
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಬೆಳಗಾವಿಯಲ್ಲಿ ಹತ್ತಾರು ಕೆಲಸಗಳು ಭರದಿಂದ ನಡೆಯುತ್ತಿವೆ. ಆರಂಭದಲ್ಲಿ ಒಂದಿಷ್ಟು ವಿಳಂಬವಾದರೂ ಈಗ ಅತ್ಯಂತ ವೇಗವಾಗಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಈಗಲೇ ನಿವಾರಿಸುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ನಡೆಯುವ ಪ್ರದೇಶಗಳನ್ನೆಲ್ಲ ವೀಕ್ಷಿಸಿದ ಅಧಿಕಾರಿಗಳು, ಒಮ್ಮೆ ಕೆಲಸ ಪೂರ್ಣಗೊಂಡ ನಂತರ ಮತ್ತೆ ಮತ್ತೆ ಅಗೆಯುವ ಸಂದರ್ಭವನ್ನು ತಪ್ಪಿಸಲು ಸಮಾಲೋಚನೆ ನಡೆಸಿದ್ದಾರೆ. ವಿವಿಧ ಇಲಾಖೆಗಳಿಂದ ಮುಂದಿನ ದಿನಗಳಲ್ಲಿ ಯಾವ್ಯಾವ ಯೋಜನೆಗಳು ಜಾರಿಯಾಗಲಿವೆ ಎನ್ನುವುದರ ಕುರಿತು ಚರ್ಚಿಸಿ, ಅದಕ್ಕೆ ತಕ್ಕಂತೆ ಈಗಲೇ ಭೂಗತ ಕೇಬಲ್ ಗಳನ್ನು ಅಳವಡಿಸುವುದು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಯಿತು.
ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ಜೊತೆಗೆ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುತ್ತಿರುವ ಎಲ್ಲ ಪ್ರದೇಶಗಳನ್ನು ಸುತ್ತು ಹಾಕಿ ಸೂಕ್ತ ಯೋಜನೆ ತಯಾರಿಸಲು ನಿರ್ಧರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಮಗ್ರ ವಿವರವನ್ನು ಎಂಡಿ ಶಶಿಧರ ಕುರೇರ್ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ನೀಡಿದರು. ಶೀಘ್ರವಾಗಿ ತಮ್ಮ ತಮ್ಮ ಇಲಾಖೆಯ ಕಾರ್ಯಯೋಜನೆಯ ಮಾಹಿತಿ ಒದಗಿಸುವಂತೆ ಅವರು ಕೋರಿದರು.
ವಿವಿಧ ಇಲಾಖೆಗಳ ಮಧ್ಯೆ ಕೋ ಆರ್ಡಿನೇಶನ್ ಇದ್ದಾಗ ಮುಂದೆ ಬರಬಹುದಾದ ಸಮಸ್ಯೆಗಳು ನಿವಾರಣೆಯಾಗಲಿವೆ, ಈ ಹಿನ್ನೆಲೆಯಲ್ಲಿ ಪರಸ್ಪರ ಚರ್ಚಿಸಿ ಪರಿಹರಿಸಿಕೊಳ್ಳಿ ಎಂದು ಶಾಸಕ ಅಭಯ ಪಾಟೀಲ ಈಚೆಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.