ಉಳಿತಾಯ: ತಪ್ಪು ತಿಳಿವಳಿಕೆಯಿಂದ ಮೊದಲು ಹೊರ ಬನ್ನಿ

ಉಳಿತಾಯಕ್ಕೆ ಮುಹೂರ್ತವೂ ಬೇಡ, ದೊಡ್ಡ ಮೊತ್ತವೂ ಬೇಕಾಗಿಲ್ಲ!

M.K.Hegde

ಎಂ.ಕೆ.ಹೆಗಡೆ
ಹಲವರಲ್ಲಿ ತಪ್ಪು ಕಲ್ಪನೆಯಿದೆ. ‘ಉಳಿತಾಯ’ ಎನ್ನುವುದು ‘ಕಂಜೂಸ್’ ಪದದ ಪರ್ಯಾಯ ಎಂದೇ ಭಾವಿಸುತ್ತಾರೆೆೆ. ಹಾಗಾಗಿ, ‘ಉಳಿತಾಯ’ವನ್ನೂ ಉಪೇಕ್ಷೆ ಮಾಡುತ್ತಾರೆ, ಉಳಿತಾಯ ಮಾಡುವವರನ್ನೂ ಓರೆಗಣ್ಣಿನಿಂದ ನೋಡುತ್ತಾರೆ.

ಇನ್ನೊಂದಿಷ್ಟು ಜನರು ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿರುತ್ತಾರೆ, ಉಳಿತಾಯ ಮಾಡುವಷ್ಟು ಹಣ ನಮಗೆಲ್ಲಿಂದ ಬರಬೇಕು? ಎಂದು ಪ್ರಶ್ನಿಸುತ್ತಾರೆ. ಉಳಿತಾಯ ಎನ್ನುವುದು ದೊಡ್ಡ ಜನರ ಸ್ವತ್ತು ಎಂದೇ ಭಾವಿಸುತ್ತಾರೆ.
ಮತ್ತಷ್ಟು ಜನ ಉಳಿತಾಯ ಆರಂಭಿಸಲು ಮುಹೂರ್ತಕ್ಕಾಗಿ ಕಾಯುತ್ತ ಕುಳಿತುಕೊಳ್ಳುತ್ತಾರೆ. ಹೊಸ ವರ್ಷದ ಮೊದಲ ದಿನದಿಂದ ಉಳಿತಾಯ ಆರಂಭಿಸಬೇಕು, ಅಕ್ಷಯ ತೃತೀಯದಿಂದ ಉಳಿತಾಯ ಯೊಜನೆಯಲ್ಲಿ ಹಣ ಹೂಡಬೇಕು, ದೀಪಾವಳಿಯ ದಿನ ಹಣ ತೊಡಗಿಸಬೇಕು ಎಂದೆಲ್ಲ ಯೋಚಿಸಿ, ಜೀವನ ಪರ್ಯಂತ ಅವರು ಕಾಯುತ್ತಲೇ ಇರುತ್ತಾರೆ.

ತಪ್ಪು ಕಲ್ಪನೆ, ತಪ್ಪು ನಿರ್ಧಾರ:

ಮೇಲಿನ ಎಲ್ಲವೂ ನಮ್ಮ ಜನರಲ್ಲಿನ ತಪ್ಪು ಕಲ್ಪನೆಗಳು ಮತ್ತು ಅದರಿಂದಾಗುತ್ತಿರುವ ತಪ್ಪು ನಿರ್ಧಾರಗಳು. ಉಳಿತಾಯ ಮಾಡುವವರು ಕಂಜೂಸ್‌ಗಳಲ್ಲ. ಜೀವನದ ಬಗೆಗೆ ಸ್ಪಷ್ಟವಾದ, ವ್ಯವಸ್ಥಿತವಾದ ಕಲ್ಪನೆ ಹೊಂದಿರುವವರ ಸುಂದರವಾದ ಯೋಜನೆ ಅದು. ವಾಸಕ್ಕಾಗಿ ಮನೆ ಕಟ್ಟಿಕೊಳ್ಳಲು, ಓಡಾಟಕ್ಕಾಗಿ ಕಾರು ಕೊಳ್ಳಲು, ಏಕಾ ಏಕಿ ಬಂದೆರಗುವ ಕಾಯಿಲೆಗಳನ್ನು ಎದುರಿಸಲು, ದಿಢೀರ್ ಎರಗುವ ಅಪಘಾತಗಳ ಆಘಾತ ತಪ್ಪಿಸಿಕೊಳ್ಳಲು, ಮಕ್ಕಳ ಶಿಕ್ಷಣಕ್ಕಾಗಿ ಭದ್ರ ಬುನಾದಿ ಒದಗಿಸಲು, ಎಲ್ಲಕ್ಕಿಂತ ಮುಖ್ಯವಾಗಿ ಕುಟುಂಬಕ್ಕೊಂದು ಭದ್ರತೆ ಒದಗಿಸಲು ಮಾಡುವ ದೂರದೃಷ್ಟಿಯ ಯೋಜನೆಯೇ ಉಳಿತಾಯ.

‘ಉಳಿತಾಯ’  ಇದೊಂದು ಅತ್ಯಂತ ಸುಂದರ ಶಬ್ಧ. ನೀವೊಂದು ಉಳಿತಾಯ ಖಾತೆ ತೆರೆದು ನೋಡಿ… ನಿಮ್ಮ ಕಲ್ಪನೆಗಳು ಹೇಗೆ ಗರಿಗೆದರುತ್ತವೆ ಎಂದು… ಹೇಗೆ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು… ಪ್ರತಿ ಕ್ಷಣವನ್ನೂ ಹೇಗೆ ಉಲ್ಲಸಿತಗೊಳಿಸುತ್ತದೆ ಎಂದು.

ಉಳಿತಾಯ ಆರಂಭಿಸಲು ಒಂದು ಒಳ್ಳೆಯ ಮುಹೂರ್ತ ಬೇಕು ಎನ್ನುವ ಕಲ್ಪನೆ ನಿಮಗಿದ್ದರೆ ಮೊದಲು ಮನಸ್ಸಿನಿಂದ ತೆಗೆದುಹಾಕಿ ಬಿಡಿ. ಈ ಕ್ಷಣಕ್ಕಿಂತ ಉತ್ತಮವಾದ ಗಳಿಗೆ ಸಿಗದು ಎಂದು ಈಗಲೇ ಆರಂಭಿಸಿ. ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಮೊದಲ ಉಳಿತಾಯವನ್ನು ನೀವು ಕುಳಿತಲ್ಲೇ ಆರಂಭಿಸಬಹುದು. ಬ್ಯಾಂಕಿಗೆ ಹೋಗಿ ಉಳಿತಾಯ ಖಾತೆ ತೆರೆದ ನಂತರವೇ ಉಳಿತಾಯ ಆರಂಭವಾಗುತ್ತದೆ ಎನ್ನುವ ಯೋಚನೆಯೂ ಬೇಕಾಗಿಲ್ಲ. ಅದೊಂದು ಅತ್ಯಂತ ಸರಳವಾದ ಪ್ರಕ್ರಿಯೆ. ನೀವು ಇದ್ದಲ್ಲೇ, ಈ ಕ್ಷಣವೇ ಉಳಿತಾಯ ಶುರು ಮಾಡಿಕೊಳ್ಳಬಹುದು. ಅದು ಹೇಗೆ?

ದೃಢ ನಿರ್ಧಾರ:

ಖರ್ಚಿಗೆಂದು ನಿಮ್ಮ ಪರ್ಸ್‌ನಲ್ಲಿ ೨೦೦ ರೂ. ಇಟ್ಟುಕೊಂಡಿದ್ದೀರಿ ಎಂದಾದರೆ, ಅದರಲ್ಲಿ ೧೦೦ ರೂ. ತೆಗೆದು ಪರ್ಸ್‌ನ ಮತ್ತೊಂದು ಖಾನೆಗೆ ಸೇರಿಸಿ. ಈ ೧೦೦ ರೂ. ಉಳಿತಾಯಕ್ಕಾಗಿ. ಅದನ್ನು ನಾನು ಯಾವುದೇ ಸಂದರ್ಭದಲ್ಲಿ ಬಳಸುವುದಿಲ್ಲ ಎಂದು ನಿರ್ಧಾರ ಮಾಡಿ. ಆ ೧೦೦ ರೂ. ನಿಮ್ಮ ಉಳಿತಾಯದ ಹಣವಾಯಿತು. ಯಾವಾಗ ನೀಮಗೆ ಬ್ಯಾಂಕ್, ಅಂಚೆ ಕಚೇರಿ ಅಥವಾ ಬೇರೆ ಯಾವುದೇ ಹಣಕಾಸು ಸಂಸ್ಥೆಗೆ ಭೇಟಿ ನೀಡಲು ಸಮಯ ಸಿಗುತ್ತದೆಯೋ ಆಗ ಆ ಹಣವನ್ನು ತೆಗೆದು ನಿಮ್ಮ ಹೆಸರಿನಲ್ಲೊಂದು ಉಳಿತಾಯ ಖಾತೆ ತೆರೆದು ಅದರಲ್ಲಿ ಹಾಕಿ. ಹಣಕಾಸು ಸಂಸ್ಥೆಗೆ ಹೋಗಲು ಬಹಳ ದಿನ ಸಮಯಾವಕಾಶವೇ ಆಗದಿದ್ದಲ್ಲಿ ಅಲ್ಲಿಯವರೆಗೂ ಪರ್ಸ್‌ನ ಆ ಖಾನೆಗೆ ದಿನವೂ ಸಾಧ್ಯವಾದಷ್ಟು ಹಣ ಹಾಕುತ್ತಲೇ ಹೋಗಿ. ಆ ಖಾನೆಯಲ್ಲಿರುವುದು ನನ್ನ ಹಣವಲ್ಲ ಎಂದು ದೃಢವಾದ ನಿರ್ಧಾರಕ್ಕೆ ಬನ್ನಿ. ನೂರು ರೂಪಾಯಿಯಲ್ಲ, ಒಂದೇ ಒಂದು ರೂಪಾಯಿ ಇದ್ದರೂ ಅದಕ್ಕೆ ಸೇರಿಸುತ್ತ ಬನ್ನಿ.

ದಿನಗೂಲಿ ಮಾಡಿ, ಅಥವಾ ದಿನಸಿ ವ್ಯಾಪಾರ ವಹಿವಾಟು ಮಾಡುವವರಾದರೆ, ನಿತ್ಯ ಹಣ ಎಣಿಸುವವರಾದರೆ ಪ್ರತಿ ದಿನ ಒಂದಿಷ್ಟು ಹಣವನ್ನು ಉಳಿತಾಯ ಖಾತೆಗೆ ಸೇರಿಸುತ್ತ ಬನ್ನಿ. ತಿಂಗಳಿಗೊಮ್ಮೆ ಸಂಬಳ ಎಣಿಸುವವರಾದರೆ ಸಂಬಳ ಬಂದ ತಕ್ಷಣ ಸ್ವಲ್ಪ ಹಣವನ್ನು ನನ್ನದಲ್ಲ ಎಂದು ತಿಳಿದು ಉಳಿತಾಯ ಖಾತೆಗೆ ಹಾಕಿ ಬಿಡಿ. ಈ ತಿಂಗಳು ನನಗೆ ಸ್ವಲ್ಪ ಸಂಬಳ ಕಡಿಮೆ ಬಂದಿದೆ, ಇಂದು ನನಗೆ ಕಡಿಮೆ ಲಾಭ ಬಂತು ಎಂದು ಭಾವಿಸಿ, ಅಷ್ಟು ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸಿಬಿಡಿ.

ನಿಮಗೆ ವೇತನ ಬಡ್ತಿ ಸಿಕ್ಕರೆ, ನಿರೀಕ್ಷೆಗಿಂತ ಹೆಚ್ಚಿನ ಲಾಭ ಬಂದರೆ ಯೋಚಿಸಲಿಕ್ಕೇ ಹೋಗಬೇಡಿ. ಆ ಹೆಚ್ಚಿನ ಹಣವನ್ನು ಉಳಿತಾಯ ಖಾತೆಗೆ ಸೇರಿಸಿದ ನಂತರವೇ ಮುಂದಿನ ಕೆಲಸದಲ್ಲಿ ತೊಡಗಿ. ವರ್ಷ, ತಿಂಗಳು, ದಿನ, ಅಷ್ಟೇ ಅಲ್ಲ ಪ್ರತಿ ಕ್ಷಣದ ಲೆಕ್ಕದಲ್ಲಿ ಉಳಿತಾಯಕ್ಕೆ ಮುಂದಾಗಿ. ಅದೊಂದು ನನ್ನ ಕರ್ತವ್ಯ ಎಂದು ಭಾವಿಸಿ, ದೃಢವಾದ ಹೆಜ್ಜೆ ಇಡಿ.

ತಲೆಯ ಮೇಲೆ ಸಾಲವಿದೆ. ಅದು ತೀರುವವರೆಗೆ ಉಳಿತಾಯ ಮಾಡಲು ಹೇಗೆ ಸಾಧ್ಯ?ಎಂದು ಕೆಲವರು ಪ್ರಶ್ನಿಸುತ್ತಾರೆ. ಸಾಲ ತೀರಿದ ಮೇಲೆ ಉಳಿತಾಯ ಆರಂಭಿಸುತ್ತೇನೆ ಎನ್ನುವ ಯೋಚನೆ ಇದ್ದರೆ ಮೊದಲು ಅದನ್ನು ತಲೆಯಿಂದ ತೆಗೆದು ಹಾಕಿ. ಸಾಲ ತೀರಿಸುವುದೇ ಬೇರೆ, ಉಳಿತಾಯವೇ ಬೇರೆ. ಕೋಟಿ ಕೋಟಿ ಸಾಲ ಉಳ್ಳವರೂ ಪ್ರತಿ ದಿನ, ಪ್ರತಿ ವರ್ಷ ಉಳಿತಾಯ ಖಾತೆಗೆ ಹಣ ಸೇರಿಸುತ್ತಾರೆ. ಸಾಲದ ಖಾತೆಗೆ ಸಾವಿರ ರೂ. ಹಾಕಿದರೆ, ಉಳಿತಾಯ ಖಾತೆಗೆ ೧೦೦ ರೂ.ವನ್ನಾದರೂ ಹಾಕುವ ಅಭ್ಯಾಸ ರೂಢಿಸಿಕೊಳ್ಳಿ. ಸಾಲದ ಬಡ್ಡಿ ಜಾಸ್ತಿ, ಉಳಿತಾಯ ಖಾತೆಯ ಬಡ್ಡಿ ಕಡಿಮೆ, ನಿಜ. ಆದರೆ, ಬದುಕಿನ ಅನಿರೀಕ್ಷಿತ ಆಘಾತದಿಂದ ನಮ್ಮನ್ನು ಕಾಪಾಡುವುದು ಉಳಿತಾಯ ಖಾತೆಯೇ ಹೊರತು ಸಾಲದ ಖಾತೆಯಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಹೇಗೆಲ್ಲ ಹಣ ಉಳಿಸಬಹುದು?:

ಉಳಿತಾಯದ ಬಗೆಗೆ ಯಾವುದೇ ಉಪೇಕ್ಷೆ ಮಾಡಬೇಡಿ. ಅದು ಪ್ರತಿ ದಿನ ನಾವು ಊಟ ಮಾಡಿದಷ್ಟೆ ಸಹಜವಾದ ಪ್ರಕ್ರಿಯೆ ಎಂದು ಭಾವಿಸಿ. ಮನಸ್ಸೊಂದಿದ್ದರೆ ಉಳಿತಾಯಕ್ಕೆ ನೂರಾರು ದಾರಿ ಇದೆ. ದಿನದ ಖರ್ಚಿಗೆ ೫೦೦ ರೂ. ಬೇಕು ಎಂದು ನೀವು ಯೋಜನೆ ಹಾಕಿದ್ದರೆ, ಅದಕ್ಕೆ ೧೦೦ ರೂ. ಉಳಿತಾಯದ ಹಣ ಸೇರಿಸಿ, ದಿನದ ಖರ್ಚು ೬೦೦ ರೂ. ಎಂದು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಿ. ಜತೆಗೆ, ಆ ೫೦೦ ರೂ.ನಲ್ಲಿ ಎಷ್ಟು ಉಳಿಸಿ, ಉಳಿತಾಯ ಖಾತೆಗೆ ಸೇರಿಸಬಹುದು ಎಂದೂ ಯೋಚಿಸಿ.
ದಿನವೂ ೨ ಕಿಮೀ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರೆ, ಇಂದು ೧೫ ನಿಮಿಷ ಮೊದಲೇ ಹೊರಡಲು ಅವಕಾಶವಾದರೆ ನಡೆದುಕೊಂಡು ಹೋಗುವ ಮೂಲಕ ಬಸ್ಸಿಗೆ ಖರ್ಚು ಮಾಡುವ ೧೦ ರೂ.ವನ್ನು ಉಳಿತಾಯ ಖಾತೆಗೆ ಸೇರಿಸಿ. ನೆನಪಿಡಿ, ವಾಕಿಂಗ್ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ಬೈಕ್‌ನಲ್ಲಿ ಓಡಾಡುವವರೂ ವಾರದಲ್ಲೊಂದು ದಿನ ವಾಕಿಂಗ್ ಮಾಡಬಹುದು. ಸ್ವಂತ ವಾಹನದಲ್ಲಿ ಹೊರಡುವವರು ಹೊರಡುವ ಮೊದಲೇ ಸರಿಯಾದ ಪ್ಲ್ಯಾನ್ ಮಾಡಿಕೊಂಡಿದ್ದರೆ, ಅನಗತ್ಯ ಸುತ್ತಾಡುವುದನ್ನು ತಡೆಯುವ ಮೂಲಕ ಇಂಧನ ಉಳಿತಾಯ ಮಾಡಬಹುದು. ಒಂದೇ ಕಡೆ ವಾಹನ ಪಾರ್ಕ್ ಮಾಡಿಕೊಂಡು ಹತ್ತಾರು ಕೆಲಸ ಮಾಡಿಕೊಳ್ಳಬಹುದು.

ದಿನವೂ ಹೊಟೆಲ್‌ನಲ್ಲಿ ೪ ಚಹಾ ಕುಡಿಯುತ್ತಿದ್ದರೆ ೩ಕ್ಕೆ ತಗ್ಗಿಸಿ. ಒಂದು ಚಹಾದ ಹಣವನ್ನು ಪರ್ಸ್‌ನ ಉಳಿತಾಯ ಖಾನೆಗೆ ವರ್ಗಾಯಿಸಿ. ೧೦ ಗುಟಖಾ ಅಗಿಯುತ್ತಿದ್ದರೆ ೬ಕ್ಕೆ ಇಳಿಸಿ (ಪೂರ್ತಿ ಬಿಟ್ಟರೆ ಆರೋಗ್ಯಕ್ಕೂ ಒಳ್ಳೆಯದು). ವರ್ಷಕ್ಕೆ ೪ ಜೋಡಿ ಪಾದರಕ್ಷೆ ಸವೆಯುತ್ತಿದ್ದರೆ ೩ಕ್ಕೆ ಇಳಿಸಲು ಪ್ರಯತ್ನಿಸಿ. ೩ ಜೋಡಿ ಹೊಸ ಬಟ್ಟೆ ಖರೀದಿಸುವ ಖಯಾಲಿ ನಿಮಗಿದ್ದರೆ ಒಂದು ಜೋಡಿ ಕಡಿಮೆ ಮಾಡಿ. ವಾರಕ್ಕೊಮ್ಮೆ ಹೊಟೆಲ್ ಭೋಜನದ ಅಭ್ಯಾಸವಿದ್ದರೆ ೧೫ ದಿನಕ್ಕೊಮ್ಮೆ ಮಾಡಿಕೊಳ್ಳಿ.
ಬಟ್ಟೆಯನ್ನು ಲಾಂಡ್ರಿಗೆ ಕೊಡುವ ಅಭ್ಯಾಸವಿದ್ದರೆ ಮನೆಯಲ್ಲೇ ವಾಶ್ ಮಾಡುವ, ಮನೆಯಲ್ಲೇ ಇಸ್ತ್ರಿ ಹಾಕುವ ರೂಢಿ ಮಾಡಿಕೊಳ್ಳಿ. ಇಸ್ತ್ರಿ ಹಾಳಾಗದಂತೆ ಕೈಯಿಂದಲೇ ವಾಶ್ ಮಾಡುವುದನ್ನು ರೂಢಿಸಿಕೊಂಡರೆ ಇಸ್ತ್ರಿ ಮಾಡುವ ಸಮಯ ಮತ್ತು ಹಣ ಎರಡನ್ನೂ ಉಳಿಸಬಹುದು. ಕಟಿಂಗ್ ಸಲೂನ್‌ಗೆ ಹೋಗಿ ಶೇವ್ ಮಾಡಿಸಿಕೊಳ್ಳುವ ಬದಲು ಮನೆಯಲ್ಲೇ ಶೇವಿಂಗ್ ಮಾಡಿಕೊಳ್ಳುವುದನ್ನು ರೂಢಿಸಿಕೊಂಡರೆ ಶೇವ್ ಜತೆ ಸೇವ್ ಕೂಡ ಸಾಧ್ಯವಾಗುತ್ತದೆ. ಶೇವ್ ಮಾಡುವಾಗ ಸ್ವಲ್ಪ ಬೆಚ್ಚಗಿನ ನೀರು ಬಳಸಿದರೆ ಒಂದೇ ಬ್ಲೇಡ್‌ನ್ನು ೮-೧೦ ದಿನ ಬಳಸಬಹುದು.

ಉಳಿತಾಯ ಎಲ್ಲಿ ಮಾಡಬೇಕು?:

ಮೊದಲೇ ಹೇಳಿದಂತೆ ಉಳಿತಾಯ ಆರಂಭಿಸುವುದಕ್ಕೆ ಬಹು ದೊಡ್ಡ ಪ್ಲ್ಯಾನ್ ಏನೂ ಮಾಡಬೇಕಿಲ್ಲ. ಮೊದಲು ಆರಂಭಿಸಿ, ನಂತರ ಎಲ್ಲಿ? ಹೇಗೆ? ಯಾವಾಗ? ಯಾವುದಕ್ಕೆ? ಎಲ್ಲವನ್ನೂ ಪ್ಲ್ಯಾನ್ ಮಾಡಲು ಶುರು ಮಾಡಿ.  ಉಳಿತಾಯವನ್ನು ಎಲ್ಲಿ ಮಾಡಬೇಕೆನ್ನುವುದು ನೀವು ಉಳಿಸುವ ಹಣದ ಪ್ರಮಾಣವನ್ನು ಅವಲಂಭಿಸಿರುತ್ತದೆ. ಒಮ್ಮೆ ಉಳಿತಾಯ ಆರಂಭಿಸಿದರೆ ಅದೇ ನಂತರ ನಿಮಗೆ ದಾರಿ ತೋರಿಸುತ್ತದೆ. ಆದರೆ, ಉಳಿತಾಯದಲ್ಲಿ ಬಡ್ಡಿಗಿಂತ ಸುರಕ್ಷತೆ ಮುಖ್ಯ ಎನ್ನುವ ಪ್ರಮುಖವಾದ ಅಂಶವೊಂದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಉಳಿತಾಯ ಮಾಡುವ ಹಣ ಎಷ್ಟು ಬಡ್ಡಿ ದುಡಿಯುತ್ತದೆ ಎನ್ನುವುದು ಮುಖ್ಯವಲ್ಲ. ಅದು ಎರಡನೇ ಆಧ್ಯತೆಯಾಗಿರಲಿ. ಉಳಿಸಿದ ಹಣವನ್ನು ಸುರಕ್ಷಿತ ಸ್ಥಳದಲ್ಲಿ ತೊಡಗಿಸುವುದು ಮೊದಲ ಆಧ್ಯತೆಯಾಗಿರಲಿ. ಹಾಗಂತ ಬಡ್ಡಿಯ ಬಗೆಗೆ ನಿರ್ಲಕ್ಷ್ಯವೂ ಬೇಕಾಗಿಲ್ಲ. ಈಗ ಉಳಿತಾಯಕ್ಕೆ ಸಾವಿರಾರು ದಾರಿಗಳಿವೆ. ಎಲ್ಲವೂ ಸುರಕ್ಷಿತವಲ್ಲದಿದ್ದರೂ ಸುರಕ್ಷಿತ ಯೋಜನೆಗಳಲ್ಲೂ ವೈವಿಧ್ಯಮಯ ಯೋಜನೆಗಳಿವೆ. ಪ್ರತಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಉಳಿತಾಯದ ಹತ್ತಾರು ಯೋಜನೆಗಳನ್ನು ಹೊಂದಿರುತ್ತವೆ. ನೂರಾರು ವಿಮಾ ಕಂಪನಿಗಳಿವೆ. ಅಂಚೆ ಕಚೇರಿಗಳಿವೆ. ಮ್ಯೂಚುವಲ್ ಫಂಡ್‌ಗಳಿವೆ. ಸಹಕಾರಿ ಸಂಘಗಳಿವೆ. ಪಿಪಿಎಫ್, ಎನ್‌ಪಿಎಸ್‌ನಂತಹ ಯೋಜನೆಗಳಿವೆ. ಶೇರು ಮಾರುಕಟ್ಟೆ ಇದೆ. ನಿಮ್ಮ ನಿಮ್ಮ ಆಧ್ಯತೆ, ಅವಶ್ಯಕತೆ, ಭವಿಷ್ಯದ ಯೋಜನೆಗಳು, ಉಳಿತಾಯದ ಅವಧಿ, ಉಳಿತಾಯದ ಉದ್ಧೇಶ ಮೊದಲಾದವುಗಳನ್ನು ಆಧರಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ದುಡುಕಿ ಹಣ ಕಳೆದುಕೊಳ್ಳಬೇಡಿ.

ಪ್ರತಿಕ್ರಿಯೆಗಳಿಗೆ ಸ್ವಾಗತ – 8197712235

  [email protected]

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button