*ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ, ಯಾವಾಗ ಹೊರಬರುತ್ತವೋ ನೋಡಬೇಕು*: *ಯತ್ನಾಳ್ ಹೊಸ ಬಾಂಬ್!*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಸ್ಟಿಂಗ್ ಆಪರೇಷನ್ ಪ್ರಕರಣದ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ, ಅಲ್ಲಿಯೂ ಕೆಲವು ಸ್ಟಿಂಗ್ ಆಪರೇಷನ್ಗಳು ನಡೆದಿವೆ. ಯಾವಾಗ ಸಿಡಿಗಳು ಹೊರಬರುತ್ತವೋ ನೋಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ಬಹಳ ಹಿಂದೆಯೇ ಹೇಳಿದ್ದೆ. ಒಂದು ಸಿಡಿ ಫ್ಯಾಕ್ಟರಿ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಇನ್ನೊಂದು ಬಿಜೆಪಿ ಪಕ್ಷದಲ್ಲಿದೆ. ತಮ್ಮ ಪಕ್ಷದವರನ್ನೇ ಬ್ಲ್ಯಾಕ್ಮೇಲ್ ಮಾಡಲು ಈ ಸಿಡಿಗಳನ್ನು ಇಟ್ಟುಕೊಂಡಿದ್ದಾರೆ. ಭವಿಷ್ಯದಲ್ಲಿ ಯಾರು ಅಡ್ಡಿಯಾಗಬಹುದು ಎಂದು ಭಾವಿಸುತ್ತಾರೋ, ಅಂಥವರನ್ನು ಬ್ಲ್ಯಾಕ್ಮೇಲ್ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಎರಡೂ ಪಕ್ಷಗಳಲ್ಲಿ ಸ್ಟಿಂಗ್ ಆಪರೇಷನ್ಗಳು ನಡೆದಿವೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ದುರದೃಷ್ಟವೆಂದರೆ ಎರಡೂ ರಾಷ್ಟ್ರೀಯ ಪಕ್ಷಗಳು ಈ ವಿಚಾರದಲ್ಲಿ ಮೌನವಾಗಿವೆ ಎಂದು ಟೀಕಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಈ ಕುರಿತು ಮಾತನಾಡುತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ ಮಾತ್ರ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ನ ಮಾಜಿ ಅಧ್ಯಕ್ಷರು ಮತ್ತು ಹಾಲಿ ಮುಖ್ಯಮಂತ್ರಿ ವಿಚಾರದಲ್ಲೂ ಆರೋಪಗಳನ್ನು ಮಾಡುತ್ತಿದ್ದರೂ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ಮೇಲ್ ಮಾಡಿದವರು ಯಾರು ಎಂಬ ಪ್ರಶ್ನೆಯನ್ನೂ ಯತ್ನಾಳ್ ಎತ್ತಿದ್ದಾರೆ. ವಿಜಯೇಂದ್ರ, ಆರ್. ಅಶೋಕ್ ಅಥವಾ ಕುಮಾರಸ್ವಾಮಿ ಈ ಕೃತ್ಯದ ಹಿಂದೆ ಇಲ್ಲ ಎಂದು ಹೇಳುತ್ತಾ, ಕಳೆದ ಹತ್ತು ವರ್ಷಗಳಿಂದ ಕೆಲವು ಉದಯೋನ್ಮುಖ ರಾಜಕಾರಣಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಬ್ಲ್ಯಾಕ್ಮೇಲ್ ಒಂದು ವ್ಯವಹಾರವಾಗಿ ಬೆಳೆದಿದೆ. ರಾಜಕೀಯದ ನೆಪದಲ್ಲಿ ವ್ಯಕ್ತಿಗಳನ್ನು ಸಂಪರ್ಕಿಸಿ, ವಿಡಿಯೋ ಮಾಡಿಕೊಳ್ಳುತ್ತಾರೆ. ಬಳಿಕ ಹಲವು ಶಾಸಕರಿಗೆ ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಬೆಂಗಳೂರಿನಲ್ಲಿ ಇಂತಹ ತಂಡಗಳು ಸಾಕಷ್ಟಿವೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನೂ ಉಲ್ಲೇಖಿಸಿದ ಯತ್ನಾಳ್, ಹಣಕಾಸಿನ ವ್ಯವಹಾರ ಕುದುರಿದರೆ ಇಂತಹ ಪ್ರಕರಣಗಳು ಅಲ್ಲಿಗೇ ನಿಲ್ಲುತ್ತವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ರಾಜಕಾರಣಿಗಳ ಇಮೇಜ್ ಹಾಳು ಮಾಡುವ ಇಂತಹ ಕೃತ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



