Cancer Hospital 2
Beereshwara 36
LaxmiTai 5

ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ – ಡಾ.ಪರಮೇಶ್ವರ

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಿಜೆಪಿಯವರು ಸರಕಾರ ನಡೆಸುವಾಗ ಪೊಲೀಸ್ ಮೇಲೆ ನಂಬಿಕೆ ಇತ್ತು. ಒಂದೂವರೆ ತಿಂಗಳಲ್ಲಿ ಅದು ಬದಲಾಗಿ ಬಿಡುತ್ತಾ? ಇಂಥ ಕ್ಷುಲ್ಲಕವಾದ ರಾಜಕೀಯವನ್ನು ಇಂಥ ಕೊಲೆ ಪ್ರಕರಣದಲ್ಲಿ ಮಾಡಬಾರದು. ಜೈನ ಮುನಿಗಳ ಕೊಲೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಸೋಮವಾರ ನಗರದ ಹೊರವಲಯದಲ್ಲಿರುವ ಹಲಗಾ ಜೈನ ಬಸದಿಗೆ ಭೇಡಿ ನೀಡಿ, ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಲ್ಲಿ ಬಿಜೆಪಿಯವರು ರಾಜಕಾರಣ ಮಾಡುವುದು ಸರಿಯಲ್ಲ. ಇದು ಗಂಭೀರವಾದ ಪ್ರಕರಣ. ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಅದು ಪೊಲೀಸ್ ಸಾಮರ್ಥ್ಯ ತೋರಿಸುತ್ತದೆ. ಇಂಥ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿ ಕಾಣಿಸುವುದಿಲ್ಲ. ಎಲ್ಲದರಲ್ಲಿಯೂ ರಾಜಕೀಯ ಮಾಡುವುದು ಸರಿ ಕಾಣಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ತನಿಖೆ ಈಗ ತಾನೆ ಪ್ರಾರಂಭವಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸರಕಾರಕ್ಕೆ ವರದಿ ಕೊಟ್ಟ ಮೇಲೆ ಪ್ರತಿಕ್ರಿಯೆ ನೀಡುವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜೈನ ಸಮಾಜದವರಿಗೆ ಮನವಿ ಮಾಡಿಕೊಂಡಿದ್ದೇನೆ. ಸರಕಾರ ನಿಮ್ಮ ಜೊತೆಗೆ ಇದೆ. ಇದು ನಿಮ್ಮ ಸರಕಾರ. ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇರುತ್ತೇವೆ. ಆತಂಕ ಪಡುವ ಅಗತ್ಯ ಇಲ್ಲ. ಯಾವುದೇ ರೀತಿ ಈ ಪ್ರಕರಣದಲ್ಲಿ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ಬಗ್ಗೆ ದೇಶ ವಿದೇಶದಲ್ಲಿ ಖಂಡಿಸಿದ್ದಾರೆ. ಅವರಿಗೂ ಮನವಿ ಮಾಡಿಕೊಂಡಿದ್ದೇನೆ ಎಂದರು.

ಸರ್ವಜನಾಂಗದ ಶಾಂತಿಯ ತೋಟದ ನಾಡಿನಲ್ಲಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನಡೆಯಬಾರದಿತ್ತು. ಎಲ್ಲರಿಗೂ ಬಹಳ ನೋವಾಗಿದೆ. ಒಬ್ಬ ಸ್ವಾಮೀಜಿ, ಸಂತರು ಯಾವುದೇ ಆಪೇಕ್ಷೆಗಳಿಲ್ಲದೆ ಎಲ್ಲವನ್ನು ತ್ಯಾಗ ಮಾಡಿ ಜೀವನ ನಡೆಸುವವರಿಗೆ ಈ ರೀತಿಯ ಹತ್ಯೆಯಾಗಬಾರದು. ಆಗಿರುವ ಘಟನೆಗೆ ಪೊಲೀಸರು ತತಕ್ಷಣ ಆರೋಪಿಗಳನ್ನು ಬಂಧಿಸಿ ಈಗಾಗಲೇ ತನಿಖೆ ಪ್ರಾರಂಭ ಮಾಡಿದ್ದಾರೆ ಎಂದರು.

ಇಂಥ  ಸಂದರ್ಭದಲ್ಲಿ ಯಾವುದೇ ಭಾವನೆಗಳು, ಉದ್ರೇಕಗಳು ಆಗಬಾರದು. ಇದನ್ನು ಬಿಟ್ಟರೆ ಕಾನೂನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತದೆ. ಜೈನ ಸಮುದಾಯಕ್ಕಾಗಲಿ, ಬೇರೆ ಸಮುದಾಯದ ಸಾಧು, ಸಂತರಿಗೆ ಭರವಸೆ ಕೊಡುತ್ತೇನೆ. ಸರಕಾರ ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಎಲ್ಲ ರೀತಿಯ ರಕ್ಷಣೆಯನ್ನು ಸಾಧು, ಸಂತರಿಗೆ ಕೊಡುವ ಕರ್ತವ್ಯ ನಮ್ಮ ಸರಕಾರದ್ದು ಎಂದು ಅಭಯ ಹಸ್ತ ನೀಡಿದರು.

ಹುಬ್ಬಳ್ಳಿಯಲ್ಲಿ ಜೈನ್ ಮುನಿಗಳು ನಮಗೆ ಮನವಿ ಮಾಡಿದ್ದಾರೆ. ಶಾಲಾ, ಕಾಲೇಜಿಗೆ ಪಾದಯಾತ್ರೆಯ ಮೂಲಕ ಹೋಗಿ ತಂಗುವಂತ ಸಂದರ್ಭದಲ್ಲಿ ಅಲ್ಲಿ ಅವರಿಗೆ ಅವಕಾಶ ಮಾಡಿಕೊಡಬೇಕು. ಆ ಸಂದರ್ಭದಲ್ಲಿ ಪೊಲೀಸ್ ಭದ್ರತೆ ನೀಡಬೇಕು. ಜೈನ ಸಮಾಜಕ್ಕೆ ನಿಗಮ ಮಂಡಳಿ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಅವರಿಗೆ ಸರಕಾರದ ಪರವಾಗಿ ಭರವಸೆ ನೀಡಿದ್ದೇನೆ ಎಂದರು.

ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮಕ್ಕೆ ಎಡಿಜಿಪಿ ಹಿತೇಂದ್ರ ಅವರನ್ನು ಕಳುಹಿಸಿ ಈಗಾಗಲೇ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈಗ ನಾನೇ ಖುದ್ದಾಗಿ ಹೋಗಿ ಸ್ಥಳಕ್ಕೆ ಭೇಟಿ ನೀಡಿ ಬರುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಅವರು ಹೇಳಿದ್ದಾರೆ. ಅದನ್ನು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಅದನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದರು.

Emergency Service

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜೈನ್ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಿಂದ ಜೈನ ಸಮುದಾಯದ ಜನರಲ್ಲಿ ರೋಷ ಬಂದಿದೆ. ಸಾಧು ಸಂತರಿಗೆ ಹೀಗಾದರೆ, ಮುಂದೆ ಹೇಗೆ ಎನ್ನುವ ಪ್ರಶ್ನೆ ಮೂಡುತ್ತಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಜೈನ ಮುನಿ ಬಾಲಾಚಾರ್ಯ ಮಹಾರಾಜರು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ಮನವಿ ಮಾಡಿಕೊಂಡರು.

ಪೊಲೀಸರು ಈ ಪ್ರಕರಣದಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಆರೋಪಿಗಳನ್ನು ಮೂರ‍್ನಾಲ್ಕು ತಾಸಿನಲ್ಲಿಯೇ ಬಂಧಿಸಿದ್ದಾರೆ. ಅವರಿಗೆ ಜೈನ ಸಮುದಾಯದಿಂದ ಅಭಿನಂದಿಸಲಾಗುವುದು ಎಂದರು.

ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಚಿನ್ನ ಕದ್ದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದರೆ ಮುಂದುವರೆಸುತ್ತೇವೆ. ಅದನ್ನು ಕೈ ಬಿಟ್ಟಿದ್ದರೆ ಮರು ಪರಿಶೀಲನೆ ಮಾಡುತ್ತೇವೆ. ಒಂದು ತನಿಖೆ ನಡೆಯುತ್ತಿದ್ದರೆ, ಆದಷ್ಟು ಶೀಘ್ರವಾಗಿ ಅದನ್ನು ಮುಗಿಸಲು ಸೂಚನೆ ನೀಡುತ್ತೇನೆ.

-ಡಾ. ಜಿ.ಪರಮೇಶ್ವರ, ಗೃಹ ಸಚಿವ

Bottom Add3
Bottom Ad 2