Belagavi NewsBelgaum NewsKannada NewsKarnataka NewsNationalPolitics

*ಶುಶ್ರೂಷಕಿಯರ ಸೇವೆಯೂ ವೈದ್ಯರಷ್ಟೇ ಶ್ರೇಷ್ಠ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಮೂಲಕ ಅವರನ್ನು ಸ್ವಸ್ಥಗೊಳಿಸುವಲ್ಲಿ ವೈದ್ಯರಷ್ಟೇ ಶುಶ್ರೂಷಕಿಯರೂ ಶ್ರೇಷ್ಠ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಶುಶ್ರೂಷಕಿಯರ ಸೇವೆಯನ್ನು ಸಹ ಗುರುತಿಸಿ, ಗೌರವಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬಿಮ್ಸ್  ನಲ್ಲಿ ಏರ್ಪಡಿಸಲಾಗಿದ್ದ ಬಿಮ್ಸ್ ಕಾಲೇಜಿನ ಪ್ರಸಕ್ತ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ವೃತ್ತಿಜೀವನ ಪಾದಾರ್ಪಣೆಯ ಪ್ರತಿಜ್ಞೆ ಸ್ವೀಕರಣೆ ಮತ್ತು ಪ್ಲಾರೆನ್ಸ್ ನೈಟಿಂಗೇಲ್ ಅವರ ಸ್ಮರಣಾರ್ಥ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವೃತ್ತಿಜೀವನದಲ್ಲಿ ಶ್ರದ್ಧೆ, ಸಹನೆ, ಸಮಚಿತ್ತ ಮತ್ತು ಮಾನವೀಯತೆಯಿಂದ ತಾವು ಸಲ್ಲಿಸುವ ಸೇವೆಯು ತಾವು ಕಲಿತ ಬಿಮ್ಸ್ ಸಂಸ್ಥೆ, ಬೋಧಕರಿಗೆ ಹಾಗೂ ಇಡೀ ಜಿಲ್ಲೆಯ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ಆದ್ದರಿಂದ ಸಮರ್ಪಣಾ ಮನೋಭಾವದಿಂದ ರೋಗಿಗಳ ಆರೈಕೆ ಮಾಡಬೇಕು ಎಂದು ಭಾವಿ ಶುಶ್ರೂಷಕಿಯರಿಗೆ ಕಿವಿಮಾತು ಹೇಳಿದರು. 

ಜೀವರಕ್ಷಕ ಎನಿಸಿರುವ ಅತೀ ಶ್ರೇಷ್ಠ ವೈದ್ಯಕೀಯ ಕ್ಷೇತ್ರವನ್ನು ತಮ್ಮ ವೃತ್ತಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿನಂದನೆಗಳನ್ನು ತಿಳಿಸಿದರು. 

Home add -Advt

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಮ್ಸ್ ಸಂಸ್ಥೆಯ ಮುಖ್ಯಸ್ಥ ಮತ್ತು ನಿರ್ದೇಶಕ ಡಾ. ಅಶೋಕ ಶೆಟ್ಟಿ ಅವರು, ಕಳೆದ 15 ವರ್ಷಗಳಿಂದ ಸಂಸ್ಥೆಯ ನರ್ಸಿಂಗ್ ಕಾಲೇಜು ಗುಣಮಟ್ಟದ ಪ್ರಾಯೋಗಿಕ ಶಿಕ್ಷಣ ನೀಡುವುದರ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸಂಪನ್ಮೂಲ ಶುಶ್ರೂಷಕಿಯರನ್ನು ಕೊಡುಗೆ ನೀಡಿದೆ ಎಂದು ತಿಳಿಸಿದರು.

ಸಂಸ್ಥೆಯ ಹೃದಯ ಆರೋಗ್ಯ ಸುರಕ್ಷೆ ವಿಭಾಗದ ಹಿರಿಯ ಸಂಯೋಜಕರಾದ ರಾಜೀವ್ ಕೃಷ್ಣಮೇತ್ರಿ ಅವರು ಮಾತನಾಡಿ, ಶುಶ್ರೂಷಕಿಯರು ವೈದ್ಯರಿಗೆ ಬೆನ್ನೆಲುಬು ರೀತಿಯಲ್ಲಿ ತಮ್ಮ ಸೇವೆ ಸಲ್ಲಿಸುವುದರಿಂದ ವೈದ್ಯಕೀಯ ಸೇವೆಯಲ್ಲಿ ತಮ್ಮ ಜವಾಬ್ದಾರಿ ಮರೆಯಬಾರದು ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರು, ಶುಶ್ರೂಷಕಿಯರ ಹೊರತಾಗಿ ವೈದ್ಯರ ಸೇವೆ ಪೂರ್ಣಗೊಳ್ಳಲಾರದು. ಇದು ಅವರ ವೃತ್ತಿಯ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಬಿಮ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಿದ್ದು ಹುಲ್ಲೋಳಿ, ಮುಖ್ಯ ಲೆಕ್ಕಧಿಕಾರಿ ಶಿಲ್ಪಾ ವಾಲಿ ಅವರು ಸೇರಿದಂತೆ ನರ್ಸಿಂಗ್ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button