋತು ಹೋಗಲು ಅಲ್ಲ. ನಮ್ಮ ಬುದ್ದಿಶಕ್ತಿಯೇ ಆಯುಧ. ಅದರ ಸದ್ಬಳಕೆ ಜೀವನದಲ್ಲಿ ಅನ್ಯರನ್ನು ಮೀರಿಸುತ್ತದೆ. ಇಲ್ಲವಾದಲ್ಲಿ ಕಳೆರಹಿತವಾಗಿರುತ್ತದೆ.
20 ವರ್ಷಗಳಲ್ಲಿ ವಿಶ್ವದ ಬಹಳಷ್ಟು ಜನರನ್ನು ಕಾಡಲಿದೆ ಈ ಕಾಯಿಲೆ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ