ಯುವ ವಿಜ್ಞಾನಿಗಳಾಗಿ ಮೂವರು ಆಯ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳ ಕುರಿತು ಪ್ರಾಮಾಣಿಕವಾಗಿ ಯೋಚಿಸಿ, ಸಮಸ್ಯೆಗಳಿಗೆ ಕಾರಣ ಹುಡುಕಿ, ಅವಲೋಕಿಸಿ ವೈಜ್ಞಾನಿಕ ವಿಧಾನದಲ್ಲಿ ಕಾರ್ಯಸಾಧ್ಯ ಪರಿಹಾರಗಳನ್ನು ಸೂಚಿಸುತ್ತಾ ಯುವ ವಿಜ್ಞಾನಿಗಳಾಗಿ ರೂಪಗೊಂಡಿರುವುದು ಅಭಿನಂದನೀಯ ಎಂದು ಜೆ. ಎಸ್.ಎಸ್. ವಿಜ್ಞಾನ ಮಹಾವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ|| ಪ್ರಮೋದ ಹನಮಗೊಂಡ ಅಭಿಪ್ರಾಯಪಟ್ಟರು.
ಅವರು ಶನಿವಾರ ನಗರದ ಡಾ|| ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿ ಪೂರ್ವ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ೦೯ ರಿಂದ ೧೨ ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ವಿಧಾನವನ್ನು ಅರಿತುಕೊಂಡಿರುವ ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಲಿ ಎಂದು ಅವರು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೇಸ್ ಕಾರ್ಯದರ್ಶಿ ರಾಜನಂದ ಘಾರ್ಗಿ ಮಾತನಾಡಿ ಯುವ ವಿಜ್ಞಾನಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ವೇದಿಕೆ ಮೇಲೆ ಎಸ್.ಜಿ.ಬಿ.ಆಯ್.ಟಿ ಉಪನ್ಯಾಸಕ ಡಾ|| ಸಾಗರ ವಾಗ್ಮೋರೆ, ವಿಜ್ಞಾನ ವಿಷಯ ಪರಿವೀಕ್ಷಕ ಐ.ಟಿ. ಹಿರೇಮಠ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಆರ್.ಎಲ್. ಎಸ್. ಕಾಲೇಜಿನ ಮಹಮದ್ ಕೈಪ್ ಮುಲ್ಲಾ ಪ್ರಥಮ ಸ್ಥಾನ, ಬೆನ್ಸನ್ ಶಾಲೆಯ ರುಷದಾ ಭಾಗವಾನ ದ್ವಿತೀಯ ಸ್ಥಾನ, ಹಾಗೂ ಎಸ್.ಎಸ್. ಪ್ರೌಢಶಾಲೆಯ ಶಶಿಕಾಂತ ಗಾಡಿವಡ್ಡರ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಪ್ರಥಮ ಬಹುಮಾನ ರೂ, ೫,೦೦೦/-, ದ್ವಿತೀಯ ರೂ ೩,೦೦೦/- ಹಾಗೂ ತೃತೀಯ ರೂ. ೨,೦೦೦/- ಗಳ ನಗದು ಬಹುಮಾನ ಒಳಗೊಂಡಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ