Wanted Tailor2
Cancer Hospital 2
Bottom Add. 3

ಬೆಳಗಾವಿ ಕಾಂಗ್ರೆಸ್ ಶಾಸಕರ ಮಧ್ಯೆ ಸಣ್ಣ ಸಮಸ್ಯೆ ಕೂಡ ಇಲ್ಲ – ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆಯಾಗಲಿ ಅಥವಾ ಬೇರೆ ಶಾಸಕರ ಮಧ್ಯೆಯಾಗಲಿ ಒಂದು ಸಣ್ಣ ಸಮಸ್ಯೆ ಕೂಡ ಇಲ್ಲ. ಬಹಳಷ್ಟು ಹೊಂದಾಣಿಕೆಯಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. 135 ಶಾಸಕರನ್ನುರಾಜ್ಯದ ಜನರು ಆರಿಸಿಕೊಟ್ಟಿದ್ದಾರೆ. ಸರಕಾರಕ್ಕೆ ಒಳ್ಳೆಯ ಹೆಸರು ತರಲು ನಾವೆಲ್ಲ ಸೇರಿ ಕೆಲಸ ಮಾಡುತ್ತಿದ್ದೇವೆ. ಎಲ್ಲಿಯೂ ನಮ್ಮ ಮಧ್ಯೆ ಹೊಂದಾಣಿಕೆ ಕೊರತೆ ಇಲ್ಲ ಎಂದು ಅವರು ತಿಳಿಸಿದರು.

ಎಲ್ಲರೂ ಸೇರಿ ಮೈಸೂರಿಗೆ ಹೋಗೋಣ ಎಂದು ಸತೀಶ್ ಜಾರಕಿಹೊಳಿ ನನಗೂ ಹೇಳಿದ್ದರು. ಬೆಳಗಾವಿಯ ಎಲ್ಲ ಶಾಸಕರೂ ಸೇರಿ ಮೈಸೂರಿಗೆ ಹೋಗೋದಿತ್ತು. ನಮ್ಮ ಜಿಲ್ಲೆಯಿಂದ ಎಲ್ಲ ಶಾಸಕರು ಒಟ್ಟಾಗಿ ಹೋಗುವುದಿತ್ತು. ನಾನೇ ರಾಜು ಕಾಗೆ, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಮಹೇಂದ್ರ ತಮ್ಮಣ್ಣವರ್ ಎಲ್ಲರ ಜೊತೆ ಮಾತನಾಡಿದ್ದೆ. ಎಲ್ಲರೂ ಸೇರಿಕೊಂಡು ಹೋಗೋಣ ಎಂದು ಮಾತಾಡಿಕೊಂಡಿದ್ದೆವು. ಇದರಲ್ಲಿ ವಿಶೇಷವೇನೂ ಇರಲಿಲ್ಲ ಎಂದು ಹೆಬ್ಬಾಳಕರ್ ತಿಳಿಸಿದರು.

ಎಲ್ಲರೂ ಸೇರಿ ಹೋಗೋದಾಗಿದ್ದರೆ ಬಂಡಾಯ ಎಂದು ಏಕೆ ಸುದ್ದಿಯಾಯಿತು ಎನ್ನುವ ಪ್ರಶ್ನೆಗೆ, ಅದನ್ನು ನೀವು ಹೇಳುತ್ತಿದ್ದೀರಿ. ನಾವ್ಯಾರೂ ಹೇಳುತ್ತಿಲ್ಲ. ನಮ್ಮ ಶಾಸಕರ್ಯಾರೂ ಹೇಳುತ್ತಿಲ್ಲ ಎಂದು ಹೇಳಿದರು.

ಮೌನವಾಗಿದ್ದೇನೆ ಎಂದರೆ ಅದು ದೌರ್ಬಲ್ಯ ಅಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ, ಅದು ನಿಜ ಯಾರೇ ಆದರೂ ಮೌನವಾಗಿದ್ದಾರೆ ಎಂದು ಅದು ಅವರ ದೌರ್ಬಲ್ಯವಾಗುವುದಿಲ್ಲ. ನಾನೂ ಮೌನವಾಗಿದ್ದೇನೆ ಎಂದರೆ ಅದು ನನ್ನ ವೀಕ್ ನೆಸ್ ಅಲ್ಲ. ಸತೀಶ್ ಜಾರಕಿಹೊಳಿ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ನಾನೂ ಸಂಘಟನೆಯಿಂದ ಬಂದಿದ್ದೇನೆ. ಪಕ್ಷದ ಅಧ್ಯಕ್ಷರು ಬಂದಾಗ ಸ್ಥಳೀಯವಾಗಿದ್ದರೆ ಹೋಗಿ ಸ್ವಾಗತಿಸಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆದಿನ ಡಿ.ಕೆ.ಶಿವಕುಮಾರ ಅವರು ಬರುವುದು ಕೊನೆಯ ಕ್ಷಣದಲ್ಲಿ ನಿಗದಿಯಾಗಿತ್ತು. ಎಲ್ಲರೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಮೊದಲೇ ತೊಡಗಿಸಿಕೊಂಡಿದ್ದರು. ನಾನು ಕೂಡ ಮೊದಲೇ ತಿಳಿಸಿದ್ದೆ. ಸತೀಶ್ ಜಾರಕಿಹೊಳಿ ಸಹ ಬೆಂಗಳೂರಿನಲ್ಲಿದ್ದರು ಎಂದು ಹೆಬ್ಬಾಳಕರ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಇದ್ದರು.

Bottom Add3
Bottom Ad 2

You cannot copy content of this page