ಸುಶಾಂತ್ ಸಿಂಗ್ ಪ್ರಕರಣ ವಿಷಯಾಂತರಕ್ಕೆ ಮಹಾರಾಷ್ಟ್ರದಲ್ಲಿ ಮಣಗುತ್ತಿ ಪ್ರಕರಣ! – ಶಿವಸೇನೆಯ ನಾಚಿಕೆಗೇಡಿನ ರಾಜಕಾರಣ
ಕರ್ನಾಟಕದ ಸರಕಾರ ಮತ್ತು ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಸೇರಿ ಮಹಾರಾಷ್ಟ್ರ ಸರಕಾರಕ್ಕೆ ತಿರುಗೇಟು ನೀಡಬೇಕಿದೆ. ನಿಮ್ಮ ಸಮಸ್ಯೆಯನ್ನು ನೀವು ನೋಡಿಕೊಳ್ಳಿ, ನಮ್ಮ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಬೇಕಿದೆ. ಶಿವಾಜಿಯನ್ನು ಶಿವಸೇನೆ ಗುತ್ತಿಗೆ ಪಡೆದಿಲ್ಲ. .
ಎಂ.ಕೆ.ಹೆಗಡೆ, ಮುಂಬೈ/ ಬೆಳಗಾವಿ – ಇಲ್ಲದ ಪ್ರಕರಣವೊಂದನ್ನು ಅನಗತ್ಯವಾಗಿ ಎತ್ತಿ ಹಾಕುವ ಮೂಲಕ ಮಹಾರಾಷ್ಟ್ರದ ಶಿವಸೇನೆ ಸರಕಾರ ಬೆಳಗಾವಿಯಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿಯಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಯನ್ನು ತಿರುಚಿರುವ ಶಿವಸೇನೆ, ಮಹಾರಾಷ್ಟ್ರದಲ್ಲಿ ತನ್ನ ಕಾಲಬುಡದಲ್ಲಿ ಹೊತ್ತಿಕೊಂಡಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆಂಕಿಯಿಂದ ಪಾರಾಗಲು ಯತ್ನಿಸುತ್ತಿದೆ.
ವಿಪರ್ಯಾಸವೆಂದರೆ ಸಣ್ಣ ಹಳ್ಳಿಯೊಂದರ ಸಹಜವಾದ ಬೆಳವಣಿಗೆಯನ್ನು ಸುಶಾಂತ್ ಸಿಂಗ್ ಪ್ರಕರಣದ ಮಟ್ಟಕ್ಕೆ ರಾಷ್ಟ್ರಮಟ್ಟದಲ್ಲಿ ಎಬ್ಬಿಸುವ ಪ್ರಯತ್ನಕ್ಕೆ ಮಹಾರಾಷ್ಟ್ರ ಮಂತ್ರಿಗಳು ಕೈ ಹಾಕಿದ್ದಾರೆ. ತನ್ಮೂಲಕ ಕ್ಷುಲ್ಲಕ ರಾಜಕೀಯದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ಮಾಧ್ಯಮಗಳನ್ನು ದಿಕ್ಕು ತಪ್ಪಿಸಿ, ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮಣಗುತ್ತಿಯಲ್ಲಿ ನಡೆದಿದ್ದೇನು?
ಮಣಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಹಳ್ಳಿಗಳು ಬರುತ್ತವೆ. ಅಲ್ಲಿ ಮರಾಠಿ, ವಾಲ್ಮಿಕಿ, ಲಿಂಗಾಯತ ಸೇರಿದಂತೆ ವಿವಿಧ ಸಮುದಾಯದ ಜನರು ವಾಸಿಸುತ್ತಾರೆ. ಅವರೆಲಲ್ರೂ ಸೌಹಾರ್ಧತೆಯಿಂದ ಬಾಳುತ್ತಿದ್ದಾರೆ.
2019ರಲ್ಲಿ ಎಲ್ಲ ಸಮುದಾಯದವರು ಸೇರಿ ಶಿವಾಜಿ, ವಾಲ್ಮಿಕಿ, ಬಸವಣ್ಣ, ಕೃಷ್ಣ ಹಾಗೂ ಅಂಬೇಡ್ಕರ್ ಪುತ್ಥಳಿಗಳನ್ನು ಗ್ರಾಮದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಯನ್ನು ಗ್ರಾಮಪಂಚಾಯಿತಿ ಮುಂದಿಡುತ್ತಾರೆ. ಗ್ರಾಮಪಂಚಾಯಿತಿ ಅಧ್ಯಕ್ಷರು ಇದಕ್ಕೆ ಒಪ್ಪಿ, ಸೂಕ್ತ ಜಾಗ ಆಯ್ಕೆ ಮಾಡಿ, ಸಮಾನ ಆದ್ಯತೆ, ಸಮಾನ ಎತ್ತರದ ಪುತ್ಥಳಿ ಮಾಡಿ ಎಲ್ಲ 5 ಪುತ್ಥಳಿ ಸ್ಥಾಪಿಸಬೇಕೆನ್ನುವ ನಿರ್ಣಯವಾಗುತ್ತದೆ. ಆದರೆ ಈ ಕುರಿತು ತಹಸಿಲ್ದಾರ ಅನುಮತಿ ಪಡೆಯುವುದು ಸೇರಿದಂತೆ ವಿಷಯ ಹಾಗೆೇ ಬಾಕಿ ಉಳಿದಿರುತ್ತದೆ.
ಈ ಮಧ್ಯೆ ಕೆಲವು ದಿನದ ಹಿಂದೆ ಕೆಲವರು ಶಿವಾಜಿ ಪುತ್ಥಳಿಯನ್ನು ರಾತ್ರೋರಾತ್ರಿ ತಂದು ನಿಲ್ಲಿಸುತ್ತಾರೆ. ಇದು ಇತರ ಸಮುದಾಯದವರಿಗೆ ಅಸಮಾಧಾನವನ್ನುಂಟುಮಾಡುತ್ತದೆ.
ಈ ಹಿನ್ನೆಲೆಯಲ್ಲಿ ತಹಸಿಲ್ದಾರರು ಸ್ಥಳಕ್ಕೆ ತೆರಳಿ ಎಲ್ಲರನ್ನೂ ಸಮಾಧಾನ ಮಾಡಿ ಸೂಕ್ತ ಸ್ಥಳ ಆಯ್ಕೆ ಮಾಡಿ ಎಲ್ಲ 5 ಪುತ್ಥಳಿ ಸ್ಥಾಪಿಸೋಣ. ಅಲ್ಲಿಯವರೆಗೆ ಶಿವಾಜಿ ಪುತ್ಥಳಿಯನ್ನು ದೇವಸ್ಥಾನದಲ್ಲಿ ಸುರಕ್ಷಿತವಾಗಿ ಇಡೋಣ ಎಂದು ಎಲ್ಲರನ್ನೂ ಸಮಾಧಾನಪಡಿಸುತ್ತಾರೆ. ಇದಕ್ಕಾಗಿ 15 ದಿನಗಳ ಸಮಯಾವಕಾಶ ನಿಗದಿ ಮಾಡಲಾಗುತ್ತದೆ.
ಅಂತೆಯೇ ಮರಾಠಿ ಭಾಷಿಕರೂ ಸೇರಿದತೆ ಎಲ್ಲರೂ ಒಪ್ಪಿಯೇ ಶಿವಾಜಿ ಪುತ್ಥಳಿಯನ್ನು ತೆಗೆದು ದೇವಸ್ಥಾನದಲ್ಲಿ ಇಡಲಾಗಿದೆ.
ಆದರೆ ಕೆಲವರು ಇದನ್ನೇ ವಿವಾದ ಮಾಡಿ ಸ್ಥಾಪನೆಯಾಗಿದ್ದ ಪುತ್ಥಳಿಯನ್ನು ತೆಗೆಸಲಾಗಿದೆ ಎಂದು ವಿವಾದ ಹುಟ್ಟುಹಾಕಿದರು. ಇದು ಮಹಾರಾಷ್ಟ್ರದ ಶಿವಸೇನೆಯ ಕಿವಿಗೆ ಬೀಳುತ್ತದೆ. ಮಹಾರಾಷ್ಟ್ರದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಮಾಧ್ಯಮಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ ಶಿವಸೇನೆಯ ಬುಡಕ್ಕೆ ಬೆಂಕಿ ಬಿದ್ದಿದ್ದರಿಂದ ಅದರಿಂದ ಪಾರಾಗಲು ಮಣಗುತ್ತಿ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಅಲ್ಲಿನ ಶಿವಸೇನೆಯ ಎಲ್ಲ ಮಂತ್ರಿಗಳೂ ಹಳಿಕೆ ನೀಡಲು ಆರಭಿಸಿದ್ದಾರೆ.
ಕರ್ನಾಟಕದ ಈ ಆಂತರಿಕ ಸಣ್ಣ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಮೂಗು ತೂರಿಸುತ್ತಿರುವುದು ವಿಪರ್ಯಾಸವೇ ಸರಿ. ಇದೊಂದು ಶಿವಸೇನೆಯ ಮೂರ್ಖತನವಲ್ಲದೆ ಮತ್ತೇನೂ ಅಲ್ಲ.
ಕರ್ನಾಟಕದ ಸರಕಾರ ಮತ್ತು ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಸೇರಿ ಮಹಾರಾಷ್ಟ್ರ ಸರಕಾರಕ್ಕೆ ತಿರುಗೇಟು ನೀಡಬೇಕಿದೆ. ನಿಮ್ಮ ಸಮಸ್ಯೆಯನ್ನು ನೀವು ನೋಡಿಕೊಳ್ಳಿ, ನಮ್ಮ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಬೇಕಿದೆ. ಶಿವಾಜಿಯನ್ನು ಶಿವಸೇನೆ ಗುತ್ತಿಗೆ ಪಡೆದಿಲ್ಲ. ಕರ್ನಾಟಕದಲ್ಲೂ ಶಿವಾಜಿಗೆ ಸಾಕಷ್ಟು ಗೌರವ ನೀಡಲಾಗುತ್ತಿದೆ. ಶಿವಜಯಂತಿಯನ್ನೂ ಅದ್ಧೂರಿಯಾಗಿಯೇ ಸರಕಾರದಿಂದ ಆಚರಿಸಲಾಗುತ್ತಿದೆ.
ಮಣಗುತ್ತಿಯಲ್ಲಿ ಗಲಾಟೆ ಮಾಡುವ ಎರಡು ಗುಂಪುಗಳ ಪ್ರಯತ್ನವನ್ನು ಸ್ಥಳೀಯ ಪೊಲೀಸರು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸಿ ಕಳಿಸಿದ್ದಾರೆ. ಮಹಾರಾಷ್ಟ್ರ ಹಸ್ತಕ್ಷೇಪ ಮಾಡದಿದ್ದರೆ ಅಲ್ಲಿನ ವಿವಾದ ಸೌಹಾರ್ಧಯುತವಾಗಿ ಬಗೆಹರಿಯಲಿದೆ.
ಸಂಬಂಧಿಸಿದ ಸುದ್ದಿ ಓದಿ –
ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಮಹಾರಾಷ್ಟ್ರ ಯತ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ