
ಪ್ರಗತಿವಾಹಿನಿ ಸುದ್ದಿ: ದಟ್ಟ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರ್ ಗ್ರಾಮದ ಶಾಂತಮ್ಮ (48) ಕೊಲೆಯಾದ ಮಹಿಳೆ. ಹಲ್ಕಟ್ನಾ ಗ್ರಾಮದ ಸುರೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 24ರಂದು ಯಾದಗಿರಿ ತಾಲೂಕಿನ ಬಾಚವಾರ್ ಗ್ರಾಮದ ಸಮೀಪದ ಸುಮಾರು 10 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ಕಾವಲುಗಾರನಿಗೆ ಮಹಿಳೆಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾಹಿತಿ ಪಡೆದ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಶವ ಸಂಪೂರ್ಣವಾಗಿ ಸುಟ್ಟುಹೋಗಿದ್ದರಿಂದ ಮೃತ ಮಹಿಳೆಯ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಶಕ್ಕೆ ಪಡೆದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಪ್ರದೇಶದಲ್ಲೇ ಶವದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಮಹಿಳೆಯ ಗುರುತು ಪತ್ತೆಗಾಗಿ ಎಸ್‌ಪಿ ಪೃಥ್ವಿಕ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಯಾದಗಿರಿ ಸರ್ಕಲ್ ಇನ್ಸ್‌ಪೆಕ್ಟರ್ ನಾನಾಗೌಡ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಪರಿಶೀಲನೆ ವೇಳೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವಾರ್ ಗ್ರಾಮದ ಶಾಂತಮ್ಮ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಬಳಿಕ ಶಾಂತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ ತನಿಖೆ ಮುಂದುವರಿಸಿದ ಪೊಲೀಸರು, ಅರಣ್ಯದಲ್ಲಿ ಪತ್ತೆಯಾಗಿದ್ದ ಶವದ ಬಳಿ ದೊರೆತ ಬಳೆಯನ್ನು ಕುಟುಂಬಸ್ಥರಿಗೆ ತೋರಿಸಿದ್ದಾರೆ. ಶಾಂತಮ್ಮ ಅವರ ಪುತ್ರ ದೇವಪ್ಪ, ಅದು ತಮ್ಮ ತಾಯಿಯ ಬಳೆ ಎಂದು ಗುರುತಿಸಿದ್ದು, ಇದರಿಂದ ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದೆ.
ಈ ಸುಳಿವಿನ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಶಾಂತಮ್ಮಳನ್ನು ಕೊಲೆ ಮಾಡಿ ಬಳಿಕ ಶವವನ್ನು ಅರಣ್ಯ ಪ್ರದೇಶಕ್ಕೆ ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾದ ಸುರೇಶ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ ಹಾಗೂ ಕೊಲೆಯ ಕಾರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




