Kannada NewsKarnataka NewsLatest

ನಿಯಮ ಪಾಲಿಸಿದಲ್ಲಿ ಯಾವುದೆ ಸಾಂಕ್ರಾಮಿಕ ರೋಗ ಬರುವುದಿಲ್ಲ -ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಬೆಳಗಾವಿ ಜಿಲ್ಲೆ ಕಿತ್ತಳೆ ವಲಯದಲ್ಲಿದ್ದು ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮೊದಲಾದ ನಿಯಮಗಳನ್ನು ತಪ್ಪದೆ ಎಲ್ಲರೂ ಕಡ್ಡಾಯವಾಗಿ ಪಾಲಿಸಿ. ಇದನ್ನು ಪಾಲಿಸಿದಲ್ಲಿ ಜೀವನದಲ್ಲಿ ಯಾವುದೆ ಸಾಂಕ್ರಾಮಿಕ ರೋಗ ಬರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಕಿವಿಮಾತು ಹೇಳಿದ್ದಾರೆ.

ಲಾಕ್‌ಡೌನ್ ನಿಯಮಗಳ ಸಡಿಲಿಕೆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭೆಯ ಸಭಾಂಗಣದಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಮತ್ತು ಸಂಚಾರಕ್ಕೆ ಅವಕಾಶವಿದ್ದು ಕಿರಾಣಿ ಅಂಗಡಿಗಳನ್ನು ಬೆಳಿಗ್ಗೆ ೯ ರಿಂದ ಸಂಜೆ ೭ರ ವರೆಗೆ ತೆರೆಯಲು ಅವಕಾಶವಿದೆ. ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಜಿಲ್ಲೆಯೊಳಗೆ ಸಂಚರಿಸಬಹುದು. ಮೇ ೩೦ರ ವರೆಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ವಿಚಾರವಿಲ್ಲ. ಅಲ್ಲಿಯವರೆಗೆ ಆಹಾರ -ಧಾನ್ಯಗಳನ್ನು ಮನೆಮನೆಗೆ ಹೋಗಿ ಅಂಗನವಾಡಿ ಕಾರ್ಯಕರ್ತೆಯರು ವಿತರಿಸುವ ಕಾರ್ಯ ಮುಂದುವರೆಯಲಿದೆ. ೧೪೪ ಕಲಂ ಮುಂದುವರೆಯಲಿದೆ. ಸಭೆ ಸಮಾರಂಭಗಳು ನಡೆಯುವುದಿಲ್ಲ. ಮದುವೆ ಸಮಾರಂಭವು ಮಾತ್ರ ೫೦ ಜನರೊಂದಿಗೆ ನಡೆಸಲು ಅವಕಾವಿದೆ. ಬಸ್ ಸಂಚಾರ ಇರುವುದಿಲ್ಲ. ಮಂದಿರ, ಮಸೀದಿ, ಚರ್ಚ್‌ಗಳು ಬಂದ್ ಇರಲಿವೆ. ವಾರದ ಸಂತೆಗೂ ಅವಕಾವಿಲ್ಲ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಅಂತರರಾಜ್ಯ ಪ್ರಯಾಣಕ್ಕಾಗಿ ಸೇವಾ ಸಿಂಧು ಆಪ್ ಡೌನ್‌ಲೋಡ್ ಮಾಡಲು ಸಲಹೆ ನೀಡಿದರು.

ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರೆ ಸವಾರಿ ಮಾಡಬಹುದು, ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಅತ್ಯಾವಶ್ಯಕ ವಸ್ತುಗಳೊಂದಿಗೆ ಕಟ್ಟಡಕ್ಕೆ ಸಂಬಂಧಿಸಿದ ಅಂಗಡಿಗಳು ಮೇ ೪ರಿಂದ ತೆರೆಯಲಿವೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಸಿಪಿಐ ಸಂತೋಷ ಸತ್ಯನಾಯಿಕ, ಪಿಎಸ್‌ಐ ಕುಮಾರ ಹಾಡಕರ, ಬಿ.ಜಿ. ಸುಬ್ಬಾಪೂರಮಠ, ಸಿಡಿಪಿಓ ಸುಮಿತ್ರಾ ಡಿ.ಬಿ., ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಮಹಾವೀರ ಬೋರನ್ನವರ ಸ್ವಾಗತಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button