ಈ ಫೋಟೋಗಳೇ ಹೇಳುತ್ತವೆ ಎಲ್ಲ ಕಥೆಗಳನ್ನು…
ಸಂತೋಷ ರಾ ಬಡಕಂಬಿ, ಅಥಣಿ-
ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು ೨೪ ಗ್ರಾಮಗಳಲ್ಲಿ ಪ್ರವಾಹದ ನೀರಿನ ರಭಸಕ್ಕೆ ನೂರಾರು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಅನೇಕ ಟ್ರಾನ್ಸ್ ಫಾರ್ಮರ್ ಗಳು ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತವಾದ ಪರಿಣಾಮ ನದಿ ತೀರದ ಸಂತ್ರಸ್ಥರು ಈಗ ಕತ್ತಲೆಯಲ್ಲಿಯೇ ಬದುಕು ಕಳೆಯಬೇಕಾಗಿದೆ.
ಸೀಮೆ ಎಣ್ಣೆ, ಮೇಣದ ಬತ್ತಿ ಹಚ್ಚಿಕೊಂಡು ರಾತ್ರಿ ಕಳೆಯುವ ಜನರು ತಮ್ಮ ಮೊಬೈಲ್ ಚಾರ್ಜ ಮಾಡಲು ಅಕ್ಕಪಕ್ಕದ ಗ್ರಾಮಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿನ ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ರಾತ್ರಿ ವೇಳೆ ಜನರು ತಿರುಗಾಡುವ ಪರಿಸ್ಥಿತಿಯಿಲ್ಲ. ರಸ್ತೆಗಳ ಬದಿಗೆ ನೀರಿನಲ್ಲಿ ನೆನೆದ ದವಸ ಧಾನ್ಯಗಳನ್ನು ಹಾಕಿರುವುದರಿಂದ ಗಬ್ಬು ವಾಸನೆ ಬರುತ್ತಿದ್ದು, ಇದರಿಂದ ಅನೇಕ ಕಾಯಿಲೆಗಳ ಭೀತಿ ಕೂಡಾ ಜನರನ್ನು ಕಾಡುತ್ತಿದೆ.
ದೀಪದ ಬೆಳಕಿನಲ್ಲಿ ಮನೆಗೆಲಸ ಮಾಡುವುದು ಕಷ್ಟವಾಗುತ್ತಿದೆ. ಮೊದಲೇ ಹಾವು ಚೇಳುಗಳ ಕಾಟವಿದೆ. ಮಕ್ಕಳು ಮೇಣದ ಬತ್ತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕವನ್ನು ತುರ್ತಾಗಿ ನೀಡಬೇಕಾದ ಅಗತ್ಯವಿದೆ ಎನ್ನುತ್ತಾರೆ ಸತ್ತಿ ಗ್ರಾಮದ ಮಹಿಳೆಯರು.
ರೈತ ಮುಖಂಡ ಮಹಾದೇವ ಮಡಿವಾಡ ಪ್ರಗತಿವಾಹಿನಿಯೊಂದಿಗೆ ಮಾತನಾಡಿ, ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಜನರಿಗೆ ನೀರು ಕೂಡಾ ಸರಿಯಾಗಿ ಸಿಗುತ್ತಿಲ್ಲ, ಅನೇಕ ರೈತರ ಪಂಪಸೇಟ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇನ್ನೂ ಕೆಲವು ಪಂಪಸೇಟ್ ಗಳು ನೀರಿನಲ್ಲಿ ಮುಳುಗಿ ರಿಪೇರಿ ಸ್ಥಿತಿಯಲ್ಲಿವೆ. ಹೆಸ್ಕಾಂ ಅಧಿಕಾರಿಗಳು ಕೂಡ ಹಾಳಾಗಿರುವ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು, ಕೆಲಸ ವಿಳಂಬವಾಗದೇ ಶೀಘ್ರಗತಿಯಲ್ಲಿ ಆಗಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
20.50 ಕೋಟಿ ರೂ. ಮೌಲ್ಯದ ಹೆಸ್ಕಾಂ ಆಸ್ತಿ ಹಾಳು
ಪ್ರವಾಹ ನೀರಿನಿಂದ ಅಥಣಿ ತಾಲೂಕಿನ ೨೪ ಗ್ರಾಮಗಳಲ್ಲಿ ೧,೨೭೬ ಟ್ರಾನ್ಸಫಾರ್ಮರ್ ಗಳು, ೧೯೩೦ ಕಂಬಗಳು ಮತ್ತು ಸುಮಾರು ೯೭ ಕಿ.ಮೀ ನಷ್ಟು ತಂತಿ ಹಾಳಾಗಿದೆ. ಇವುಗಳ ಮೌಲ್ಯ ಅಂದಾಜು ೨೦ ಕೋಟಿ ೫೦ ಲಕ್ಷ ರೂ. ಈಗಾಗಲೇ ೨೬ ಗ್ರಾಮಗಳಲ್ಲಿ ಸರ್ವೆ ನಡೆಸಿ ಅಗತ್ಯ ಸಾಮಗ್ರಿಗಳನ್ನು ತಂದು ದುರಸ್ಥಿ ಮಾಡಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಪರ‍್ಯಾಯ ವ್ಯವಸ್ಥೆ ಮೂಲಕ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಧ್ಯ ಜನವಾಡ, ನದಿ ಇಂಗಳಗಾಂವ, ಸಪ್ತಸಾಗರ, ತೀರ್ಥ, ಶೇಗುಣಸಿ, ಕುಸನಾಳ ಮತ್ತು ಮಳವಾಡ ಗ್ರಾಮಗಳಲ್ಲಿ ದುರಸ್ಥಿ ಮಾಡಲಾಗುತ್ತಿದೆ. ಮೂರು ಅಥವಾ ನಾಲ್ಕು ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು.
–ಶೇಖರ ಬಹುರೂಪಿ (ಕಾರ್ಯನಿರ್ವಾಹಕ ಅಭಿಯಂತರರು, ಹೆಸ್ಕಾಂ ವಿಭಾಗ ಅಥಣಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ