ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎನ್ನುವವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸೋಮವಾರ ಸಂಜೆ 4.30ರ ವೇಳೆ ಪೃಥ್ವಿಸಿಂಗ್ ಮೇಲೆ ಹಲ್ಲೆ ನಡೆಸಲಾಗಿದೆ, ಅದಕ್ಕೂ ಮುನ್ನ ಕೆಲವರು ಅವರೊಂದಿಗೆ ಮಾತನಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಜೆಯ ಹೊತ್ತಿಗೆ ಪೊಲೀಸರು ತಿಳಿಸಿದ್ದಾರೆ.
ತಮ್ಮ ಮೇಲೆ ಚನ್ನರಾಜ ಹಟ್ಟಿಹೊಳಿ ಹಲ್ಲೆ ಮಾಡಿದ್ದು, ಚಾಕುವಿನಿಂದ ಇರಿದು ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ ಎಂದು ಪೃಥ್ವಿ ಸಿಂಗ್ ವಿಡೀಯೋ ಮಾಡಿ ಆರೋಪಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಪೃಥ್ವಿ ಸಿಂಗ್ ಪುತ್ರ ಹೇಳಿಕೆ ನೀಡಿ, ಚನ್ನರಾಜ ಹಟ್ಟಿಹೊಳಿ ಆಪ್ತರಿಬ್ಬರು ಬಂದು ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.
ಪೃಥ್ವಿ ಸಿಂಗ್ ಹೇಳಿಕೆಗೂ, ಅವರ ಮಗನ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದ್ದು, ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ, ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯದಲ್ಲಿ ಪೃಥ್ವಿಸಿಂಗ್ ಕೇಸರಿ ಬಣ್ಣದ ಅಂಗಿ ಧರಿಸಿದ್ದರೆ, ಹಲ್ಲೆಯಾದ ನಂತರ ಅವರು ವಿಡೀಯೋ ಮಾಡಿರುವ ದೃಶ್ಯದಲ್ಲಿ ಬಿಳೆ ಬಣ್ಣದ ಅಂಗಿ ಧರಿಸಿದ್ದು ಅದು ರಕ್ತದ ಕಲೆಗಳಿಂದ ಕೂಡಿದೆ.
ಹಾಗಾದರೆ ಅವರು ಅಂಗಿ ಬದಲಿಸಿದ್ದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಅವರ ಹೇಳಿಕೆಗಳು ಮತ್ತು ಸಿಸಿಟಿವಿಯಲ್ಲಿ ದಾಖಲಾಗಿರುವ ಅಂಶಗಳೇ ಇಡೀ ಪ್ರಕರಣದ ಸಂಶಯಕ್ಕೆ ಕಾರಣವಾಗಿದೆ.
ಅಲ್ಲದೆ, ಬಿಜೆಪಿ ಮುಖಂಡರು ಮಾರಣಾಂತಿಕ ಹಲ್ಲೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಪೃಥ್ವಿಸಿಂಗ್ ಮಾಡಿರುವ ವಿಡೀಯೋದಲ್ಲಿ ಕೈಗಳಿಗೆ ಮಾತ್ರ ಇರಿತದ ಗಾಯಗಳನ್ನು ತೋರಿಸಿದ್ದಾರೆ. ಜೊತೆಗೆ ಎಲ್ಲರೂ ಆಸ್ಪತ್ರೆ ಬಳಿ ಬನ್ನಿ ಎಂದು ಅವರು ಕರೆ ನೀಡಿ ಆಸ್ಪತ್ರೆಗೆ ತೆರಳಿದ್ದಾರೆ.
ಇಂತಹ ಘಟನೆ ನಡೆದಾಗ ಯಾವುದೇ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಘಟನೆಯಲ್ಲಿ ಅವರು ಎಲ್ಲರನ್ನೂ ಆಸ್ಪತ್ರೆಗೆ ಬರುವಂತೆ ಆಹ್ವಾನಿಸಿ, ವಿಡೀಯೋ ಮಾಡಿ ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ನಂತರ ಆಸ್ಪತ್ರೆಗೆ ತೆರಳಿದ್ದಾರೆ. ಅವರ ವರ್ತನೆ, ಮಾತನಾಡುವ ರೀತಿ ಕೂಡ ಅನುಮಾನಗಳನ್ನು ಹುಟ್ಟುಹಾಕುವಂತಿದೆ.
ಇಡೀ ಪ್ರಕರಣದ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಬಹುದು. ಒಂದು ವೇಳೆ ಇದು ಕಟ್ಟುಕತೆಯಾದಲ್ಲಿ ಬಿಜೆಪಿಗೇ ತಿರುಗುಬಾಣವಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ