Belagavi NewsBelgaum NewsKannada NewsKarnataka News

*ಪ್ರತ್ಯೆಕ ರಾಜ್ಯದ ಕೂಗು ಮೊಳಗುವ ಕಾಲ ದೂರವಿಲ್ಲ: ರಮೇಶ ಕತ್ತಿ*

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸಬಹುದೆಂಬ ಸರಕಾರದ ಮೇಲಿನ ನಿರೀಕ್ಷೆ ಹುಸಿಯಾಗಿದ್ದು, ಪ್ರತ್ಯೆಕ ರಾಜ್ಯದ ಕೂಗು ಮೊಳಗುವ ಕಾಲ ದೂರವಿಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರತಿಯೊಂದು ಅಧಿವೇಶನಗಳು ಕೇವಲ ಆರೋಪ- ಪ್ರತ್ಯಾರೋಪಗಳ ಮೂಲಕ ಜಾತಿವಾರು ಮತಬ್ಯಾಂಕ ಸೃಷ್ಟಿಸುವ ಕೆಲಸ ಮಾಡುತ್ತಿವೆಯೇ ಹೊರತು ಅಭಿವೃದ್ಧಿ ಬಗೆಗಿನ ಚಿಂತನೆ ಯಾರಿಗೂ ಬೇಡವಾದ ವಿಷಯ ಎಂಬಂತಾಗಿದೆ.
ಕಳೆದ ಐದು ದಿನಗಳ ಅಧಿವೇಶನದಲ್ಲಿ ಒಂದು ದಿನವೂ ಅಭಿವೃದ್ಧಿ ಬಗೆಗೆ ಚರ್ಚೆಯಾಗದಿರುವುದು ದೊಡ್ಡ ದುರಂತ. ಬೆಂಗಳೂರಿನಿಂದ ಬೆಳಗಾವಿಗೆ ಬಂದ ಸಚಿವರು, ಅಧಿಕಾರಿಗಳು ನಮ್ಮ ಜಿಲ್ಲೆಗೂ, ತಾಲೂಕಿಗೂ, ಊರಿಗೆ ಬಂದು ನಮ್ಮ ಕಷ್ಟವನ್ನು ಕೇಳುತ್ತಾರೆ ಎನ್ನುವ ಜನರ ನಿರೀಕ್ಷೆ ನಿರಾಸೆ ಮೂಡಿಸಿದೆ ಎಂದರು.
ಈ ಭಾಗದ ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕಾಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸರಕಾರಗಳ ನಿರ್ಲಕ್ಷ್ಯ ಈ ಭಾಗದ ಜನರ ಬದುಕಿನ ಜೊತೆ ಚೆಲ್ಲಾಟ ಆಡುವದು ಇಲ್ಲಿಗೆ ನಿಲ್ಲಿಸಬೇಕು ಎಂದರು.

ಉತ್ತರದ ಜನಪ್ರತಿನಿಧಿಗಳ ಮೌನ:
ಈ ಭಾಗದ ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಒಟ್ಟಾಗಿ ಹೋರಾಟ ಮಾಡಬೇಕೆಂಬುದು ಈ ಭಾಗದ ಮಠಾಧೀಶರು ಹಾಗೂ ಜನರ ಬಯಕೆಯಾಗಿ ಈ ನಿಟ್ಟಿನಲ್ಲಿ ಇನ್ನಾದರೂ ಜನಪ್ರತಿನಿಧಿಗಳು ಮೌನ ಮುರಿದು ಹೋರಾಡಿ ಭವಿಷ್ಯದ ಪೀಳಿಗೆಗೆ  ಉತ್ತಮ ಬದುಕು ಕಟ್ಟಿಕೊಡುವತ್ತ ಮನಸು ಮಾಡಬೇಕಿದೆ ಎಂದರು.

ಅನಿವಾರ್ಯವಾದರೆ ಹೋರಾಟ ನಿಶ್ಚಿತ:
ಸತತ ಮಲತಾಯಿ ಧೋರಣೆಗೆ ತುತ್ತಾಗುವ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರಕಾರಗಳು ಸ್ಪಂದಿಸದಿದ್ದಲ್ಲಿ ಬರುವ ದಿನಗಳಲ್ಲಿ ಹಿರಿಯ ಮಠಾಧೀಶರಾದ ಶ್ರೀಶೈಲ ಹಾಗೂ ನಿಡಸೋಸಿ ಜಗದ್ಗುರುಗಳ ನೇತೃತ್ವದಲ್ಲಿ ಎಲ್ಲ ಸಮುದಾಯದ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಈ ಭಾಗದ ಸಮಾನಮನಸ್ಕ ಜನಪ್ರತಿನಿಧಿಗಳು ಹಾಗೂ ಹಿರಿಯ ಮುಖಂಡರನ್ನೊಳಗೊಂಡ ಒಕ್ಕೂಟದ ಮೂಲಕ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button